ಹಿಜಾಬ್ ನಿಷೇಧದಿಂದ ಸಂವಿಧಾನಾತ್ಮಕ ಹಕ್ಕುಗಳ ಉಲ್ಲಂಘನೆ: ಜಿಫ್ರಿ ಮುತ್ತುಕೋಯ ತಂಙಳ್‌

Update: 2022-02-16 05:00 GMT

ಕೋಝಿಕ್ಕೋಡ್: ಕರ್ನಾಟಕದ ಶಿಕ್ಷಣ ಸಂಸ್ಥೆಗಳಲ್ಲಿ ಹಿಜಾಬ್ ಧರಿಸುವುದಕ್ಕೆ ಹೇರಿರುವ ನಿರ್ಬಂಧ, ಸಂವಿಧಾನ ಖಾತರಿಪಡಿಸಿದ ಹಕ್ಕುಗಳ ಸ್ಪಷ್ಟ ಉಲ್ಲಂಘನೆಯಾಗುತ್ತದೆ ಎಂದು ಕೇರಳದ ಸುನ್ನಿ ಪಂಡಿತರು ಮತ್ತು ಧರ್ಮಗುರುಗಳ ಸಂಘಟನೆಯಾದ ಸಮಸ್ತ ಕೇರಳ ಜಂಇಯ್ಯತುಲ್‌ ಉಲಮಾ ಅಭಿಪ್ರಾಯಪಟ್ಟಿದೆ.

ಸಮಸ್ತದ ಪ್ರವಾಸಿ ಘಟಕದ ಸಭೆಯಲ್ಲಿ ಮಾತನಾಡಿದ ಸಮಸ್ತ ಅಧ್ಯಕ್ಷ ಸೈಯದ್ ಜಿಫ್ರಿ ಮುತ್ತುಕೋಯ ತಂಙಳ್, "ಕರ್ನಾಟಕದಲ್ಲಿ ಹೇರಿರುವ ಹಿಜಾಬ್ ನಿರ್ಬಂಧ ಮತ್ತು ಮಹಿಳೆಯರ ವಿವಾಹ ವಯಸ್ಸನ್ನು ಕನಿಷ್ಠ 21 ವರ್ಷಕ್ಕೆ ಹೆಚ್ಚಿಸಿರುವ ಕ್ರಮ, ನಮ್ಮ ಸಂವಿಧಾನ ಖಾತರಿಪಡಿಸಿದ ಹಕ್ಕುಗಳನ್ನು ಮೊಟಕುಗೊಳಿಸುತ್ತದೆ" ಎಂದು ಆಪಾದಿಸಿದರು ಎಂದು timesofindia ವರದಿ ಮಾಡಿದೆ.

ಮಹಿಳೆಯರು ತಮ್ಮ ದೇಹದ ಕೆಲ ನಿರ್ದಿಷ್ಟ ಭಾಗಗಳನ್ನು ಕಡ್ಡಾಯವಾಗಿ ಮುಚ್ಚಿಕೊಳ್ಳುವಂತೆ ಇಸ್ಲಾಂ ಹೇಳಿದೆ. ಧರ್ಮದ ಪ್ರಕಾರ ಇದು ಅಗತ್ಯ ಎಂದು ಅವರು ಹೇಳಿದರು. "ಹಿಜಾಬ್ ನಿರ್ಬಂಧಿಸಿರುವುದು ಭಾರತದ ಸಂವಿಧಾನ ಖಾತರಿಪಡಿಸಿದ ಸ್ವಾತಂತ್ರ್ಯದ ಮೇಲಿನ ಆಕ್ರಮಣ. ಇಂಥ ನಡೆಯ ಮೂಲಕ ಮಹಿಳೆಯರ ಧಾರ್ಮಿಕ ಸ್ವಾತಂತ್ರ್ಯವನ್ನು ಕೂಡಾ ಕಡೆಗಣಿಸಿದಂತಾಗಿದೆ" ಎಂದರು.

"ಹಿಜಾಬ್ ಹೆಸರಿನಲ್ಲಿ ನಡೆಯುತ್ತಿರುವುದು ಅನಗತ್ಯ ವಿವಾದ. ಹಿಜಾಬ್ ಮೇಲೆ ನಿರ್ಬಂಧ ಮತ್ತು ಹೆಣ್ಣುಮಕ್ಕಳ ವಿವಾಹದ ವಯಸ್ಸನ್ನು 21 ವರ್ಷಕ್ಕೆ ಏರಿಸಿರುವುದು ಸಂವಿಧಾನ ಒಂದು ಸಮುದಾಯಕ್ಕೆ ನೀಡಿರುವ ಹಕ್ಕುಗಳನ್ನು ಮೊಟಕುಗೊಳಿಸುವ ಕ್ರಮ" ಎಂದು ಅಕ್ರೋಶ ವ್ಯಕ್ತಪಡಿಸಿದರು.
ವಿಸ್ಡಮ್ ಇಸ್ಲಾಮಿಕ್ ಸ್ಟೂಡೆಂಟ್ಸ್ ಆರ್ಗನೈಸೇಷನ್ ಕೂಡಾ ಹಿಜಾಬ್ ನಿರ್ಬಂಧಿಸಿರುವ ಕ್ರಮವನ್ನು ಖಂಡಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News