×
Ad

ತಮಿಳುನಾಡು: ನಗರ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಡಿಎಂಕೆಗೆ ಮುನ್ನಡೆ

Update: 2022-02-22 13:23 IST

ಚೆನ್ನೈ: ಒಂದು ದಶಕದ ನಂತರ  ನಡೆದ ತಮಿಳುನಾಡಿನ ನಗರ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಆಡಳಿತಾರೂಢ ಡಿಎಂಕೆ ಮುನ್ನಡೆ ಸಾಧಿಸುತ್ತಿದೆ.

ರಾಜ್ಯದಲ್ಲಿ ಪ್ರಮುಖ ಪ್ರತಿಪಕ್ಷವಾಗಿರುವ ಎಐಎಡಿಎಂಕೆಯಿಂದ ಬಿಜೆಪಿ ಬೇರ್ಪಟ್ಟು ಏಕಾಂಗಿಯಾಗಿ ಸ್ಪರ್ಧಿಸುತ್ತಿದೆ. ಫಲಿತಾಂಶಗಳನ್ನು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಅವರ ಒಂಬತ್ತು ತಿಂಗಳ ಕಾರ್ಯಕ್ಷಮತೆಯ ರಿಪೋರ್ಡ್  ಕಾರ್ಡ್‌ನಂತೆ ನೋಡಲಾಗುತ್ತದೆ.

ರಾಜ್ಯದ ಒಟ್ಟು 1,374 ಕಾರ್ಪೊರೇಷನ್ ವಾರ್ಡ್‌ಗಳಲ್ಲಿ ಇದುವರೆಗೆ ಡಿಎಂಕೆ 57 ಮತ್ತು ಪ್ರಮುಖ ಪ್ರತಿಪಕ್ಷ ಎಐಎಡಿಎಂಕೆ 7 ಮತ್ತು ಇತರರು 8 ವಾರ್ಡ್ ಗಳಲ್ಲಿ ಗೆದ್ದಿವೆ. ಡಿಎಂಕೆ ಮಿತ್ರಪಕ್ಷಗಳಾದ ಕಾಂಗ್ರೆಸ್ 7 ಹಾಗೂ  ಸಿಪಿಎಂ 2 ರಲ್ಲಿ ಜಯ ಗಳಿಸಿದೆ ಎಂದು ತಮಿಳುನಾಡು ರಾಜ್ಯ ಚುನಾವಣಾ ಆಯೋಗ ತಿಳಿಸಿದೆ.

ತಮಿಳುನಾಡಿನ ನಗರ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ 60.7 ರಷ್ಟು ಮತದಾನವಾಗಿತ್ತು.

ಪುರಸಭೆಗಳಲ್ಲಿ (ಒಟ್ಟು ವಾರ್ಡ್ ಸದಸ್ಯ ಸ್ಥಾನಗಳು 3,843), ಡಿಎಂಕೆ 248 ಮತ್ತು ಎಐಎಡಿಎಂಕೆ 79 ಮತ್ತು ಇತರರು 53 ಸ್ಥಾನಗಳನ್ನು ಬಾಚಿಕೊಂಡಿವೆ. ಪಟ್ಟಣ ಪಂಚಾಯಿತಿಗಳಿಗೆ ಸಂಬಂಧಿಸಿದಂತೆ ಎಐಎಡಿಎಂಕೆ 354 ವಾರ್ಡ್‌ಗಳನ್ನು ಹಾಗೂ ಡಿಎಂಕೆ 1,251 ಅನ್ನು ಗೆದ್ದಿದೆ.

ಫೆಬ್ರವರಿ 19 ರಂದು ನಗರ ಸ್ಥಳೀಯ ಸಂಸ್ಥೆಗಳಿಗೆ ಚುನಾವಣೆ ನಡೆದಿದ್ದು, ರಾಜ್ಯದ 268 ಕೇಂದ್ರಗಳಲ್ಲಿ ಬೆಳಿಗ್ಗೆ 8 ಗಂಟೆಗೆ ಮತ ಎಣಿಕೆ ಆರಂಭವಾಯಿತು.

ರಾಜಧಾನಿ ಚೆನ್ನೈ ಸೇರಿದಂತೆ 21 ನಗರಗಳು, 138 ಪುರಸಭೆಗಳು ಮತ್ತು 490 ಪಟ್ಟಣ ಪಂಚಾಯಿತಿಗಳು 12,000 ಕ್ಕೂ ಹೆಚ್ಚು ಸದಸ್ಯರನ್ನು ಆಯ್ಕೆ ಮಾಡುತ್ತವೆ. ಕಳೆದ ಐದು ವರ್ಷಗಳಿಂದ ಈ ಸಂಸ್ಥೆಗಳಿಗೆ ಚುನಾವಣೆ ನಡೆಯದ ಕಾರಣ ಚುನಾಯಿತ ಪ್ರತಿನಿಧಿಗಳು ಇರಲಿಲ್ಲ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News