×
Ad

ಉಕ್ರೇನ್ ಬಿಕ್ಕಟ್ಟು:‌ ಆಹಾರ,ನೀರಿನ ಕೊರತೆಯಿಂದ ಕಂಗೆಟ್ಟಿರುವ ಭಾರತೀಯ ವಿದ್ಯಾರ್ಥಿಗಳಿಂದ ಕೇಂದ್ರದ ನೆರವಿಗಾಗಿ ಕೂಗು

Update: 2022-02-27 23:36 IST
photo courtesy:twitter

ಹೊಸದಿಲ್ಲಿ,ಫೆ.27: ರಷ್ಯದ ಆಕ್ರಮಣದ ಬಳಿಕ ಉಕ್ರೇನ್‌ನಲ್ಲಿಯ ಲಕ್ಷಾಂತರ ಜನರ ಅಸಹಾಯಕ ಸ್ಥಿತಿಯನ್ನು ಬಣ್ಣಿಸಲು ಅನಿಶ್ಚಿತತೆ,‌ ಭಯ,ಆತಂಕ ಮತ್ತು ಭಯಾನಕತೆ ಇವಿಷ್ಟೇ ಶಬ್ದಗಳು ಸಾಲುವುದಿಲ್ಲ. ರಷ್ಯದ ಪಡೆಗಳ ಹೆಜ್ಜೆಗಳ ಶಬ್ದ ಹತ್ತಿರವಾಗುತ್ತಿದ್ದಂತೆ ನೆರವಿಗಾಗಿ ಅವರ ಕೂಗು ತಾರಕಕ್ಕೇರುತ್ತಿದೆ.

ಬಲಿಷ್ಠ ರಷ್ಯದ ವಿರುದ್ಧ ತೀವ್ರ ಪ್ರತಿರೋಧವನ್ನೊಡ್ಡುತ್ತಿರುವ ಉಕ್ರೇನ್‌ನಲ್ಲಿಯ ಸಿಕ್ಕಿಹಾಕಿಕೊಂಡವರಲ್ಲಿ ಸಾವಿರಾರು ಭಾರತೀಯ ವಿದ್ಯಾರ್ಥಿಗಳಿದ್ದು,ಆಹಾರ ಮತ್ತು ನೀರನ್ನು ಸೀಮಿತ ಪ್ರಮಾಣದಲ್ಲಿ ಹೊಂದಿರುವ ಅವರು ದೇಶದಿಂದ ಹೊರಹೋಗಲು ಸುರಕ್ಷಿತ ಮಾರ್ಗವೊಂದನ್ನು ಕಂಡುಕೊಳ್ಳುವ ಆಸೆಯಲ್ಲಿದ್ದಾರೆ.

ತಾನು ತನ್ನ ಸ್ನೇಹಿತರೊಂದಿಗೆ ಅಪಾರ್ಟ್‌ಮೆಂಟ್‌ವೊಂದರಲ್ಲಿ ಆಶ್ರಯ ಪಡೆದಿದ್ದೇನೆ. ಶುಕ್ರವಾರ ಸಂಜೆ ರಷ್ಯದ ಪಡೆಗಳು ಪ್ರದೇಶವನ್ನು ಪ್ರವೇಶಿಸಿದ ಬಳಿಕ ಪರಿಸ್ಥಿತಿ ತೀವ್ರ ಹದಗೆಟ್ಟಿದೆ ಎಂದು ಉಕ್ರೇನ್ನ ಮಿಕೊಲೇವ ನಗರದಲ್ಲಿ ವೈದ್ಯಕೀಯ ವ್ಯಾಸಂಗ ಮಾಡುತ್ತಿರುವ ಭಾರತೀಯ ವಿದ್ಯಾರ್ಥಿ ತಾಬಿಷ್ ಅಲಿ ಸಿದ್ದಿಕಿ ಅವರು ಸುದ್ದಿಸಂಸ್ಥೆಗೆ ತಿಳಿಸಿದರು.
ನೀರು ಮತ್ತು ಅಗತ್ಯ ಆಹಾರದೊಂದಿಗೆ ಅಪಾರ್ಟ್‌ಮೆಂಟ್‌ನ ತಳಅಂತಸ್ತಿನಲ್ಲಿ ನಿದ್ರೆಯಿಲ್ಲದ ರಾತ್ರಿಯನ್ನು ಕಳೆದಿದ್ದೇವೆ. ವಾಯುದಾಳಿಗಳು,ಗುಂಡಿನ ಮೊರೆತ,ಯುದ್ಧವಿಮಾನಗಳ ಶಬ್ದ ಮತ್ತು ಸಮೀಪದಲ್ಲಿ ಠಳಾಯಿಸುತ್ತಿರುವ ಟ್ಯಾಂಕ್‌ಗಳು ಭಯಾನಕ ಸ್ಥಿತಿಯನ್ನುಂಟು ಮಾಡಿವೆ ಎಂದು ಅವರು,‘ನಾವು ಭಯಭೀತರಾಗಿದ್ದೇವೆ. ಆಹಾರ ಮತ್ತು ನೀರಿನ ಕೊರತೆಯನ್ನು ಎದುರಿಸುತ್ತಿದ್ದೇವೆ. ತುಂಬ ದಿನ ನಾವು ಹೀಗಿರಲು ಸಾಧ್ಯವಿಲ್ಲ ’ ಎಂದರು. ಸಾಧ್ಯವಿದ್ದಷ್ಟು ಶೀಘ್ರ ತಮ್ಮ ನೆರವಿಗೆ ಬರುವಂತೆ ಭಾರತ ಸರಕಾರವನ್ನು ಅವರು ಕೋರಿಕೊಂಡರು.
‘ನಮಗೆ ನೆರವಾಗುವಂತೆ,ನಮ್ಮನ್ನು ತಾಯ್ನಡಿಗೆ ಮರಳಿ ಕರೆದೊಯ್ಯುವಂತೆ ಪ್ರಧಾನಿ ನರೇಂದ್ರ ಮೋದಿಯವರಿಗೆ ನಾನು ಮನವಿ ಮಾಡಿಕೊಳ್ಳುತ್ತಿದ್ದೇನೆ ’ ಎಂದು ಉ.ಪ್ರದೇಶಧ ಘಾಝಿಯಾಬಾದ್ ನಿವಾಸಿಯಾಗಿರುವ ಸಿದ್ದಿಕಿ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News