ದಿಲ್ಲಿ: 2021ರಲ್ಲಿ ದಿನಕ್ಕೆ ಕನಿಷ್ಠ 5 ಅತ್ಯಾಚಾರ ಪ್ರಕರಣಗಳು ದಾಖಲು; ಪೊಲೀಸ್ ಅಂಕಿ-ಅಂಶದಿಂದ ಬಹಿರಂಗ

Update: 2022-02-25 06:04 GMT

ಹೊಸದಿಲ್ಲಿ: ಮಹಿಳೆಯರ ವಿರುದ್ಧದ ಅಪರಾಧಗಳ ಪ್ರಕರಣಗಳು ಏರಿಕೆಯಾಗಿದ್ದು, 2021ರಲ್ಲಿ ರಾಷ್ಟ್ರ ರಾಜಧಾನಿಯಲ್ಲಿ ಪ್ರತಿದಿನ ಕನಿಷ್ಠ ಐದು ಅತ್ಯಾಚಾರ ಪ್ರಕರಣಗಳು ದಾಖಲಾಗಿರುವುದು ದಿಲ್ಲಿ ಪೊಲೀಸ್ ಅಂಕಿ-ಅಂಶಗಳಿಂದ ಬಹಿರಂಗವಾಗಿದೆ ಎಂದು indianexpress.com ವರದಿ ಮಾಡಿದೆ.

2020 ರಲ್ಲಿ 1,618 ಪ್ರಕರಣಗಳಿಗೆ ಹೋಲಿಸಿದರೆ ಕಳೆದ ವರ್ಷ 1,969 ಪ್ರಕರಣಗಳು ದಾಖಲಾಗಿದ್ದು, ಅತ್ಯಾಚಾರ ಪ್ರಕರಣಗಳಲ್ಲಿ 21.6 ಶೇ, ಹೆಚ್ಚಳವಾಗಿದೆ ಎಂದು ದಿಲ್ಲಿ ಪೊಲೀಸರು ಗುರುವಾರ ಹೇಳಿದ್ದಾರೆ.

ಕಿರುಕುಳದ ಪ್ರಕರಣಗಳಲ್ಲಿ  ಕಳೆದ ವರ್ಷ 2,429 ಪ್ರಕರಣಗಳು ದಾಖಲಾಗುವುದರೊಂದಿಗೆ 17.5 ಶೇ. ದಷ್ಟು ಏರಿಕೆಯಾಗಿದೆ.

“ಪೊಲೀಸರು ಸಕ್ರಿಯವಾಗಿ ಪ್ರಕರಣಗಳನ್ನು ದಾಖಲಿಸುವ ಹಾಗೂ  ದೂರುಗಳನ್ನು ತೆಗೆದುಕೊಳ್ಳುತ್ತಿರುವ ಕಾರಣ ಪ್ರಕರಣಗಳಲ್ಲಿ ಏರಿಕೆ ಕಂಡುಬಂದಿದೆ. ನಮಗೆ ಮಹಿಳೆಯರು, ಮಕ್ಕಳು ಹಾಗೂ ಸಮಾಜದ ದುರ್ಬಲ ವರ್ಗಗಳ ಸುರಕ್ಷತೆಯು ಪ್ರಮುಖ ಆದ್ಯತೆಯಾಗಿದೆ. ಆದ್ದರಿಂದ, ನಾವು ನಗರದಾದ್ಯಂತ ಪಿಂಕ್ ಬೂತ್‌ಗಳನ್ನು ಪರಿಚಯಿಸಲು ಚಾಲನೆ ನೀಡಿದ್ದೇವೆ’’ ಎಂದು ದಿಲ್ಲಿ ಪೊಲೀಸ್ ಮುಖ್ಯಸ್ಥ ರಾಕೇಶ್ ಅಸ್ತಾನ ಹೇಳಿದ್ದಾರೆ.

ಅಂಕಿಅಂಶಗಳ ಪ್ರಕಾರ  ಸುಮಾರು 1.22 ಶೇ. ಅತ್ಯಾಚಾರ ಪ್ರಕರಣಗಳಲ್ಲಿ ಆರೋಪಿಗಳು ಸಂತ್ರಸ್ತರಿಗೆ ಪರಿಚಿತರಲ್ಲ. 98.7ಶೇ. ಕ್ಕಿಂತ ಹೆಚ್ಚು ಅತ್ಯಾಚಾರ ಪ್ರಕರಣಗಳಲ್ಲಿ ಆರೋಪಿಗಳು ಸಂತ್ರಸ್ತೆಗೆ ಪರಿಚಿತರಾಗಿದ್ದಾರೆ.

ಘಟನೆಯ ಮೊದಲ ವಾರದಲ್ಲಿ ಸುಮಾರು 60 ಶೇ. ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಕಳೆದ ವರ್ಷ ಅತ್ಯಾಚಾರ ಪ್ರಕರಣಗಳಲ್ಲಿ ಒಟ್ಟು 35,221 ಆರೋಪಿಗಳನ್ನು ಬಂಧಿಸಲಾಗಿತ್ತು.

“ಅತ್ಯಾಚಾರ ಪ್ರಕರಣಗಳಲ್ಲಿ ಬಂಧಿತರಾದ ಸುಮಾರು 1 ಶೇ. ಆರೋಪಿಗಳು ಸಂತ್ರಸ್ತೆಗೆ ತಿಳಿದಿರಲಿಲ್ಲ. ಹೆಚ್ಚಿನ ಸಂದರ್ಭಗಳಲ್ಲಿ ಆರೋಪಿಗಳು ಕುಟುಂಬದ ಸದಸ್ಯರು, ಸ್ನೇಹಿತರು, ನೆರೆಹೊರೆಯವರು ಅಥವಾ ಸಂಬಂಧಿಕರಾಗಿರುತ್ತಾರೆ ”ಎಂದು ಅಸ್ತಾನಾ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News