×
Ad

ಸೆಲ್ಫಿ ಕ್ಲಿಕ್ಕಿಸುತ್ತಿದ್ದ ವೇಳೆ ರೈಲಿನಡಿ ಸಿಲುಕಿ ನಾಲ್ವರು ಯುವಕರು ಬಲಿ

Update: 2022-02-16 11:57 IST

ಹೊಸದಿಲ್ಲಿ: ದಿಲ್ಲಿಯ ಹೊರವಲಯದಲ್ಲಿರುವ ಗುರುಗ್ರಾಮ್‌ನಲ್ಲಿ ನಿರ್ಮಾಣ ಹಂತದಲ್ಲಿರುವ ರೈಲ್ವೇ ಮೇಲ್ಸೇತುವೆ (ಒಆರ್ ಬಿ) ಬಳಿ ಸೆಲ್ಫಿ ತೆಗೆದುಕೊಳ್ಳುತ್ತಿದ್ದ ನಾಲ್ವರು ಯುವಕರು ರೈಲಿನಡಿ ಸಿಲುಕಿ ಸಾವನ್ನಪ್ಪಿದ್ದಾರೆ.

ಸರಕಾರಿ ರೈಲ್ವೆ ಪೊಲೀಸ್ (ಜಿಆರ್ ಪಿ) ಪ್ರಕಾರ ದಿಲ್ಲಿಯ ಸರಾಯ್ ರೋಹಿಲ್ಲಾದಿಂದ ಅಜ್ಮೀರ್‌ಗೆ ಹೋಗುವ ಜನ ಶತಾಬ್ದಿ ಎಕ್ಸ್‌ಪ್ರೆಸ್ ಗುರ್ಗಾಂವ್ ರೈಲು ನಿಲ್ದಾಣದಿಂದ ಬಸಾಯಿ ರೈಲು ನಿಲ್ದಾಣದ ಕಡೆಗೆ ಚಲಿಸುತ್ತಿದ್ದಾಗ ಮಂಗಳವಾರ ಸಂಜೆ 5 ಗಂಟೆ ಸುಮಾರಿಗೆ ಅಪಘಾತ ಸಂಭವಿಸಿದೆ.

18 ರಿಂದ 21 ವರ್ಷ ವಯಸ್ಸಿನ ನಾಲ್ವರು ಯುವಕರು ರೈಲು ಸಮೀಪಿಸುತ್ತಿದ್ದಾಗ ಹಳಿಯಲ್ಲಿ ಸೆಲ್ಫಿ ತೆಗೆದುಕೊಳ್ಳಲು ಆರಂಭಿಸಿದರು. ರೈಲು ಸಾಕಷ್ಟು ಸಮೀಪ ಬಂದರೂ ಯುವಕರು ಸೆಲ್ಫಿಯಲ್ಲಿ ರೈಲಿನ ಚಿತ್ರ ಬೇಕೆಂದು ಕದಲದೆ ಮುಗಿಬಿದ್ದರು. ರೈಲು ಅವರಿಗೆ ಢಿಕ್ಕಿ ಹೊಡೆದ ಪರಿಣಾಮವಾಗಿ ನಾಲ್ವರೂ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ರೈಲು ಚಾಲಕನಿಂದ ಮಾಹಿತಿ ಪಡೆದ ತಕ್ಷಣ ಜಿಆರ್‌ಪಿ ಪೊಲೀಸ್ ಠಾಣೆಯ ತಂಡವು ಸ್ಥಳಕ್ಕೆ ತಲುಪಿತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಮೃತರನ್ನು ದೇವಿಲಾಲ್ ಕಾಲೋನಿ ನಿವಾಸಿಗಳಾದ ಸಮೀರ್ (19), ಮುಹಮ್ಮದ್ ಅನಸ್ (20), ಯೂಸುಫ್ ಅಲಿಯಾಸ್ ಭೋಲಾ (21) ಹಾಗೂ  ಯುವರಾಜ್ ಗೋಗಿಯಾ (18) ಎಂದು ಗುರುತಿಸಲಾಗಿದೆ.

ಅವರಲ್ಲಿ ಒಬ್ಬ 9 ನೇ ತರಗತಿ ವಿದ್ಯಾರ್ಥಿಯಾಗಿದ್ದು, ಮತ್ತೊಬ್ಬ ಮೊಬೈಲ್ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News