‘‘ಸಾವಿನ ದವಡೆಯಿಂದ ಮಗ ಸೇರಿ ಹಲವು ಮಂದಿ ಸುರಕ್ಷಿತ’’
ಮಂಗಳೂರು, ಮಾ.2: ಕಳೆದ ಒಂದು ವಾರದಿಂದ ಆತಂಕದಲ್ಲೇ ದಿನ ಕಳೆದಿದ್ದ ನಮಗೆ ಕೊನೆಗೂ ಇಂದು ಮಧ್ಯಾಹ್ನ ಮಗ ಕ್ಲೇಟನ ತಾನು ಸುರಕ್ಷಿತವಾಗಿ ಉಕ್ರೇನ್‌ನಿಂದ ಸ್ಲೊವೇಕಿಯಾ ಗಡಿ ತಲುಪಿರುವುದನ್ನು ತಿಳಿಸಿದಾಗ ನೆಮ್ಮದಿ ಪಡುವಂತಾಯಿತು. ನನ್ನ ಮಗ ಸೇರಿ ಎಲ್ಲರೂ ಸುರಕ್ಷಿತವಾಗಿ ತಮ್ಮ ಮನೆಗಳಿಗೆ ತಲುಪಲಿ ಎಂಬುದೇ ನಮ್ಮ ಹಾರೈಕೆ ಮತ್ತು ಬೇಡಿಕೆ ಎಂದು ಮಂಗಳೂರು ಪಡೀಲ್ ನಿವಾಸಿ, ಉಕ್ರೇನ್‌ನಲ್ಲಿ ಎಂಬಿಬಿಎಸ್ ಓದುತ್ತಿರುವ ಕ್ಲೇಟನ್ ತಾಯಿ ಒಲಿನ್ ಮರಿಯಾ ಲಸ್ರಾದೊ ಅಭಿಪ್ರಾಯಿಸಿದ್ದಾರೆ.
‘‘ಉಕ್ರೇನ್‌ನಲ್ಲಿ ಯುದ್ಧದ ವಾತಾವರಣ ಸೃಷ್ಟಿಯಾದ ಬಳಿಕ ನಾವು ಪ್ರತಿಯೊಂದು ದಿನವನ್ನೂ ಆತಂಕದಲ್ಲೇ ಕಳೆದಿದ್ದೇವೆ. ಮಗ ಸೇರಿ ಅವನ ಸಹಪಾಠಿಗಳು, ಇತರರು ಉಕ್ರೇನ್‌ನ ಬಂಕರ್‌ಗಳಲ್ಲಿ ಪ್ರತಿ ಹೆಜ್ಜೆಗೂ ಆತಂಕದಲ್ಲೇ ಕಳೆಯುತ್ತಿರಬೇಕಾದರೆ, ನಮಗೆ ಆತನ ಸರಿಯಾದ ಸಂಪರ್ಕವೂ ಸಿಗದೆ ಪ್ರತಿಕ್ಷಣವನ್ನೂ ಆತಂಕದಲ್ಲೇ ಎದುರಿಸಿದ್ದೇವೆ. ನಿನ್ನೆ ಮದ್ಯಾಹ್ನದ ವೇಳೆಗೆ ಆತ ಹಾಗೂ ಇತರ 40ಕ್ಕೂ ಅಧಿಕ ಮಂದಿ ಉಕ್ರೇನ್ ಗಡಿ ದಾಟಿ ಸ್ಲೊವೇಕಿಯಾ ಸೇರಿರುವ ಬಗ್ಗೆ ಮಾಹಿತಿ ನೀಡಿದ್ದ. ಆ ಬಳಿಕ ಇಂದು ಮಧ್ಯಾಹ್ನ ಸ್ಲೊವೇಕಿಯಾದಿಂದ ವೀಡಿಯೋ ಕಾಲ್ ಮಾಡಿ ಕುಟುಂಬ ಸದಸ್ಯರ ಜತೆ ಮಾತನಾಡಿದಾಗ ನಮಗೆಲ್ಲಾ ನೆಮ್ಮದಿಯಾಯಿತು.
ಪ್ರಸ್ತುತ ಸ್ಲೊವೇಕಿಯಾದಲ್ಲಿ ಆತ ವಿಮಾನ ನಿಲ್ದಾಣದಿಂದ ಸುಮಾರು 800 ಕಿ.ಮೀ. ದೂರದಲ್ಲಿ ಸಹಪಾಠಿಗಳ ಜತೆ ಇರುವುದಾಗಿ ತಿಳಿಸಿದ್ದಾನೆ. ಭಾರತೀಯ ರಾಯಭಾರ ಕಚೇರಿಯ ಅಧಿಕಾರಿ ಸಿಬ್ಬಂದಿ ಅವರ ಸಂಪರ್ಕದಲ್ಲಿದ್ದು, ಸಹಕಾರ ನೀಡುತ್ತಿದ್ದಾರೆ ಎಂದೂ ಆತ ಹೇಳಿದ್ದಾನೆ’’ ಎಂದು ಒಲಿನ್ ‘ವಾರ್ತಾಭಾರತಿ’ ಜತೆ ಅನಿಸಿಕೆ ಹಂಚಿಕೊಂಡಿದ್ದಾರೆ.
‘‘ಉಕ್ರೇನ್‌ನ ಕೇವ್‌ನ ಬೊಗೊಮೊಲೆಟ್ಸ್ ನ್ಯಾಷನಲ್ ಮೆಡಿಕಲ್ ಯುನಿವರ್ಸಿಟಿ ಮತ್ತು ರಿಸರ್ಚ್ ಸೆಂಟರ್‌ನಲ್ಲಿ ಪ್ರಥಮ ವರ್ಷದ ಎಂಬಿಬಿಎಸ್ ವಿದ್ಯಾರ್ಥಿಯಾಗಿ ಕಳೆದ ಡಿಸೆಂಬರ್‌ನಲ್ಲಿ ಕ್ಲೇಟನ್ ಸೇರ್ಪಡೆಯಾಗಿದ್ದ. ಅಲ್ಲಿನ ಶಿಕ್ಷಣ ವ್ಯವಸ್ಥೆ ಅತ್ಯುತ್ತಮವಾಗಿದ್ದು, ಇಲ್ಲಿ ಎಲ್ಲಾ ಖರ್ಚು ವೆಚ್ಚ ಸೇರಿ ಎಂಬಿಬಿಎಸ್‌ಗಾಗಿ ಒಂದು ವರ್ಷಕ್ಕೆ ವ್ಯಯಿಸಬೇಕಾದ ಮೊತ್ತದಲ್ಲಿ ಅಲ್ಲಿ ಆರು ವರ್ಷಗಳ ಕಾಲ ಅತ್ಯುನ್ನತ ಶಿಕ್ಷಣ ಪಡೆಯಬಹುದು. ಹಾಗಾಗಿಯೇ ನಾವು ನಮ್ಮ ಮಗನ ಇಚ್ಚೆಯಂತೆ ಆತನನ್ನು ಅಲ್ಲಿಗೆ ಶಿಕ್ಷಣಕ್ಕಾಗಿ ಕಳುಹಿಸಿದ್ದೇವೆ. ಇದೀಗ ಆಕಸ್ಮಿಕವಾಗಿ ಸಂಕಷ್ಟ ಎದುರಾದ ಹಿನ್ನೆಲೆಯಲ್ಲಿ ಅಲ್ಲಿರುವ ಸಾವಿರಾರು ಜನರು ಭಾರತಕ್ಕೆ ವಾಪಾಸಾಗುವ ಪ್ರಸಂಗ ಎದುರಾಗಿದೆ. ಅದರಲ್ಲಿ ನನ್ನ ಮಗನೂ ಒಬ್ಬ. ಎಲ್ಲರೂ ಸುರಕ್ಷಿತವಾಗಿ ಬರಲೆಂಬುದು ನಮ್ಮ ಆಶಯ’’ ಎಂದು ಒಲಿನ್ ಹೇಳಿದ್ದಾರೆ.
ಜಿಲ್ಲಾಡಳಿತದ ಸಹಕಾರಕ್ಕೆ ಋಣಿ
‘‘ನಮ್ಮ ಜಿಲ್ಲಾಧಿಕಾರಿ ಡಾ. ರಾಜೇಂದ್ರ ಕೆ.ವಿ. ಸೇರಿದಂತೆ ಎಲ್ಲಾ ಅಧಿಕಾರಿಗಳು ಅತ್ಯಂತ ಉತ್ತಮ ರೀತಿಯಲ್ಲಿ ಸಹಕಾರ ನೀಡಿದ್ದಾರೆ. ನಿನ್ನೆ ನನ್ನ ಮಗ ಹಾಗೂ ಅವರ ಜತೆಗಿದ್ದವರು ಸ್ಲೊವೇಕಿಯಾದಲ್ಲಿ ಭಾರತೀಯ ರಾಯಭಾರ ಕಚೇರಿಗಾಗಿ ಹುಡುಕಾಟದಲ್ಲಿದ್ದು, ಆ ಬಗ್ಗೆ ನನಗೆ ಕರೆ ಮಾಡಿ ತಿಳಿಸಿದಾಗ ನಾನು ತಡ ರಾತ್ರಿ ಜಿಲ್ಲಾಧಿಕಾರಿಗೆ ಕರೆ ಮಾಡಿದ್ದರೂ ಅವರು ಕರೆ ಸ್ವೀಕರಿಸಿ ತಕ್ಷಣ ರಾಯಭಾರ ಕಚೇರಿಯ ಜತೆಗೆ ಸ್ಪಂದಿಸುವ ಕೆಲಸ ಮಾಡಿ ನನಗೂ ಅಲ್ಲಿನ ಅಧಿಕಾರಿಯಿಂದ ಕರೆ ಮಾಡಿಸಿ ಧೈರ್ಯ ತುಂಬಿದ್ದಾರೆ. ಒಬ್ಬ ಅಧಿಕಾರಿಯಾಗಿದ್ದುಕೊಂಡು ಅವರ ಸಾಮರ್ಥ್ಯಕ್ಕೆ ಮೀರಿ ಮಾಡಿದ ಅವರ ಸಹಕಾರಕ್ಕೆ ನಾವು ಎಂದಿಗೂ ಋಣಿ’’ -ಒಲಿನ್ ಮರಿಯಾ ಲಸ್ರಾದೊ
ಆತಂಕದ ನಡುವೆಯೂ ಪರಸ್ಪರ ಸಹಕಾರ
ಉಕ್ರೇನ್‌ನಿಂದ ಪಾರಾಗಿ ಸುರಕ್ಷಿತ ಜಾಗ ಸೇರುವುದು ಅಲ್ಲಿ ಆತಂಕದಲ್ಲಿರುವ ಪ್ರತಿಯೊಬ್ಬರ ಪ್ರಥಮ ಗುರಿಯಾಗಿದೆ. ಈ ನಡುವೆ ವಿದ್ಯಾರ್ಥಿಗಳು ಪರಸ್ಪರ ಸಹಕಾರವನ್ನು ನೀಡುತ್ತಿರುವ ಬೆಳವಣಿಗೆಯೂ ಕಂಡು ಬಂದಿದ್ದು, ಕ್ಲೇಟನ್ ಎಂಬ ವಿದ್ಯಾರ್ಥಿಯ ಬಗ್ಗೆ ಜತೆಯಾಗಿ ಉಕ್ರೇನ್ ಗಡಿ ದಾಟಿ ಸ್ಲೊವೇಕಿಯಾ ತಲುಪಿದ ವಿದ್ಯಾರ್ಥಿನಿಯೊಬ್ಬರು ಮೆಚ್ಚುಗೆ ಮಾತುಗಳಿಂದ ಕೂಡಿದ ಸಂದೇಶವನ್ನು ಹಂಚಿಕೊಂಡಿದ್ದಾರೆ.
ಇದಲ್ಲದೆ ತಮ್ಮ ಸಂದೇಶದಲ್ಲಿ ಅವರು ದ.ಕ. ಜಿಲ್ಲಾಧಿಕಾರಿಯವರಿಗೂ ಸೂಕ್ತ ಮಾರ್ಗದರ್ಶನಕ್ಕಾಗಿ ಕೃತಜ್ಞತೆ ಸಲ್ಲಿಸಿದ್ದಾರೆ.