ಹಿಜಾಬ್ ವಿವಾದದಿಂದ ಅಂತಾರಾಷ್ಟ್ರೀಯ ಮಟ್ಟದಲ್ಲಿ ʼಇಮೇಜ್‌ʼಗೆ ಧಕ್ಕೆ: ಬಿಜೆಪಿಯಲ್ಲಿ ತಳಮಳ

Update: 2022-02-19 13:40 GMT
Photo: Varthabharati.in/Nazeer Polya

ಹೊಸದಿಲ್ಲಿ: ಕರ್ನಾಟಕದಲ್ಲಿ ಸದ್ಯ ಸುದ್ದಿಯಲ್ಲಿರುವ ಹಿಜಾಬ್‌ ವಿವಾದದ ಬಗ್ಗೆ ಬಿಜೆಪಿ ರಾಷ್ಟ್ರ ಮಟ್ಟದ ನಾಯಕರಿಗೆ ಉತ್ಸಾಹವಿಲ್ಲ ಮಾತ್ರವಲ್ಲ, ಇದನ್ನೊಂದು ವಿವಾದವಾಗಿ ಮುಂದುವರಿಸಿಕೊಂಡು ಹೋಗಲೂ ರಾಷ್ಟ್ರೀಯ ಸಮಿತಿಗೆ ಆಸಕ್ತಿ ಇಲ್ಲ ಎಂದು ಬಿಜೆಪಿಯನ್ನು ಬಲ್ಲ ಮೂಲಗಳು ತಿಳಿಸಿರುವುದಾಗಿ Indian express ವರದಿ ಮಾಡಿದೆ. 

ಕರ್ನಾಟಕ ಸರ್ಕಾರ ಫೆಬ್ರವರಿ 5ರಂದು ಹಿಜಾಬ್‌ ನಿರ್ಬಂಧಿಸಿ ಹೊರಡಿಸಿದ್ದ ಆದೇಶವನ್ನು ಮಾರ್ಪಡಿಸುವ ಬಗ್ಗೆ ಚಿಂತಿಸುತ್ತಿದ್ದು, ಸದ್ಯ ಪ್ರಕರಣ ಹೈಕೋರ್ಟ್‌ನಲ್ಲಿರುವುದರಿಂದ ಸುಮ್ಮನಾಗಿದೆ ಎಂದು ವರದಿಯಾಗಿದೆ. ಉಡುಪಿಯಲ್ಲಿ ಶುರುವಾದ ಹಿಜಾಬ್‌ ವಿವಾದವನ್ನು ಕರ್ನಾಟಕ ಸರ್ಕಾರ ನಿಭಾಯಿಸಿದ ಬಗ್ಗೆ ಕೇಂದ್ರ ನಾಯಕತ್ವಕ್ಕೆ ತೀವ್ರ ಅಸಮಾಧಾನವಿದೆ ಎಂದು ಮೂಲಗಳನ್ನು ಉಲ್ಲೇಖಿಸಿ ವರದಿ ಹೇಳಿದೆ. 

ಆರು ಮಂದಿ ವಿದ್ಯಾರ್ಥಿನಿಯರ ಬೇಡಿಕೆಯನ್ನು ಹೈಕೋರ್ಟ್‌ ಮೆಟ್ಟಿಲೇರುವಂತೆ ಮಾಡಿ, ಅದು ರಾಷ್ಟ್ರೀಯ ರಾಜಕಾರಣದಲ್ಲಿ ಪರಿಣಾಮ ಬೀಳುವಂತೆ ಮಾಡಿ, ಅಂತರಾಷ್ಟ್ರೀಯವಾಗಿ ಸುದ್ದಿಯಾಗಿರುವುದು ಕೇಂದ್ರ ಬಿಜೆಪಿಗೆ ತೀವ್ರ ಮುಜುಗರಕ್ಕೆ ಕಾರಣವಾಗಿದೆ. ಇದನ್ನು ಸೂಕ್ಷ್ಮವಾಗಿ ಕರ್ನಾಟಕ ಸರ್ಕಾರ ನಿಭಾಯಿಸಬಹುದಿತ್ತು ಎಂಬ ಭಾವನೆ ರಾಷ್ಟ್ರೀಯ ನಾಯಕರಲ್ಲಿದೆ. 

ಅದಾಗ್ಯೂ, ಸಿಎಂ ಬಸವರಾಜ ಬೊಮ್ಮಾಯಿ ಅವರಿಗೆ ಬಿಜೆಪಿಯ ಕಾರ್ಯಕರ್ತರ ಮೇಲೆ, ಇತರೆ ಸದಸ್ಯರ ಮೇಲೆ ಹಿಡಿತ ಇಲ್ಲದಿರುವುದರಿಂದ ಈ ಪ್ರಕರಣದಲ್ಲಿ ಅವರನ್ನು ಟೀಕಿಸುವುದು ಅನ್ಯಾಯ. ಬಿಜೆಪಿ ರಾಜ್ಯ ಸಮಿತಿ ಈ ಬಗ್ಗೆ ಸ್ಪಷ್ಟ ನಿಲುವು ತಳೆಯಬೇಕಿತ್ತು ಎಂದು ಬೊಮ್ಮಾಯಿ ಆಪ್ತರೊಬ್ಬರು ತಿಳಿಸಿದ್ದಾರೆ. ಬಿಜೆಪಿಯಲ್ಲಿರುವ ಬಣ ರಾಜಕಾರಣದಿಂದಾಗಿ ಈ ಪ್ರಕರಣ ಈ ಮಟ್ಟಿನ ವಿವಾದಕ್ಕೆ ಕಾರಣವಾಗಿದೆ ಎಂಬ ವಿಶ್ಲೇಷಣೆಯೂ ಕೇಳಿ ಬರುತ್ತಿದೆ ಎಂದು ವರದಿ ಉಲ್ಲೇಖಿಸಿದೆ.
  
ರಾಷ್ಟ್ರೀಯ ಮಟ್ಟದಲ್ಲಿ ನೋಡುವುದಾದರೆ, ಹಿಜಾಬ್‌ ವಿವಾದವನ್ನು ಬಿಜೆಪಿಯ ಪ್ರಮುಖ ನಾಯಕರು ಎಳೆದುಕೊಂಡು ಹೋಗುವ ಉತ್ಸುಕತೆಯನ್ನು ತೋರುತ್ತಿಲ್ಲ. ಬದಲಾಗಿ ಪ್ರಧಾನಿ ನರೇಂದ್ರ ಮೋದಿಯೇ ಮುಸ್ಲಿಂ ಮಹಿಳೆಯರ ಹಕ್ಕುಗಳ ರಕ್ಷಣೆಯ ಬಗ್ಗೆ ಮಾತನಾಡಲು ತೊಡಗಿದ್ದಾರೆ. 

ʼಭೇಟಿ ಪಡಾವೋ-ಭೇಟಿ ಬಚಾವೋ, ತ್ರಿವಳಿ ತಲಾಕ್‌ ನಿಷೇಧ ಮೊದಲಾದವುಗಳನ್ನು ತಂದು ಮಹಿಳೆಯರ ಅದರಲ್ಲೂ ಮುಸ್ಲಿಂ ಮಹಿಳೆಯರ ಏಳಿಗೆಗೆ ಶ್ರಮಿಸುತ್ತಿದೆ ಎನ್ನುತ್ತಿರುವಾಗ ಒಂದು ತುಂಡು ಬಟ್ಟೆಗಾಗಿ ಮುಸ್ಲಿಂ ವಿದ್ಯಾರ್ಥಿನಿಯರ ಶಿಕ್ಷಣವನ್ನು ಕಸಿಯುವುದು ಬಿಜೆಪಿಗೆ ನಕರಾತ್ಮಕ ಪರಿಣಾಮ ಬೀರಲಿದೆ ಎಂದು ಕೇಂದ್ರ ಸಚಿವರೊಬ್ಬರು ಹೇಳಿರುವುದಾಗಿ Indianexpress.com ವರದಿಯಲ್ಲಿ ಹೇಳಿದೆ.

ಲೋಕಸಭೆಯಲ್ಲಿ ಪ್ರತಿಪಕ್ಷಗಳ ನಾಯಕರು ಹಿಜಾಬ್‌ ವಿವಾದವನ್ನು ಮುಂದಿಟ್ಟು ಆಡಳಿತ ಪಕ್ಷವನ್ನು ತರಾಟೆಗೆ ತೆಗೆಯುವಾಗಲೂ ಕೋಲಾರದ ಸಂಸದ ಎಸ್‌. ಮುನಿಸ್ವಾಮಿ ಅವರನ್ನು ಬಿಟ್ಟರೆ ಉಳಿದ ಯಾವ ಬಿಜೆಪಿ ಸಂಸದರೂ ಕರ್ನಾಟಕದ ಸರ್ಕಾರವನ್ನು ಸಮರ್ಥಿಸಿಕೊಂಡಿಲ್ಲ. ಸದಾ ವಿವಾದಾತ್ಮಕ ಹೇಳಿಕೆ ನೀಡುವ ಬೆಂಗಳೂರು ದಕ್ಷಿಣ ಸಂಸದ ತೇಜಸ್ವಿ ಸೂರ್ಯ ಕೂಡಾ ಈ ವಿಚಾರದಲ್ಲಿ ಸಾಕಷ್ಟು ಮೌನವಹಿಸಿರುವುದು ಗಮನಿಸಬಹುದು. 

ಎನ್‌ಡಿಎ ನೇತೃತ್ವದ ಬಿಹಾರ ಮುಖ್ಯಮಂತ್ರಿ ನಿತೀಶ್‌ ಕುಮಾರ್‌ ಹಿಜಾಬ್‌ ವಿಚಾರಕ್ಕೆ ಮುಸ್ಲಿಂ ವಿದ್ಯಾರ್ಥಿನಿಯರ ಶಿಕ್ಷಣ ಹಕ್ಕು ನಿರಾಕರಿಸಲಾಗುವುದಿಲ್ಲ, ಹಿಜಾಬ್‌ ಇಲ್ಲಿ ಒಂದು ವಿವಾದವಲ್ಲ ಎಂದು ಹೇಳಿದ್ದು, ತ್ರಿಪುರಾ, ಹಿಮಾಚಲ ಪ್ರದೇಶ, ಮಧ್ಯ ಪ್ರದೇಶ ಮೊದಲಾದ ಬಿಜೆಪಿ ಅಥವಾ ಅದರ ಮಿತ್ರಪಕ್ಷಗಳು ಆಡಳಿತ ಇರುವ ರಾಜ್ಯದಲ್ಲೂ ಈ ವಿವಾದ ಮುಂದುವರೆಸಲು ಆಸಕ್ತಿ ವಹಿಸದಿರುವುದು ಸದ್ಯದ ಹಿಜಾಬ್‌ ಪ್ರಕರಣದಲ್ಲಿ ಬಿಜೆಪಿಗೆ ರಾಷ್ಟ್ರಮಟ್ಟದಲ್ಲಿ ಒಂದೇ ಅಜೆಂಡಾ ಇಲ್ಲ ಎನ್ನುವುದನ್ನು ಸೂಚಿಸುತ್ತದೆ ಎಂದು ವಿಶ್ಲೇಷಿಸಲಾಗಿದೆ. 

ಭಾರತದಲ್ಲಿ ಅಲ್ಪಸಂಖ್ಯಾತರ ಮೇಲೆ ಅದರಲ್ಲೂ ಮುಸ್ಲಿಮರ ಮೇಲೆ ಧಾರ್ಮಿಕ ಕಾರಣಕ್ಕೆ ತಾರತಮ್ಯ ನಡೆಸಲಾಗುತ್ತಿದೆ ಎಂದು ಪ್ರಧಾನಿ ಮೋದಿ ವಿರುದ್ಧ ಅಂತರಾಷ್ಟ್ರೀಯ ಮಟ್ಟದ ಟೀಕೆಗಳು ಬರುತ್ತಿರುವ ಹಿನ್ನೆಲೆಯಲ್ಲಿ, ತ್ರಿವಳಿ ತಲಾಖ್‌ ಮೊದಲಾದ ನಿರ್ಧಾರಗಳ ಮೂಲಕ ನರೇಂದ್ರ ಮೋದಿ ಅವರು ಮುಸ್ಲಿಂ ಮಹಿಳೆಯರ ರಕ್ಷಣೆಯ ಬಗ್ಗೆ ಮಾತಾಡುತ್ತಿದ್ದಾರೆ.

ಇಂತಹ ಸಂಧರ್ಭದಲ್ಲಿ ಸಾರ್ವಜನಿಕವಾಗಿ ಮುಸ್ಲಿಂ ಮಹಿಳೆಯರ  ಹಿಜಾಬ್‌ ಅನ್ನು ಕಳಚಿಸುವುದು, ತರಗತಿಗಳಿಗೆ ಪ್ರವೇಶ ನೀಡದೆ ರಸ್ತೆಯಲ್ಲೇ ಕೂರಿಸುವುದು ಹಾಗೂ ಒಂಟಿ ವಿದ್ಯಾರ್ಥಿನಿಯ ಮೇಲೆ ನೂರಾರು ಕೇಸರಿ ಧಾರಿ ಹುಡುಗರು ಮುಗಿ ಬೀಳುವಂತಹ ದೃಶ್ಯಗಳು ಗಂಭೀರವಾಗಿ ನಕರಾತ್ಮಕ ಪರಿಣಾಮ ಬೀರುತ್ತದೆ ಎಂದು ಬಿಜೆಪಿ ಕೇಂದ್ರ ಸಚಿವರೊಬ್ಬರು ಹೇಳಿದ್ದಾರೆ. 

ಈ ಎಲ್ಲಾ ಹಿನ್ನೆಲೆಯಲ್ಲಿ ಕರ್ನಾಟಕ ಹಿಜಾಬ್‌ ವಿವಾದವನ್ನು ಬಗೆಹರಿಸಬೇಕೆಂದು ರಾಷ್ಟ್ರ ಬಿಜೆಪಿಯು ಚಿಂತನೆ ನಡೆಸಿದೆ. ರಾಷ್ಟ್ರ ನಾಯಕತ್ವವು ಈ ವಿಚಾರದಲ್ಲಿ ಒಂದು ನಿಷ್ಟುರ ನಿಲುವನ್ನು ತಳೆಯದೆ, ಮಧ್ಯಮ ಮಾರ್ಗವನ್ನು ತಳೆಯುವ ಸಾಧ್ಯತೆಯನ್ನು ಬಿಜೆಪಿ ನಾಯಕರೊಬ್ಬರು ತಿಳಿಸಿದ್ದಾರೆ. ಸಮವಸ್ತ್ರದ ಬಣ್ಣದ ವಸ್ತ್ರವನ್ನೇ ತಲೆಗೆ ಹೊದ್ದುಕೊಳ್ಳಲು ಅವಕಾಶ ನೀಡಲು ರಾಜ್ಯ ಸರ್ಕಾರಕ್ಕೆ ಸೂಚಿಸಿದೆ ಎನ್ನಲಾಗಿದೆ. ಸದ್ಯ, ಫೆಬ್ರವರಿ 5 ರ ಆದೇಶಕ್ಕೆ ಮಾರ್ಪಾಡು ತರಲು ತಯಾರಾಗಿರುವ ಕರ್ನಾಟಕ ರಾಜ್ಯ ಸರ್ಕಾರ ಹೈಕೋರ್ಟ್‌ ಅಂತಿಮ ತೀರ್ಪಿಗೆ ಕಾಯುತ್ತಿದೆ ಎಂದು ಮೂಲಗಳು ತಿಳಿಸಿದೆ.

ಕೃಪೆ: Indianexpress.com

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News