ಉಕ್ರೇನ್‌ ನೆರೆ ದೇಶಗಳನ್ನು ತಲುಪಿರುವ ಭಾರತೀಯರ ರಕ್ಷಣೆಗೆ ಮುಂದಿನ ಮೂರು ದಿನಗಳಲ್ಲಿ 26 ವಿಮಾನಗಳ ಬಳಕೆ

Update: 2022-03-02 09:12 GMT
ಸಾಂದರ್ಭಿಕ ಚಿತ್ರ

ಹೊಸದಿಲ್ಲಿ: ಸಂಘರ್ಷಮಯ ಉಕ್ರೇನ್‌ ದೇಶದಿಂದ ನೆರೆಯ ದೇಶಕ್ಕೆ ಸ್ಥಳಾಂತರಗೊಂಡಿರುವ ಅನಿವಾಸಿ ಭಾರತೀಯರನ್ನು ತಾಯ್ನಾಡಿಗೆ ಮರಳಿ ತರಲು ಮುಂದಿನ ಮೂರು ದಿನಗಳಲ್ಲಿ 26 ವಿಮಾನಗಳು ಕಾರ್ಯಾಚರಿಸಲಿವೆ ಎಂದು ವಿದೇಶಾಂಗ ಕಾರ್ಯದರ್ಶಿ ಹರ್ಷ ವರ್ಧನ್‌ ಶ್ರಿಂಗ್ಲಾ ತಿಳಿಸಿದ್ದಾರೆ.

ಉಕ್ರೇನ್‌ ಸಂಘರ್ಷದಿಂದಾಗಿ ವಿದೇಶಗಳಲ್ಲಿ ಬಾಕಿಯಾಗಿರುವ ಭಾರತದ ನಾಗರಿಕರನ್ನು ಮರಳಿ ಕರೆ ತರುವ ಕಾರ್ಯಾಚರಣೆಯ ಕುರಿತು ಪ್ರಧಾನಿ ಮೋದಿ ನೇತೃತ್ವದಲ್ಲಿ ನಡೆದ ಸಭೆಯ ಬಳಿಕ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಶ್ರಿಂಗ್ಲಾ, ರೊಮೇನಿಯಾದ ಬುಕಾರೆಸ್ಟ್ ಮತ್ತು ಹಂಗೇರಿಯ ಬುಡಾಪೆಸ್ಟ್ ಜೊತೆಗೆ ಪೋಲೆಂಡ್ ಮತ್ತು ಸ್ಲೋವಾಕ್ ಗಣರಾಜ್ಯದ ವಿಮಾನ ನಿಲ್ದಾಣಗಳ ಮೂಲಕ ಭಾರತೀಯರನ್ನು ಕರೆ ತರಲಾಗುವುದು ಎಂದು ತಿಳಿಸಿದ್ದಾರೆ. 

ಯುದ್ಧ ಭೀತಿಯ ಬಗ್ಗೆ ಸರ್ಕಾರವು ಮೊದಲ ಸಲಹೆ ನೀಡುವ ವೇಳೆ ಉಕ್ರೇನಿನಲ್ಲಿ ಅಂದಾಜು 20,000 ವಿದ್ಯಾರ್ಥಿಗಳಿದ್ದರು, ಅವರಲ್ಲಿ 60% ವಿದ್ಯಾರ್ಥಿಗಳು ಅಂದರೆ  ಸರಿ ಸುಮಾರು 12,000 ವಿದ್ಯಾರ್ಥಿಗಳು ಭಾರತಕ್ಕೆ ಮರಳಿದ್ದಾರೆ ಎಂದು ಅವರು ತಿಳಿಸಿದ್ದಾರೆ. 

ಉಕ್ರೇನಿನಲ್ಲಿ ಉಳಿದಿರುವ 40% ವಿದ್ಯಾರ್ಥಿಗಳಲ್ಲಿ ಅರ್ಧದಷ್ಟು ಮಂದಿ ಯುದ್ಧಗ್ರಸ್ತ ಪ್ರದೇಶಗಳಾದ ಖಾರ್ಕಿವ್‌, ಸುಮಿ ಪ್ರದೇಶಗಳಲ್ಲಿ ಸಿಲುಕಿಕೊಂಡಿದ್ದಾರೆ. ಉಳಿದವರು ಉಕ್ರೇನಿನ ಪಶ್ಚಿಮ ಭಾಗಗಳಿಗೆ ತೆರಳಿದ್ದಾರೆ. ಅವರು ಸಂಘರ್ಷಮಯ ನೆಲಗಳಿಂದ ಹೊರಗಿದ್ದಾರೆ ಎಂದು ಶ್ರಿಂಗ್ಲಾ ಹೇಳಿದ್ದಾರೆ. 

ಸಂಘರ್ಷಮಯ ಭಾಗಗಳಲ್ಲಿ ಸಿಲುಕಿಕೊಂಡಿರುವ ವಿದ್ಯಾರ್ಥಿಗಳು ಸರ್ಕಾರ ತಮ್ಮ ನೆರವಿಗೆ ಏನೂ ಕ್ರಮ ಕೈಗೊಂಡಿಲ್ಲ ಎಂದು ಆರೋಪಿಸುವ ವಿಡಿಯೋಗಳು ಸಾಮಾಜಿಕ ಮಾಧ್ಯಮದಲ್ಲಿ ವ್ಯಾಪಕವಾಗಿ ಹರಿದಾಡಲು ಆರಂಭವಾದ ಬೆನ್ನಲ್ಲೇ ಸರ್ಕಾರದ ಮೇಲೆ ಒತ್ತಡ ಹೆಚ್ಚಿದೆ. ಸರ್ಕಾರ ತೆರವು ಕಾರ್ಯಾಚರಣೆ ಪ್ರಕ್ರಿಯೆಯನ್ನು ತೀವ್ರಗೊಳಿಸುತ್ತಿದೆ. ಪ್ರಧಾನಿ ಮೋದಿಯೇ 48 ಗಂಟೆಗಳೊಳಗೆ ಉನ್ನತ ಮಟ್ಟದ ನಾಲ್ಕು ಸಭೆಗಳನ್ನು ನಡೆಸಿದ್ದಾರೆ ndtv.com ವರದಿ ಮಾಡಿದೆ. 

ರಷ್ಯಾದ ಆಕ್ರಮಣವು ತೀವ್ರಗೊಳ್ಳುವ ಸಾಧ್ಯತೆಯಿರುವ ಕೀವ್‌ ನಗರವನ್ನು ಎಲ್ಲಾ ಭಾರತೀಯರೂ ತೊರೆದಿದ್ದಾರೆ. ಹಾಗೂ, ಕೀವ್‌ ನಗರದಲ್ಲಿದ್ದ ಭಾರತದ ರಾಯಭಾರ ಕಛೇರಿಯನ್ನೂ ಸ್ಥಗಿತಗೊಳಿಸಲಾಗಿದೆ. ಕೀವ್‌ ನಗರದಲ್ಲಿ ಭಾರತೀಯರು ಯಾರೂ ಉಳಿದಿಲ್ಲ ಎಂದು ನಮಗೆ ಮಾಹಿತಿ ಬಂದಿದೆ ಎಂದು ಶ್ರಿಂಗ್ಲಾ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News