ಕೇರಳ: ದುಷ್ಕರ್ಮಿಗಳಿಂದ ಸಿಪಿಎಂ ಕಾರ್ಯಕರ್ತನ ಹತ್ಯೆ
ಕಣ್ಣೂರು: ಸಿಪಿಎಂ ಕಾರ್ಯಕರ್ತರೋರ್ವರನ್ನು ಮಾರಕಾಸ್ತ್ರಗಳಿಂದ ಕೊಚ್ಚಿಕೊಲೆಗೈದ ಘಟನೆ ಕಣ್ಣೂರಿನ ತಲಶ್ಯೇರಿ ಸಮೀಪದ ಪುನ್ನಾಳ್ ಎಂಬಲ್ಲಿ ಸೋಮವಾರ ಮುಂಜಾನೆ ನಡೆದಿದೆ.
ಸಿಪಿಎಂಕಾರ್ಯಕರ್ತ ಹರಿದಾಸನ್ ( 54) ಮೃತಪಟ್ಟವರು. ಕೃತ್ಯದ ಹಿಂದೆ ಆರೆಸ್ಸೆಸ್ - ಬಿಜೆಪಿ ಕೈವಾಡ ಇದೆ ಎಂದು ಸಿಪಿಎಂ ಆರೋಪಿಸಿದ್ದು, ತಲಶ್ಯೇರಿ ನಗರಸಭೆ ಹಾಗೂ ನ್ಯೂ ಮಾಹೆ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಇಂದು ಹರತಾಳಕ್ಕೆ ಕರೆ ನೀಡಿದೆ.
ಸಿಪಿಎಂನ ಸಕ್ರಿಯ ಕಾರ್ಯಕರ್ತರಾಗಿದ್ದ ಹರಿದಾಸನ್ ರವರು ಮೀನುಗಾರರಾಗಿದ್ದರು, ಮುಂಜಾನೆ ಕೆಲಸ ಮುಗಿಸಿ ಮನೆಗೆ ಮರಳುತ್ತಿದ್ದಾಗ ಮನೆ ಸಮೀಪ ಹೊಂಚು ಹಾಕಿ ಕುಳಿತಿದ್ದ ತಂಡವು ದಾಳಿ ನಡೆಸಿದ್ದು, ಬೊಬ್ಬೆ ಕೇಳಿ ಸ್ಥಳೀಯರು ಧಾವಿಸಿ ಬಂದಾಗ ತಂಡವು ವಾಹನದಲ್ಲಿ ಪರಾರಿಯಾಗಿದೆ. ಗಂಭೀರ ಗಾಯಗೊಂಡ ಹರಿದಾಸನ್ ರವರನ್ನು ಸ್ಥಳೀಯರು ಆಸ್ಪತ್ರೆಗೆ ದಾಖಲಿಸಿದರೂ ಆಗಲೇ ಮೃತಪಟ್ಟಿದ್ದರು. ಎರಡು ಬೈಕ್ ಗಳಲ್ಲಿ ಬಂದ ತಂಡವು ಈ ಕೃತ್ಯ ನಡೆಸಿದೆ ಎನ್ನಲಾಗಿದೆ .
ಬೊಬ್ಬೆ ಕೇಳಿ ಸ್ಥಳಕ್ಕೆ ತಲಪಿದ್ದ ಸಹೋದರನ ಮೇಲೂ ಹಲ್ಲೆ ನಡೆಸಲಾಗಿದೆ ಎಂದು ಆರೋಪಿಸಲಾಗಿದೆ.
ಒಂದು ವಾರದ ಹಿಂದೆ ಕಾರ್ಯಕ್ರಮಕ್ಕೆ ಸಂಬಂಧಪಟ್ಟಂತೆ ಪುನ್ನಾಳ್ ನಲ್ಲಿ ಬಿಜೆಪಿ ಮತ್ತು ಸಿಪಿಎಂ ಕಾರ್ಯಕರ್ತರ ನಡುವೆ ಘರ್ಷಣೆ ನಡೆದಿತ್ತು. ಇದು ಕೊಲೆಗೆ ಕಾರಣವಾಗಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ.
ಅಹಿತಕರ ಘಟನೆ ನಡೆಯದಂತೆ ಪೊಲೀಸರು ಮುನ್ನೆಚ್ಚರಿಕೆ ತೆಗೆದುಕೊಂಡಿದ್ದಾರೆ.