ಉಕ್ರೇನ್‌ ನಲ್ಲಿ ಸಿಲುಕಿರುವ ವಿದ್ಯಾರ್ಥಿನಿಯ ತುರ್ತು ಸಹಾಯ ಕೋರಿಕೆ ವೀಡಿಯೊವನ್ನು ಹಂಚಿಕೊಂಡ ಪ್ರಿಯಾಂಕಾ ಗಾಂಧಿ

Update: 2022-02-28 09:27 GMT
Photo: Twitter/@priyankagandhi

ಹೊಸದಿಲ್ಲಿ: ಉಕ್ರೇನ್‌ನಲ್ಲಿ ಸಿಲುಕಿರುವ ಸಾವಿರಾರು ಭಾರತೀಯ ವಿದ್ಯಾರ್ಥಿಗಳು ಆ ದೇಶದಿಂದ ಹೊರಗಿರುವ ಭೂ ಮಾರ್ಗಗಳನ್ನು ಬಳಸಿಕೊಂಡು ತಾಯ್ನಾಡಿಗೆ ಮರಳಲು ಪ್ರಯತ್ನಿಸುತ್ತಿರುವಾಗ ಯುವತಿಯ ವೀಡಿಯೊವೊಂದನ್ನು ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ವಾದ್ರಾ ಸೇರಿದಂತೆ ಹಲವರು ವ್ಯಾಪಕವಾಗಿ ಹಂಚಿಕೊಂಡಿದ್ದಾರೆ.

"ಜೈ ಹಿಂದ್, ಜೈ ಭಾರತ್, ದಯವಿಟ್ಟು ನಮಗೆ ಸಹಾಯ ಮಾಡಿ" ಎಂದು ವಿದ್ಯಾರ್ಥಿ ಬೇಡಿಕೊಂಡಿದ್ದಾಳೆ.

ರಷ್ಯಾದ ಪಡೆಗಳು ಉಕ್ರೇನ್‌ನಲ್ಲಿ ತಮ್ಮ ಆಕ್ರಮಣವನ್ನು ಮುಂದುವರೆಸುತ್ತಿದ್ದಂತೆ ಭಾರತೀಯ ವಿದ್ಯಾರ್ಥಿಗಳನ್ನು ಬಸ್‌ಗಳ ಮೂಲಕ ರೊಮೇನಿಯಾ, ಹಂಗೇರಿ ಹಾಗು  ಪೋಲೆಂಡ್‌ನೊಂದಿಗಿನ ಉಕ್ರೇನ್‌ನ ಗಡಿಗೆ ಕರೆದೊಯ್ಯಲಾಗುತ್ತಿದೆ.  ಅಲ್ಲಿಂದ ಅವರನ್ನು ಏರ್ ಇಂಡಿಯಾ ವಿಮಾನಗಳ ಮೂಲಕ ಮನೆಗೆ ಕಳುಹಿಸಲಾಗುತ್ತಿದೆ.

ತಾನು ಉತ್ತರ ಪ್ರದೇಶದ ರಾಜಧಾನಿ ಲಕ್ನೋ ಮೂಲದವಳು ಎಂದು ಹೇಳುವ ಗರಿಮಾ ಮಿಶ್ರಾ, ಸಹಾಯಕ್ಕಾಗಿ ತನ್ನ ಕರೆಗಳಿಗೆ ಯಾರೂ ಸ್ಪಂದಿಸುತ್ತಿಲ್ಲ ಎಂದು ಹೇಳುತ್ತಾ ಭಯಭೀತರಾಗಿದ್ದಾರೆ. "ನಮಗೆ  ಯಾರೂ ಸಹಾಯ ಮಾಡುತ್ತಿಲ್ಲ ಹಾಗೂ  ನಮಗೆ ಯಾವುದೇ ಸಹಾಯ ಸಿಗುತ್ತದೆಯೇ ಎಂದು ನನಗೆ ತಿಳಿದಿಲ್ಲ" ಎಂದು ಅವರು ಹೇಳಿದರು.

"ಗಡಿಗೆ ಬಸ್‌ನಲ್ಲಿ ಹೋಗಿದ್ದ ನಮ್ಮ ಸ್ನೇಹಿತರನ್ನು ರಷ್ಯಾದ ಸೈನಿಕರು ತಡೆದರು ಎಂದು ನಮಗೆ ತಿಳಿಸಲಾಯಿತು. ಅವರು ವಿದ್ಯಾರ್ಥಿಗಳ ಮೇಲೆ ಗುಂಡು ಹಾರಿಸಿದರು ಹಾಗೂ ಹುಡುಗಿಯರನ್ನು ಕರೆದೊಯ್ದರು. ಹುಡುಗರಿಗೆ ಏನಾಯಿತು ಎಂದು ನಮಗೆ ತಿಳಿದಿಲ್ಲ" ಎಂದು ಗರಿಮಾ ಹೇಳಿದರು.

" ಇಂತಹ ವೀಡಿಯೊಗಳು ತುಂಬಾ ನೋವುಂಟು ಮಾಡುತ್ತವೆ. ದೇವರಿಗೋಸ್ಕರ ಈ ಮಕ್ಕಳನ್ನು ಭಾರತಕ್ಕೆ ಕರೆದೊಯ್ಯಲು ಸಾಧ್ಯವಿರುವ ಎಲ್ಲವನ್ನೂ ಮಾಡಿ. ಇಡೀ ದೇಶವು ಈ ವಿದ್ಯಾರ್ಥಿಗಳು ಮತ್ತು ಅವರ ಕುಟುಂಬಗಳೊಂದಿಗೆ ಇದೆ" ಎಂದು  ವಿದೇಶಾಂಗ ಸಚಿವ ಎಸ್. ಜೈಶಂಕರ್ ಅವರನ್ನು ಟ್ಯಾಗ್ ಮಾಡಿ ಪ್ರಿಯಾಂಕಾ ಗಾಂಧಿ ಅವರು ತಮ್ಮ ವೀಡಿಯೊ ಸಂದೇಶದಲ್ಲಿ ತಿಳಿಸಿದ್ದಾರೆ.

"ನಾನು ನಿಮಗೆ ಮನವಿ ಮಾಡುತ್ತೇನೆ.  ಅವರನ್ನು ಸುರಕ್ಷಿತವಾಗಿ ಮರಳಿ ಕರೆತರಲು ಸರಕಾರ ಎಲ್ಲಾ ಪ್ರಯತ್ನಗಳನ್ನು ಮಾಡಬೇಕು" ಎಂದು ಕಾಂಗ್ರೆಸ್ ನಾಯಕಿ ಒತ್ತಾಯಿಸಿದರು.

ಇಂತಹ ಹಲವು ವಿದ್ಯಾರ್ಥಿಗಳ ವೀಡಿಯೊಗಳನ್ನು ಕಾಂಗ್ರೆಸ್ ನಾಯಕರು ಶೇರ್ ಮಾಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News