ಉಕ್ರೇನ್ ನಲ್ಲಿಯ ತನ್ನ ಪ್ರಜೆಗಳನ್ನು ತೆರವುಗೊಳಿಸಲು ಭಾರತದಿಂದ ಪರ್ಯಾಯ ಮಾರ್ಗಗಳ ಪರಿಶೀಲನೆ
ಸಾಂದರ್ಭಿಕ ಚಿತ್ರ
ಹೊಸದಿಲ್ಲಿ,ಫೆ.24: ರಷ್ಯದ ಆಕ್ರಮಣದ ಬಳಿಕ ಉಕ್ರೇನ್ ತನ್ನ ವಾಯುಪ್ರದೇಶವನ್ನು ಮುಚ್ಚಿರುವುದರಿಂದ ಯುದ್ಧಗ್ರಸ್ತ ದೇಶದಲ್ಲಿ ಸಿಕ್ಕಿಕೊಂಡಿರುವ ತನ್ನ ಪ್ರಜೆಗಳನ್ನು ತೆರವುಗೊಳಿಸಲು ಪರ್ಯಾಯ ಮಾರ್ಗಗಳನ್ನು ಭಾರತವು ಪರಿಶೀಲಿಸುತ್ತಿದೆ. ಗುರುವಾರ ಬೆಳಿಗ್ಗೆ ಉಕ್ರೇನ್ ಗೆ ತೆರಳುತ್ತಿದ್ದ ಏರ್ ಇಂಡಿಯಾ ವಿಮಾನವು ಮಾರ್ಗಮಧ್ಯದಿಂದಲೇ ದಿಲ್ಲಿಗೆ ವಾಪಸಾಗಿದೆ. ಅಂತರ್ಜಾಲದಲ್ಲಿನ ಫ್ಲೈಟ್ ಟ್ರಾಕರ್ಗಳು ಸದ್ಯಕ್ಕೆ ಉಕ್ರೇನ್ ವಾಯುಪ್ರದೇಶದಲ್ಲಿ ಯಾವುದೇ ವಾಣಿಜ್ಯ ವಿಮಾನವನ್ನು ತೋರಿಸುತ್ತಿಲ್ಲ.
ತುರ್ತು ಯೋಜನೆಗಳನ್ನು ರೂಪಿಸಲು ಮತ್ತು ಉಕ್ರೇನ್ನಲ್ಲಿ ವಾಸವಿರುವ ಸಾವಿರಾರು ಭಾರತೀಯ ಪ್ರಜೆಗಳಿಗಾಗಿ ಪರ್ಯಾಯ ತೆರವು ಮಾರ್ಗಗಳನ್ನು ಕಂಡುಕೊಳ್ಳಲು ವಿದೇಶಾಂಗ ವ್ಯವಹಾರಗಳ ಸಚಿವಾಲಯವು ಉನ್ನತ ಮಟ್ಟದ ಸಭೆಗಳನ್ನು ನಡೆಸುತ್ತಿದೆ ಎಂದು ಬಲ್ಲ ಮೂಲಗಳು ತಿಳಿಸಿವೆ.
ರಷ್ಯನ್ ಭಾಷೆಯನ್ನು ಮಾತನಾಡುವ ಹೆಚ್ಚಿನ ಅಧಿಕಾರಿಗಳನ್ನು ಉಕ್ರೇನಿನಲ್ಲಿಯ ಭಾರತೀಯ ರಾಯಭಾರ ಕಚೇರಿಗೆ ರವಾನಿಸಲಾಗಿದೆ ಮತ್ತು ಅವರನ್ನು ಉಕ್ರೇನ್ನ ನೆರೆಯಲ್ಲಿರುವ ದೇಶಗಳಲ್ಲಿ ನಿಯೋಜಿಸಲಾಗುತ್ತಿದೆ ಎಂದು ಸಚಿವಾಲಯದಲ್ಲಿನ ಮೂಲಗಳು ತಿಳಿಸಿದವು.
ಉಕ್ರೇನಿನಲ್ಲಿ ವಾಸವಿರುವ ಭಾರತೀಯ ವಿದ್ಯಾರ್ಥಿಗಳು ಮತ್ತು ಇತರರಿಗಾಗಿ ಮಾರ್ಗಸೂಚಿಯನ್ನೂ ಭಾರತೀಯ ರಾಯಭಾರಿ ಕಚೇರಿಯು ಹೊರಡಿಸಿದೆ. ರಾಜಧಾನಿ ಕೀವ್ ರಷ್ಯದ ದಾಳಿಗೆ ಗುರಿಯಾಗಿರುವ ನಗರಗಳಲ್ಲಿ ಸೇರಿದೆ.
ನಗರದ ಪಶ್ಚಿಮ ಭಾಗಗಳಿಂದ ಪ್ರಯಾಣಿಸುವವರು ಸೇರಿದಂತೆ ಕೀವ್ಗೆ ತೆರಳುತ್ತಿರುವವರು ತಾತ್ಕಾಲಿಕವಾಗಿ ತಮ್ಮ ನಗರಗಳಿಗೆ,ವಿಶೇಷವಾಗಿ ದೇಶದ ಪಶ್ಚಿಮ ಗಡಿಯಲ್ಲಿನ ಸುರಕ್ಷಿತ ಸ್ಥಳಗಳಿಗೆ ಮರಳುವಂತೆ ಭಾರತೀಯ ರಾಯಭಾರ ಕಚೇರಿಯು ಭಾರತೀಯ ಪ್ರಜೆಗಳಿಗೆ ಎಚ್ಚರಿಕೆ ನೀಡಿದೆ.
ಉಕ್ರೇನ್ನಲ್ಲಿಯ ಸದ್ಯದ ಸ್ಥಿತಿ ಅತ್ಯಂತ ಅನಿಶ್ಚಿತವಾಗಿದೆ. ಅದು ನಿಮ್ಮ ಮನೆ,ಹಾಸ್ಟೆಲ್,ವಸತಿ ಅಥವಾ ಪ್ರಯಾಣವಾಗಿರಲಿ,ನೀವು ಎಲ್ಲಿದ್ದೀರೋ ಅಲ್ಲಿಯೇ ಶಾಂತವಾಗಿರಿ ಮತ್ತು ಸುರಕ್ಷಿತರಾಗಿರಿ ಎಂದು ರಾಯಭಾರ ಕಚೇರಿಯು ತಿಳಿಸಿದೆ.