ವಿದ್ಯುತ್ ಇಲಾಖೆ ಸಿಬ್ಬಂದಿಗಳ ಮುಷ್ಕರ: ಚಂಢಿಗಡದ ಹಲವು ಪ್ರದೇಶಗಳಲ್ಲಿ ವಿದ್ಯುತ್ ಸ್ಥಗಿತ
ಸಾಂದರ್ಭಿಕ ಚಿತ್ರ
ಚಂಢಿಗಡ,ಫೆ.22: ಪಂಜಾಬ್ ಮತ್ತು ಹರ್ಯಾಣಗಳ ಜಂಟಿ ರಾಜಧಾನಿಯಾಗಿರುವ ಕೇಂದ್ರಾಡಳಿತ ಪ್ರದೇಶ ಚಂಢಿಗಡದಲ್ಲಿ ವಿದ್ಯುತ್ ಇಲಾಖೆಯ ನೌಕರರು ಖಾಸಗೀಕರಣವನ್ನು ವಿರೋಧಿಸಿ ಸೋಮವಾರ ಮಧ್ಯರಾತ್ರಿಯಿಂದ ಮೂರು ದಿನಗಳ ಮುಷ್ಕರವನ್ನು ಆರಂಭಿಸಿದ್ದು, ನಗರದ ಹಲವು ಪ್ರದೇಶಗಳು ವಿದ್ಯುತ್ ಪೂರೈಕೆಯಿಲ್ಲದೆ ಪರದಾಡುತ್ತಿವೆ.
ಮುಷ್ಕರದ ಹಿನ್ನೆಲೆಯಲ್ಲಿ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯಗಳುಂಟಾಗಿದ್ದು ನಗರದ ನಿವಾಸಿಗಳು ಸಂಕಷ್ಟಕ್ಕೆ ಸಿಲುಕಿದ್ದಾರೆ.
ಮಧ್ಯರಾತ್ರಿ ಬಳಿಕ ತಮ್ಮ ಪ್ರದೇಶದಲ್ಲಿ ವಿದ್ಯುತ್ ಪೂರೈಕೆ ಸ್ಥಗಿತಗೊಂಡಿದ್ದು ಈವರೆಗೂ ಸಮಸ್ಯೆ ಬಗೆಹರಿದಿಲ್ಲ ಎಂದು ಮಣಿಮಾಜ್ರಾ ಪ್ರದೇಶದ ನಿವಾಸಿಗಳು ಹೇಳಿದ್ದಾರೆ. ಇದೇ ರೀತಿ ಬೆಳಿಗ್ಗೆ ನಾಲ್ಕು ಗಂಟೆಯಿಂದಲೂ ವಿದ್ಯುತ್ ಇಲ್ಲದೆ ಪರದಾಡುತ್ತಿದ್ದೇವೆ ಎಂದು 30-ಎ,46 ಮತ್ತು 28-ಡಿ ಸೆಕ್ಟರ್‌ಗಳ ನಿವಾಸಿಗಳು ಅಳಲು ತೋಡಿಕೊಂಡಿದ್ದಾರೆ.
ಸೆಕ್ಟರ್ 40ರ ಇಡೀ ಪ್ರದೇಶದಲ್ಲಿ ವಿದ್ಯುತ್ ಪೂರೈಕೆ ಸ್ಥಗಿತಗೊಂಡಿದೆ. ಸೆಕ್ಟರ್ 38-ಬಿ,24, 46, 41, 42 ಮತ್ತು 9ರ ನಿವಾಸಿಗಳೂ ಇದೇ ಗೋಳನ್ನು ಅನುಭವಿಸುತ್ತಿದ್ದಾರೆ.
ದೂರು ಸಲ್ಲಿಸಲು ತಾನು ವಿದ್ಯುತ್ ಇಲಾಖೆಯ ನಿಗದಿತ ದೂರವಾಣಿ ಸಂಖ್ಯೆಗೆ ಕರೆ ಮಾಡಿದರೆ ಉತ್ತರಿಸುವವರು ಯಾರೂ ಇರಲಿಲ್ಲ. ಇತರ ಎರಡು ದೂರವಾಣಿ ಸಂಖ್ಯೆಗಳು ಯಾವಾಗ ನೋಡಿದರೂ ವ್ಯಸ್ತವಾಗಿರುತ್ತವೆ ಎಂದು ಸೆಕ್ಟರ್ 9ರ ನಿವಾಸಿಯೋರ್ವರು ತಿಳಿಸಿದರು. ಮಧ್ಯರಾತ್ರಿಯಿಂದಲೇ ವಿದ್ಯುತ್ ಇಲ್ಲ, ಹೀಗಾಗಿ ಬೆಳಿಗ್ಗೆ ನೀರು ಸಹ ಪೂರೈಕೆಯಾಗಿಲ್ಲ ಎಂದು ಎಂಎಚ್ ಸಿ ನಿವಾಸಿಯೋರ್ವರು ದೂರಿದ್ದಾರೆ.
ಸುಗಮ ವಿದ್ಯುತ್ ಪೂರೈಕೆಗಾಗಿ ಅಗತ್ಯ ವ್ಯವಸ್ಥೆಗಳನ್ನು ಮಾಡುವುದಾಗಿ ಆಡಳಿತವು ಹೇಳಿತ್ತು, ಆದರೆ ಯಾವುದೂ ಆಗಿಲ್ಲ ಎಂದು ನಿವಾಸಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ.
‘ವಿವಿಧ ಸೆಕ್ಟರ್ ಗಳಲ್ಲಿ ವಿದ್ಯುತ್ ಪೂರೈಕೆಯನ್ನು ನಾವು ಮರುಸ್ಥಾಪಿಸುತ್ತಿದ್ದೇವೆ. ಸೋಮವಾರ ರಾತ್ರಿ ಸಮಸ್ಯೆ ಕಾಣಿಸಿಕೊಂಡಿತ್ತು, ಆದರೆ ಬೆಳಿಗ್ಗೆಯಿಂದ ಸಮಸ್ಯೆಯನ್ನು ಬಹುಭಾಗ ಬಗೆಹರಿಸಿದ್ದೇವೆ, ಪಂಜಾಬ್ ಮತ್ತು ಹರ್ಯಾಣಗಳಿಂದ 150 ಹೆಚ್ಚುವರಿ ಸಿಬ್ಬಂದಿಗಳನ್ನು ಕರೆಸಿಕೊಳ್ಳಲಾಗಿದೆ. ದೂರುಗಳಿಗೆ ತಕ್ಷಣ ಸ್ಪಂದಿಸುವಂತೆಯೂ ನಾವು ನೋಡಿಕೊಳ್ಳುತ್ತೇವೆ ’ ಎಂದು ಚಂಢಿಗಡದ ಮುಖ್ಯ ಇಂಜಿನಿಯರ್ ಸಿ.ಬಿ.ಓಝಾ ತಿಳಿಸಿದ್ದಾರೆ.
ಚಂಢಿಗಡದ ವಿದ್ಯುತ್ ಇಲಾಖೆಯ ಖಾಸಗೀಕರಣವನ್ನು ವಿರೋಧಿಸುತ್ತಿರುವ ವಿದ್ಯುತ್ ನೌಕರರ ಒಕ್ಕೂಟವು ಎರಡು ತಿಂಗಳುಗಳ ಹಿಂದೆಯೇ ಮುಷ್ಕರದ ಕರೆಯನ್ನು ನೀಡಿತ್ತು. ಆದರೆ ಸಮಸ್ಯೆಯನ್ನು ಬಗೆಹರಿಸಲು ಅಡಳಿತವು ವಿಫಲಗೊಂಡಿತ್ತು ಮತ್ತು ಮುಷ್ಕರದ ದುಷ್ಪರಿಣಾಮಗಳನ್ನು ತಗ್ಗಿಸಲು ಅಗತ್ಯ ಪೂರ್ವ ಸಿದ್ಧತೆಗಳನ್ನು ಮಾಡಿಕೊಂಡಿರಲಿಲ್ಲ. ಈ ನಡುವೆ ಖಾಸಗೀಕರಣ ಪ್ರಕ್ರಿಯೆಯನ್ನು ನಿಲ್ಲಿಸದಿದ್ದರೆ ಅನಿರ್ದಿಷ್ಟಾವಧಿಗೆ ಮುಷ್ಕರವನ್ನು ಮುಂದುವರಿಸುವುದಾಗಿ ನೌಕರರು ಎಚ್ಚರಿಕೆ ನೀಡಿದ್ದಾರೆ.