ಗಾಯಕ, ಸಂಗೀತ ನಿರ್ದೇಶಕ ಬಪ್ಪಿ ಲಹಿರಿ ನಿಧನ

Update: 2022-02-16 03:16 GMT
Photo: facebook.com/bappilahiri

ಹೊಸದಿಲ್ಲಿ: ದೇಶದಲ್ಲಿ ಡಿಸ್ಕೊ ಸಂಗೀತವನ್ನು 1980 ಮತ್ತು 1990ರ ದಶಕದಲ್ಲಿ ಜನಪ್ರಿಯಗೊಳಿಸಿದ್ದ ಖ್ಯಾತ ಸಂಗೀತ ನಿರ್ದೇಶಕ ಮತ್ತು ಗಾಯಕ ಬಪ್ಪಿ ಲಹಿರಿ ಮುಂಬೈನ ಕೃತಿಕೇರ್ ಆಸ್ಪತ್ರೆಯಲ್ಲಿ ಇಂದು ನಿಧನರಾದರು. ಅವರಿಗೆ 69 ವರ್ಷ ವಯಸ್ಸಾಗಿತ್ತು.

"ಕಳೆದ ವಾರ ಆಸ್ಪತ್ರೆಗೆ ದಾಖಲಾಗಿದ್ದ ಬಪ್ಪಿ ಲಹಿರಿಯವರನ್ನು ಸೋಮವಾರ ಬಿಡುಗಡೆ ಮಾಡಲಾಗಿತ್ತು. ಆದರೆ ಮಂಗಳವಾರ ಅವರ ಆರೋಗ್ಯದಲ್ಲಿ ಏರುಪೇರಾಗಿದ್ದು, ಅವರ ಕುಟುಂಬದವರು ಮನೆಗೆ ವೈದ್ಯರನ್ನು ಕರೆಸಿದರು. ಬಳಿಕ ಅವರನ್ನು ಆಸ್ಪತ್ರೆಗೆ ಕರೆದೊಯ್ಯಲಾಯಿತು. ಅವರಿಗೆ ಹಲವು ಆರೋಗ್ಯ ಸಮಸ್ಯೆಗಳಿದ್ದವು. ಅವರು ಓಎಸ್‍ಎ (ಅಬ್‍ಸ್ಟ್ರಕ್ಟಿವ್ ಸ್ಲೀಪ್ ಅಪ್ನೇಯಾ)ದಿಂದ ಮಧ್ಯರಾತ್ರಿ ವೇಳೆ ಅವರು ಕೊನೆಯುಸಿರೆಳೆದರು" ಎಂದು ಆಸ್ಪತ್ರೆಯ ನಿರ್ದೇಶಕ ಡಾ.ದೀಪಕ್ ನಮ್‍ಜೋಶಿ ಹೇಳಿದರು.

1970ರ ದಶಕದ ಕೊನೆ ಹಾಗೂ 1980ರ ದಶಕದಲ್ಲಿ ಅವರು 'ಚಲ್ತೆ ಚಲ್ತೆ', 'ಡಿಸ್ಕೊ ಡ್ಯಾನ್ಸರ್', 'ಶರಾಬಿ'ಯಂಥ ಹಲವು ಚಿತ್ರಗಳಲ್ಲಿ ಜನಪ್ರಿಯ ಹಾಡುಗಳ ಮೂಲಕ ಗಮನ ಸೆಳೆದಿದ್ದರು. ಬಾಘಿ-3 ಚಿತ್ರದಲ್ಲಿನ ಭನ್ಕಾಸ್ ಅವರ ಕೊನೆಯ ಬಾಲಿವುಡ್ ಚಿತ್ರಗೀತೆಯಾಗಿದೆ.

ಸಲ್ಮಾನ್ ಖಾನ್ ಅವರ ಜತೆಗೆ ಇತ್ತೀಚೆಗೆ ಬಿಗ್ ಬಾಸ್ 15ನಲ್ಲಿ ಅವರು ಪರದೆ ಮೇಲೆ ಕಾಣಿಸಿಕೊಂಡಿದ್ದೇ ಅವರ ಕೊನೆಯ ಪ್ರದರ್ಶನ. ಇಲ್ಲಿ ಅವರು ತಮ್ಮ ಮೊಮ್ಮಗ ಸಾತ್ವಿಕ್‍ನ ಹೊಸ ಹಾಡು 'ಬಚ್ಚಾ ಪಾರ್ಟಿ'ಗೆ ಹಿನ್ನೆಲೆ ಸಂಗೀತ ನೀಡಿದ್ದರು.

ಕಳೆದ ವರ್ಷ ಕೋವಿಡ್ ಪಾಸಿಟಿವ್ ಹಿನ್ನೆಲೆಯಲ್ಲಿ ಅವರನ್ನು ಮುಂಬೈನ ಬ್ರೀಚ್ ಕ್ಯಾಂಡಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಕೆಲ ದಿನಗಳ ಬಳಿಕ ಅವರು ಗುಣಮುಖರಾಗಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News