ತಾಯ್ನಡಿಗೆ ಮರಳಿದ 182 ಭಾರತೀಯರು

Update: 2022-03-01 17:44 GMT

ಹೊಸದಿಲ್ಲಿ, ಮಾ. 1: ಕೇಂದ್ರ ಸರಕಾರದ ‘ಆಪರೇಷನ್ ಗಂಗಾ’ದ ಭಾಗವಾಗಿ 7ನೇ ತೆರವು ವಿಮಾನದ ಮೂಲಕ ಉಕ್ರೇನ್ ನಿಂದ 182 ಭಾರತೀಯರನ್ನು ಮಂಗಳವಾರ ಭಾರತಕ್ಕೆ ಮರಳಿ ಕರೆ ತರಲಾಗಿದೆ. ವಿಶೇಷ ಏರ್ ಇಂಡಿಯಾ ಎಕ್ಸ್ ಪ್ರೆಸ್ ವಿಮಾನ ಮುಂಬೈಯ ಛತ್ರಪತಿ ಶಿವಾಜಿ ಮಹಾರಾಜ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಮಂಗಳವಾರ ಬೆಳಗ್ಗೆ ಆಗಮಿಸಿತು. 

ವಿಮಾನ ನಿಲ್ದಾಣಕ್ಕೆ ಆಗಮಿಸಿದ ಭಾರತೀಯರನ್ನು ಕೇಂದ್ರದ ಸೂಕ್ಷ್ಮ ಕಿರು ಹಾಗೂ ಮಧ್ಯಮ ಉದ್ಯಮ (ಎಂಎಸ್ಎಂಇ) ಖಾತೆಯ ಸಚಿವ ನಾರಾಯಣ ರಾಣೆ ಬರಮಾಡಿಕೊಂಡರು ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯದ ಹೇಳಿಕೆ ತಿಳಿಸಿದೆ. ಉಕ್ರೇನ್ನಿಂದ ಎಲ್ಲಾ ಭಾರತೀಯರನ್ನು ತೆರವುಗೊಳಿಸಲು ಭಾರತ ಸರಕಾರ ಬದ್ದವಾಗಿದೆ ಎಂದು ಸಚಿವರು ತಿಳಿಸಿದ್ದಾರೆ. 

ಉಕ್ರೇನ್ನಲ್ಲಿರುವ ತಮ್ಮ ಗೆಳೆಯರು ಹಾಗೂ ಸಹೋದ್ಯೋಗಿಗಳನ್ನು ಕೂಡ ಕೂಡಲೇ ತೆರವುಗೊಳಿಸಲಾಗುವುದು ಎಂದು ಅವರು ವಿದ್ಯಾರ್ಥಿಗಳಿಗೆ ಭರವಸೆ ನೀಡಿದರು. ಮಾಧ್ಯಮದೊಂದಿಗೆ ಮಾತನಾಡಿದ ಕೇಂದ್ರ ಸಚಿವರು, ಯುದ್ಧಪೀಡಿತ ಉಕ್ರೇನ್ನಿಂದ ಹಿಂದಿರುಗಿದ ವಿದ್ಯಾರ್ಥಿಗಳು ಆತಂಕದಲ್ಲಿದ್ದರು. ಈಗ ಅವರು ಸುರಕ್ಷಿತವಾಗಿದ್ದಾರೆ. ಅವರು ತಮ್ಮ ಊರುಗಳಿಗೆ ಮರಳಲು ಅಗತ್ಯವಾಗಿರುವ ಎಲ್ಲ ನೆರವನ್ನು ಆಯಾಯ ರಾಜ್ಯಗಳು ಒದಗಿಸಲಿವೆ ಎಂದರು. 

ಸ್ವದೇಶಕ್ಕೆ ಮರಳಿ ಕುಟುಂಬವನ್ನು ಭೇಟಿಯಾದ ವಿದ್ಯಾರ್ಥಿಗಳು ಸರಕಾರಕ್ಕೆ ಕೃತಜ್ಞತೆ ಸಲ್ಲಿಸಿದರು. ವಿದ್ಯಾರ್ಥಿಗಳಿಗೆ ನೆರವು ನೀಡಲು ಮುಂಬೈ ವಿಮಾನ ನಿಲ್ದಾಣದಲ್ಲಿ ಹಲವು ರಾಜ್ಯಗಳು ಹೆಲ್ಪ್ ಡೆಸ್ಕ್ ಅನ್ನು ಆರಂಭಿಸಿವೆ. ಏರ್ ಇಂಡಿಯಾ ಎಕ್ಸ್ ಪ್ರೆಸ್ ವಿಮಾನ ಬುಕಾರೆಸ್ಟ್ ನ ಹೆನ್ರಿ ಕೋಂಡಾ ಇಂಟರ್ನ್ಯಾಷನಲ್ ವಿಮಾನ ನಿಲ್ದಾಣದಿಂದ ಸೋಮವಾರ ರಾತ್ರಿ 11.10 (ಐಎಸ್ಟಿ)ಕ್ಕೆ ಸಂಚಾರ ಆರಂಭಿಸಿತ್ತು. ಇಂಧನ ತುಂಬಿಸಲು ಕುವೈಟ್ ನಲ್ಲಿ ಸ್ಪಲ್ಪ ಕಾಲ ನಿಂತ ವಿಮಾನ ಮಂಗಳವಾರ ಬೆಳಗ್ಗೆ 7.05ಕ್ಕೆ ಮುಂಬೈ ತಲುಪಿತು. ತೆರವು ಕಾರ್ಯಾಚರಣೆ ‘ಆಪರೇಷನ್ ಗಂಗಾ’ದಲ್ಲಿ ಕಾರ್ಯಾಚರಿಸುತ್ತಿರುವ 7ನೇ ವಿಮಾನ ಇದಾಗಿದೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News