ಭೂಗತ ಪಾತಕಿ ದಾವೂದ್ ಇಬ್ರಾಹಿಂ ಸೋದರನನ್ನು ಬಂಧಿಸಿದ ಈ.ಡಿ.

Update: 2022-02-18 17:01 GMT
ಈ.ಡಿ.

ಮುಂಬೈ,ಫೆ.18: ಅಕ್ರಮ ಹಣ ವರ್ಗಾವಣೆ ಪ್ರಕರಣವೊಂದಕ್ಕೆ ಸಂಬಂಧಿಸಿ ಭೂಗತ ಪಾತಕಿ ದಾವೂದ್ ಇಬ್ರಾಹಿಂ ಸೋದರ ಇಕ್ಬಾಲ್ ಕಾಸ್ಕರ್‌ನನ್ನು ಜಾರಿ ನಿರ್ದೇಶನಾಲಯವು ಶುಕ್ರವಾರ ಬಂಧಿಸಿದೆ.

ಹಫ್ತಾ ವಸೂಲಿಯ ಹಲವಾರು ಪ್ರಕರಣಗಳಿಗೆ ಸಂಬಂಧಿಸಿದಂತೆ ಈಗಾಗಲೇ ಥಾಣೆ ಜೈಲಿನಲ್ಲಿರುವ ಕಾಸ್ಕರ್ ವಿರುದ್ಧ ಈ.ಡಿ.ಇತ್ತೀಚಿಗೆ ಅಕ್ರಮ ಹಣ ವರ್ಗಾವಣೆ ಪ್ರಕರಣವನ್ನು ದಾಖಲಿಸಿಕೊಂಡಿತ್ತು. ದಾವೂದ್ ಇಬ್ರಾಹಿಂ ಮತ್ತು ಮುಂಬೈ ಭೂಗತ ಜಗತ್ತಿನೊಂದಿಗೆ ನಂಟು ಹೊಂದಿರುವವರೂ ಈ ಪ್ರಕರಣದಲ್ಲಿ ಆರೋಪಿಗಳಾಗಿದ್ದಾರೆ.

ಹೊಸ ಪ್ರಕರಣದಲ್ಲಿ ಈ.ಡಿ.ಕಾಸ್ಕರ್‌ನನ್ನು ತನ್ನ ವಶಕ್ಕೆ ತೆಗೆದುಕೊಂಡಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ವಿಶೇಷ ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆ (ಪಿಎಂಎಲ್‌ಎ) ನ್ಯಾಯಾಲಯವು ಫೆ.16ರಂದು ಕಾಸ್ಕರ್ ವಿರುದ್ಧ ಪ್ರೊಡಕ್ಷನ್ ವಾರಂಟ್ ಹೊರಡಿಸಿತ್ತು.

ಈ.ಡಿ.ಫೆ.15ರಂದು ಮುಂಬೈನಲ್ಲಿ ಅಕ್ರಮ ಆಸ್ತಿ ವ್ಯವಹಾರಗಳು ಮತ್ತು ಹವಾಲಾ ವಹಿವಾಟುಗಳಿಗೆ ಸಂಬಂಧಿಸಿದ ಕಾರ್ಯಾಚರಣೆಗಳ ಮೇಲೆ ದಾಳಿಗಳನ್ನು ನಡೆಸಿತ್ತು.

ದಾವೂದ್‌ನ ದಿವಂಗತ ಸೋದರಿ ಹಸೀನಾ ಪಾರ್ಕರ್,ಕಾಸ್ಕರ್ ಹಾಗೂ ಗ್ಯಾಂಗ್‌ಸ್ಟರ್ ಛೋಟಾ ಶಕೀಲ್‌ನ ಸಂಬಂಧಿ ಸಲೀಂ ಕುರೇಶಿ ಅಲಿಯಾಸ್ ಸಲೀಂ ಫ್ರುಟ್ ನಿವಾಸಗಳು ಸೇರಿದಂತೆ 10 ಕಡೆಗಳಲ್ಲಿ ಈ.ಡಿ.ಶೋಧ ಕಾರ್ಯಾಚರಣೆಗಳನ್ನು ನಡೆಸಿತ್ತು. ದಾಳಿಗಳ ಬಳಿಕ ಈ.ಡಿ.ಕುರೇಶಿಯನ್ನು ವಿಚಾರಣೆಗೂ ಒಳಪಡಿಸಿತ್ತು.

ಈ.ಡಿ.ಪ್ರಕರಣವು ಅದರ ಸ್ವತಂತ್ರ ಗುಪ್ತಚರ ವರದಿ ಮತ್ತು ದಾವೂದ್ ಹಾಗೂ ಇತರರ ವಿರುದ್ಧ ಅಕ್ರಮ ಚಟುವಟಿಕೆಗಳ (ತಡೆ) ಕಾಯ್ದೆಯಡಿ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ)ಯು ಇತ್ತೀಚಿಗೆ ದಾಖಲಿಸಿರುವ ಎಫ್‌ಐಆರ್‌ನ್ನು ಆಧರಿಸಿದೆ.

ತನಿಖೆಯ ಅವಧಿಯಲ್ಲಿ ಮತ್ತು ದಾಳಿಗಳ ಬಳಿಕ ಈ.ಡಿ.ಮುಂಬೈ ಮತ್ತು ದುಬೈನಲ್ಲಿ ಕಾರ್ಯಾಚರಿಸುತ್ತಿರುವ ಭಾರತೀಯ ಉದ್ಯಮಿಗಳಿಗೆ ಸಂಬಂಧಿಸಿದ ಅಕ್ರಮ ಆಸ್ತಿ ವ್ಯವಹಾರಗಳಿಗೆ ಸಂಬಂಧಿಸಿದ ದಾಖಲೆಗಳನ್ನು ವಶಪಡಿಸಿಕೊಂಡಿದೆ ಎನ್ನಲಾಗಿದೆ. ಈ ವ್ಯವಹಾರಗಳೊಂದಿಗಿನ ಕೆಲವು ರಾಜಕೀಯ ಸಂಪರ್ಕಗಳ ಮೇಲೂ ಈ.ಡಿ.ನಿಗಾಯಿರಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News