ಬುಲ್ಲಿ ಬಾಯಿ ಆ್ಯಪ್ ಪ್ರಕರಣದ ಆರೋಪಿಯ ಜಾಮೀನು ಅರ್ಜಿಗೆ ಮುಂಬೈ ಕೋರ್ಟ್ ತಿರಸ್ಕಾರ
ಮುಂಬೈ, ಮಾ.2: ಬುಲ್ಲಿ ಬಾಯಿ ಆ್ಯಪ್ ಪ್ರಕರಣದ ಆರೋಪಿಗಳ ಪೈಕಿ ವಿಶಾಲ್ ಝಾ (21)ಎಂಬಾತ ಸಲ್ಲಿಸಿದ್ದ ಜಾಮೀನು ಅರ್ಜಿಯನ್ನು ತಿರಸ್ಕರಿಸಿರುವ ಮುಂಬೈನ ಸೆಷನ್ಸ್ ನ್ಯಾಯಾಲಯವು,ಆರೋಪಿಯ ಕಸ್ಟಡಿ ವಿಚಾರಣೆಯ ಅಗತ್ಯವಿದೆ ಎಂದು ಹೇಳಿದೆ.
ತನಿಖೆಯ ಈ ಹಂತದಲ್ಲಿ ಝಾ ಪಾತ್ರವನ್ನು ಇತರ ಆರೋಪಿಗಳಿಂದ ಪ್ರತ್ಯೇಕಿಸಲು ಸಾಧ್ಯವಿಲ್ಲ ಎಂದು ಅದು ಸ್ಪಷ್ಟಪಡಿಸಿದೆ. ಪ್ರಕರಣದಲ್ಲಿ ಪತ್ತೆಯಾಗಿರದ ಅಂಶಗಳ ತನಿಖೆಗಾಗಿ ಕಸ್ಟಡಿ ವಿಚಾರಣೆಯ ಅಗತ್ಯವಿದೆ. ಹೀಗಾಗಿ ತನಿಖೆಯು ಪ್ರಗತಿಯಲ್ಲಿರುವ ಈ ಹಂತದಲ್ಲಿ ಆರೋಪಿಯ ಜಾಮೀನು ಅರ್ಜಿಯನ್ನು ಅಂಗೀಕರಿಸಲು ಸಾಧ್ಯವಿಲ್ಲ ಎಂದು ನ್ಯಾ.ಸಂಜಶ್ರೀ ಘರಾತ್ ಅವರು ಹೇಳಿದರು.
ಇಂಜಿನಿಯರಿಂಗ್ ವಿದ್ಯಾರ್ಥಿಯಾಗಿರುವ ಝಾನನ್ನು ಜ.4ರಂದು ಬೆಂಗಳೂರಿನಲ್ಲಿ ಬಂಧಿಸಲಾಗಿತ್ತು. ಪೊಲೀಸ್ ಕಸ್ಟಡಿ ವಿಧಿಸಲ್ಪಟ್ಟಿದ್ದ ಆತ ಕೋವಿಡ್ ಸೋಂಕಿಗೆ ತುತ್ತಾದ ಬಳಿಕ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿತ್ತು. ಅದರ ಬೆನ್ನಲ್ಲೇ ಆತ ಜಾಮೀನು ಕೋರಿ ಸಲ್ಲಿಸಿದ್ದ ಅರ್ಜಿಯನ್ನು ಮ್ಯಾಜಿಸ್ಟ್ರೇಟ್ ನ್ಯಾಯಾಲಯವು ತಿರಸ್ಕರಿಸಿತ್ತು.
ಬಳಿಕ ಝಾ ಸೆಷನ್ಸ್ ನ್ಯಾಯಾಲಯದ ಮೆಟ್ಟಿಲನ್ನೇರಿದ್ದ.
ಆತನ ಜಾಮೀನು ಅರ್ಜಿ ತಿರಸ್ಕರಿಸಿದ ನ್ಯಾಯಾಲಯವು,ಬುಲ್ಲಿ ಬಾಯಿ ಆ್ಯಪ್ನ್ನು ಅಭಿವೃದ್ಧಿಗೊಳಿಸಿದ್ದ ನೀರಜ ಬಿಷ್ಣೋಯಿ ಅದಕ್ಕೆ ಝಾ ಸೇರಿದಂತೆ ಇತರ ಆರೋಪಿಗಳ ನೆರವು ಪಡೆದುಕೊಂಡಿದ್ದ. ಸದ್ರಿ ಆ್ಯಪ್ ಅನ್ನು ಮುಸ್ಲಿಂ ಮಹಿಳೆಯರ ವರ್ಚುವಲ್ ಹರಾಜಿಗೆ ಬಳಸಲಾಗಿತ್ತು. ನಿರ್ದಿಷ್ಟ ಸಮುದಾಯವೊಂದು ಆ್ಯಪ್ನ್ನು ಸೃಷ್ಟಿಸಿದೆ ಎಂದು ಬಿಂಬಿಸಲು ಪ್ರಯತ್ನಿಸಲಾಗಿತ್ತು. ಆದ್ದರಿಂದ ಅದು ನಿರ್ದಿಷ್ಟ ಸಮುದಾಯದ ಮಾನಹಾನಿ, ಭಾವನೆಗಳ ನೋವಿಗೆ ಕಾರಣವಾಗಿತ್ತು ಹಾಗೂ ಮಹಿಳೆಯರ ಘನತೆಗೆ ಹಾನಿಯನ್ನುಂಟು ಮಾಡಿತ್ತು ಎಂದು ತನ್ನ ಆದೇಶದಲ್ಲಿ ಹೇಳಿದೆ.