"ಲಸಿಕೆಯ ಮೊದಲ ಡೋಸ್ ಬಳಿಕವೂ ಪ್ರತಿಕಾಯಗಳು ಉತ್ಪತ್ತಿಯಾಗಿಲ್ಲ": ಆದಾರ್ ಪೂನಾವಾಲಾಗೆ ಕೋರ್ಟ್ ಸಮನ್ಸ್

Update: 2022-03-04 18:37 GMT
photo pti

ಲಕ್ನೋ,ಮಾ.4:ಕೋವಿಶೀಲ್ಡ್‌ನ ಲಸಿಕೆಯ ಮೊದಲ ಡೋಸ್ ತೆಗೆದುಕೊಂಡ ಬಳಿಕ ಆ್ಯಂಟಿಬಾಡಿ ಅಥವಾ ಪ್ರತಿಕಾಯಗಳು ಉತ್ಪತ್ತಿಯಾಗಿಲ್ಲ ಎಂದು ಆರೋಪಿಸಿ ಲಕ್ನೋದ ನಿವಾಸಿಯೋರ್ವ ದಾಖಲಿಸಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಇಲ್ಲಿಯ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯವು ಸೀರಮ್ ಇನ್‌ಸ್ಟಿಟ್ಯೂಟ್ ಆಫ್ ಇಂಡಿಯಾ  (ಎಸ್ಐಐ)ದ ಸಿಇಒ ಆದಾರ್ ಪೂನಾವಾಲಾ ಸೇರಿದಂತೆ ಏಳು ಜನರಿಗೆ ಎ.1ರಂದು ನ್ಯಾಯಾಲಯಕ್ಕೆ ಹಾಜರಾಗುವಂತೆ ಸಮನ್ಸ್ ಹೊರಡಿಸಿದೆ.

ಲಕ್ನೋದ ಆಶಿಯಾನಾ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ ದೂರಿನಲ್ಲಿ ಇತರರೊಂದಿಗೆ ಡಿಜಿಸಿಎ ನಿರ್ದೇಶಕ,ಆರೋಗ್ಯ ಸಚಿವಾಲಯದ ಜಂಟಿ ಕಾರ್ಯದರ್ಶಿ ಲವ ಅಗರವಾಲ್,ಐಸಿಎಂಆರ್ ನಿರ್ದೇಶಕ ಬಲರಾಮ ಭಾರ್ಗವ,ರಾಷ್ಟ್ರೀಯ ಆರೋಗ್ಯ ಅಭಿಯಾನದ ನಿರ್ದೇಶಕಿ ಅಪರ್ಣಾ ಉಪಾಧ್ಯಾಯ ಅವರನ್ನೂ ಹೆಸರಿಸಲಾಗಿದೆ.
ಎಪ್ರಿಲ್ 8ರಂದು ತಾನು ಕೋವಿಶೀಲ್ಡ್ ನ ಮೊದಲ ಡೋಸ್ ಪಡೆದಿದ್ದೆ. 28 ದಿನಗಳ ಬಳಿಕ ತಾನು ಎರಡನೇ ಡೋಸ್ ತೆಗೆದುಕೊಳ್ಳಬೇಕಿತ್ತು. ಅಂದು ತಾನು ಲಸಿಕೆ ಕೇಂದ್ರಕ್ಕೆ ತೆರಳಿದ್ದಾಗ ಎರಡನೇ ಡೋಸ್‌ನ ದಿನಾಂಕವನ್ನು ಆರು ವಾರಗಳಿಂದ ವಿಸ್ತರಿಸಲಾಗಿದೆ ಎಂದು ತನಗೆ ತಿಳಿಸಲಾಗಿತ್ತು. ಬಳಿಕ ಸರಕಾರವು ಎರಡು ಡೋಸ್‌ಗಳ  ನಡುವಿನ ಅಂತರವನ್ನು 12 ವಾರಗಳಿಗೆ ವಿಸ್ತರಿಸಿತ್ತು ಎಂದು ದೂರಿನಲ್ಲಿ ತಿಳಿಸಿರುವ ಪ್ರತಾಪಚಂದ್ರ,ಮೊದಲ ಡೋಸ್ ಪಡೆದ ಬಳಿಕ ತನ್ನ ಆರೋಗ್ಯ ಸರಿಯಿರಲಿಲ್ಲ. ಕೋವಿಶೀಲ್ಡ್‌ನ ಮೊದಲ ಡೋಸ್ ಬಳಿಕ ಹೆಚ್ಚಿನ ಪ್ರತಿಕಾಯಗಳು ಶರೀರದಲ್ಲಿ ಉತ್ಪತ್ತಿಯಾಗುತ್ತವೆ ಎಂದು ಭಾರ್ಗವ ಮಾಧ್ಯಮ ಹೇಳಿಕೆಗಳಲ್ಲಿ ತಿಳಿಸಿದ್ದರು. ತಾನು ಸರಕಾರದ ಮಾನ್ಯತೆಯನ್ನು ಹೊಂದಿರುವ ಲ್ಯಾಬ್‌ನಲ್ಲಿ ಕೋವಿಡ್ ಆ್ಯಂಟಿಬಾಡಿ ಜಿಟಿ ಪರೀಕ್ಷೆಯನ್ನು ಮಾಡಿಸಿದಾಗ ಯಾವುದೇ ಪ್ರತಿಕಾಯಗಳು ಉತ್ಪತ್ತಿಯಾಗಿಲ್ಲ,ಬದಲಾಗಿ ತನ್ನ ಪ್ಲೇಟ್‌ಲೆಟ್‌ಗಳ ಸಂಖ್ಯೆ ಮೂರು ಲಕ್ಷದಿಂದ ಒಂದೂವರೆ ಲಕ್ಷಕ್ಕೆ ಇಳಿದಿದೆ ಎಂದು ತಿಳಿದುಬಂದಿತ್ತು ಎಂದು ಹೇಳಿದ್ದಾರೆ. ಲಸಿಕೆಯನ್ನು ತೆಗೆದುಕೊಂಡ ಬಳಿಕ ತನ್ನ ಪ್ಲೇಟ್‌ಲೆಟ್‌ಗಳ ಸಂಖ್ಯೆ ಅರ್ಧದಷ್ಟು ಕಡಿಮಯಾಗಿರುವುದರಿಂದ ತಾನು ವೈರಸ್‌ಗೆ ತುತ್ತಾಗುವ ಹೆಚ್ಚಿನ ಅಪಾಯವನ್ನು ಎದುರಿಸುತ್ತಿದ್ದೇನೆ ಎಂದು ಅವರು ಆಪಾದಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News