×
Ad

ಕೇಂದ್ರದ ಕೋರಿಕೆ ಮೇರೆಗೆ ಪೆಗಾಸಸ್ ಪ್ರಕರಣದ ವಿಚಾರಣೆ ಶುಕ್ರವಾರಕ್ಕೆ ಮುಂದೂಡಿದ ಸುಪ್ರೀಂ ಕೋರ್ಟ್

Update: 2022-02-22 12:40 IST

ಹೊಸದಿಲ್ಲಿ: ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಅವರು ಮಂಗಳವಾರ ಅರ್ಜಿ ಸಲ್ಲಿಸಿದ ನಂತರ ಸುಪ್ರೀಂ ಕೋರ್ಟ್ ಪೆಗಾಸಸ್ ಪ್ರಕರಣದ ವಿಚಾರಣೆಯನ್ನು ಫೆಬ್ರವರಿ 25 ಶುಕ್ರವಾರಕ್ಕೆ ಮುಂದೂಡಿದೆ ಎಂದು India Today ವರದಿ ಮಾಡಿದೆ.

ಮುಖ್ಯ ನ್ಯಾಯಮೂರ್ತಿ ಎನ್‌.ವಿ. ರಮಣ ನೇತೃತ್ವದ ಪೀಠವು ಕಳೆದ ವರ್ಷ ಅಕ್ಟೋಬರ್ 27 ರ ನಂತರ ಮೊದಲ ಬಾರಿಗೆ ಬುಧವಾರ ಪೆಗಾಸಸ್ ಸಮಸ್ಯೆಯ ಅರ್ಜಿಗಳನ್ನು ವಿಚಾರಣೆಗೆ ನಿಗದಿಪಡಿಸಿತ್ತು. ಕಳೆದ ವರ್ಷ  ಬೇಹುಗಾರಿಕೆ ಆರೋಪಗಳನ್ನು ತನಿಖೆ ಮಾಡಲು ಸೈಬರ್ ತಜ್ಞರ ಮೂರು ಸದಸ್ಯರ ಸಮಿತಿಯನ್ನು ಸ್ಥಾಪಿಸಲು ಸುಪ್ರೀಂಕೋರ್ಟ್ ಆದೇಶಿಸಿತ್ತು.

ಕೇಂದ್ರದ ಪರವಾಗಿ ಹಾಜರಾದ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಅವರು ಫೆಬ್ರವರಿ 23 ರಂದು ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆ (ಪಿಎಂಎಲ್‌ಎ) ವಿಷಯದ ವಿಚಾರಣೆಯಲ್ಲಿ ನಿರತರಾಗಿರುತ್ತೇನೆ ಹಾಗೂ ಅದರ ಪ್ರಕಾರ  ಪೆಗಾಸಸ್ ಅರ್ಜಿಗಳನ್ನು ಬುಧವಾರದ ಬದಲಿಗೆ ಶುಕ್ರವಾರ ವಿಚಾರಣೆ ನಡೆಸುವಂತೆ ಕೋರಿದರು.

ಭಾರತದ ಮುಖ್ಯ ನ್ಯಾಯಮೂರ್ತಿ ಎನ್‌.ವಿ. ರಮಣ ಅವರು ಮೆಹ್ತಾ ಮನವಿಗೆ ಒಪ್ಪಿಕೊಂಡರು ಮತ್ತು ಸಂಬಂಧಪಟ್ಟ ಇತರರಿಗೆ  ಈ ವಿಚಾರ ತಿಳಿಸಲು ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಅವರಿಗೆ ತಿಳಿಸಿದರು.

ಇದೀಗ  ಪೆಗಾಸಸ್ ಪ್ರಕರಣದ ತನಿಖೆಗಾಗಿ ಸುಪ್ರೀಂ ಕೋರ್ಟ್ ರಚಿಸಿರುವ ಉನ್ನತ ಮಟ್ಟದ ಸಮಿತಿಯು ಸಲ್ಲಿಸಿರುವ ವರದಿಯನ್ನು ಶುಕ್ರವಾರ ಸುಪ್ರೀಂ ಕೋರ್ಟ್ ಕೈಗೆತ್ತಿಕೊಳ್ಳಲಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News