×
Ad

ಮಹಾರಾಷ್ಟ್ರ: ರೋಗ ನಿರೋಧಕ ಲಸಿಕೆ ಹಾಕಿಸಿಕೊಂಡ 3 ದಿನಗಳಲ್ಲಿ ಶಿಶು ಸಾವು

Update: 2022-02-16 23:11 IST

ಪಾಲ್ಘರ್, ಫೆ. 16: ಮಹಾರಾಷ್ಟ್ರದ ಬುಡಕಟ್ಟು ಪ್ರಾಬಲ್ಯದ ಪಾಲ್ಘರ್ ಜಿಲ್ಲೆಯಲ್ಲಿ ಶಿಶುಗಳಿಗೆ ನಿಯಮಿತವಾಗಿ ನೀಡುವ ರೋಗ ನಿರೋಧ ಲಸಿಕೆ ನೀಡಿದ ಮೂರು ದಿನಗಳ ಬಳಿಕ 16 ತಿಂಗಳ ಗಂಡು ಶಿಶುವೊಂದು ಮೃತಪಟ್ಟಿದೆ. ಶಿಶುವಿನ ಸಾವಿನ ಹಿಂದಿನ ಖಚಿತ ಕಾರಣದ ಬಗ್ಗೆ ತನಿಖೆ ನಡೆಯುತ್ತಿದೆ ಎಂದು ವೈದ್ಯಕೀಯ ಅಧಿಕಾರಿ ಬುಧವಾರ ತಿಳಿಸಿದ್ದಾರೆ. ‌

ಶಿಶುವಿನ ಒಳಾಂಗದ ದ್ರವವನ್ನು ಪರೀಕ್ಷೆಗೆ ಮುಂಬೈಯ ಜೆ.ಜೆ. ಆಸ್ಪತ್ರೆಗೆ ಕಳುಹಿಸಿ ಕೊಡಲಾಗಿದೆ ಎಂದು ಮೊಖಾಡ ಪಟ್ಟಣಕ್ಕೆ ನಿಯೋಜಿಸಲಾಗಿರುವ ವೈದ್ಯಕೀಯ ಅಧಿಕಾರಿ ಡಾ. ಭಾವುಸಾಹೇಬ್ ಚತ್ತಾರ್ ತಿಳಿಸಿದ್ದಾರೆ. ಜೆ.ಜೆ. ಆಸ್ಪತ್ರೆಯ ವರದಿ ಸ್ವೀಕರಿಸಿದ ಬಳಿಕ ಮಾತ್ರವೇ ಶಿಶುವಿನ ಸಾವಿನ ಕಾರಣದ ಬಗ್ಗೆ ನಾವು ಪ್ರತಿಕ್ರಿಯೆ ನೀಡಬಹುದು ಎಂದು ಅವರು ಹೇಳಿದ್ದಾರೆ. ಶಿಶುವಿಗೆ ಫೆಬ್ರವರಿ 9ರಂದು ಡಿಪಿಟಿ, ಎಂಎಂಆರ್ ಹಾಗೂ (ಪಿಸಿವಿ) ಬೂಸ್ಟರ್ ಡೋಸ್ಗಳನ್ನು ನೀಡಲಾಗಿತ್ತು. 

ಅನಂತರ ಶಿಶುವಿನಲ್ಲಿ ಆರೋಗ್ಯ ಸಮಸ್ಯೆ ಕಂಡು ಬಂತು ಹಾಗೂ ಫೆಬ್ರವರಿ 12ರಂದು ಮೃತಪಟ್ಟಿತು’’ ಎಂದು ಅವರು ತಿಳಿಸಿದ್ದಾರೆ. ಈ ಬಗ್ಗೆ ರಾಜ್ಯ ಸರಕಾರದ ಉನ್ನತ ಅಧಿಕಾರಿಗಳಿಗೆ ವರದಿ ಮಾಡಿದ್ದೇವೆ. ಫೆಬ್ರವರಿ 9ರಂದು ನಿಯಮಿತವಾಗಿ ನೀಡುವ ರೋಗ ನಿರೋಧಕ ಲಸಿಕೆಯನ್ನು ನಾಲ್ವರು ಮಕ್ಕಳಿಗೆ ನೀಡಲಾಗಿತ್ತು. ಆದರೆ, ಯಾರೊಬ್ಬರಿಗೂ ಯಾವುದೇ ರೀತಿಯ ಆರೋಗ್ಯ ಸಮಸ್ಯೆಗಳು ತಲೆದೋರಿಲ್ಲ ಎಂದು ಚತ್ತಾರ್ ತಿಳಿಸಿದ್ದಾರೆ. ಈ ನಡುವೆ, ಲಸಿಕೆಯನ್ನು ತಪ್ಪಾಗಿ ನೀಡಿರುವ ಕಾರಣಕ್ಕೆ ಶಿಶು ಸಾವನ್ನಪ್ಪಿದೆ ಎಂದು ಮೃತಪಟ್ಟ ಶಿಶುವಿನ ಕುಟುಂಬ ಆರೋಪಿಸಿದೆ. 

ಕೋಶಿಮ್ಸೇಥ್ ಗ್ರಾಮದ ನಿವಾಸಿಯಾಗಿರುವ ಸರ್ವೇಶ್ ಧೋಡಿಗೆ ಸರಕಾರಿ ಆರೋಗ್ಯ ಕೇಂದ್ರದಲ್ಲಿ ಫೆಬ್ರವರಿ 10ರಂದು ದಾದಿ ಎಂಎಂಆರ್ ಹಾಗೂ ತ್ರಿವಳಿ ಪೋಲಿಯೊ ಬೂಸ್ಟರ್ ಡೋಸ್ ನೀಡಿದ್ದರು ಎಂದು ಮೂಲಗಳು ತಿಳಿಸಿವೆ. ಶಿಶುವಿಗೆ ಫೆಬ್ರವರಿ 11ರಂದು ತೀವ್ರ ಜ್ವರ ಕಾಣಿಸಿಕೊಂಡಿತ್ತು. ಅನಂತರ ಶಿಶುವನ್ನು ಗ್ರಾಮದಲ್ಲಿರುವ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಫೆಬ್ರವರಿ 12ರಂದು ಶಿಶುವಿನ ಆರೋಗ್ಯ ಸ್ಥಿತಿ ಹದಗೆಟ್ಟಿತು. ಕೂಡಲೇ ಶಿಶುವನ್ನು ಖೋಡಾಲ ಗ್ರಾಮೀಣ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಆದರೆ, ಶಿಶು ಸಾವನ್ನಪ್ಪಿದೆ ಎಂದು ವೈದ್ಯರು ಘೋಷಿಸಿದ್ದರು. ಆಕಸ್ಮಿಕ ಸಾವು ಪ್ರಕರಣ ದಾಖಲಿಸಲಾಗಿದೆ ಹಾಗೂ ಮುಂದಿನ ತನಿಖೆ ನಡೆಯುತ್ತಿದೆ ಎಂದು ಮೊಖಾಡ ಪೊಲೀಸ್ ಠಾಣೆಯ ಅಧಿಕಾರಿ ತಿಳಿಸಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News