ಉಕ್ರೇನ್‌ನಲ್ಲಿ ಇನ್ನೂ 3 ಸಾವಿರ ಭಾರತೀಯರು ಸಿಲುಕಿಕೊಂಡಿದ್ದಾರೆ: ಕೇಂದ್ರ ಸ್ಪಷ್ಟನೆ

Update: 2022-03-05 02:22 GMT

ಹೊಸದಿಲ್ಲಿ: ಯುದ್ಧಪೀಡಿತ ಉಕ್ರೇನ್‌ನಲ್ಲಿ ಸಿಲುಕಿಕೊಂಡಿರುವ ಸುಮಾರು 20 ಸಾವಿರ ಮಂದಿ ಭಾರತೀಯರು ಇದೀಗ ಉಕ್ರೇನ್ ತೊರೆದಿದ್ದು, ಸುಮಿ ಮತ್ತು ಖಾರ್ಕಿವ್ ಹೀಗೆ ಎರಡು ಪ್ರದೇಶದಲ್ಲಿ ಅಧಿಕ ಸಂಖ್ಯೆಯ ಭಾರತೀಯರು ಇದ್ದಾರೆ. ಇನ್ನೂ ಸುಮಾರು 3000 ಮಂದಿ ಭಾರತೀಯರು ಉಕ್ರೇನ್‌ನಲ್ಲಿದ್ದಾರೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯ ಪ್ರಕಟಿಸಿದೆ.

"ಸುಮಿ ಪ್ರದೇಶದಲ್ಲಿ ಸುಮಾರು 700ಕ್ಕೂ ಅಧಿಕ ಭಾರತೀಯರಿದ್ದಾರೆ. ಈ ಸಂಘರ್ಷ ವಲಯದಲ್ಲಿ ದೊಡ್ಡ ಪ್ರಮಾಣದ ಶೆಲ್ ದಾಳಿ ನಡೆಯುತ್ತಿದೆ. ತೆರವು ಕಾರ್ಯಾಚರಣೆಯನ್ನೂ ಇಲ್ಲಿ ನಿರ್ಬಂಧಿಸಲಾಗಿದೆ. ಎಲ್ಲ ಸಾಧ್ಯತೆಗಳನ್ನು ನಾವು ಪರಿಶೀಲಿಸುತ್ತಿದ್ದೇವೆ. ರಷ್ಯಾ ಗಡಿಯ ಮೂಲಕ ಪಶ್ಚಿಮಮುಖಿ ತೆರವು ಕಾರ್ಯಾಚರಣೆ ನಮ್ಮ ಮುಂದಿರುವ ಒಂದು ಆಯ್ಕೆ. ಆದರೆ ಇದು ಸಂಘರ್ಷ ವಲಯದಿಂದ 60 ಕಿಲೋಮೀಟರ್ ದೂರ ಇರುವುದರಿಂದ ಜನರ ಜೀವದ ಬಗ್ಗೆ ರಿಸ್ಕ್ ತೆಗೆದುಕೊಳ್ಳುವಂತಿಲ್ಲ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಳಯ ವಕ್ತಾರ ಅರೀಂದಮ್ ಬಗ್ಚಿ ಹೇಳಿದ್ದಾರೆ.

ಸಿಲುಕಿಕೊಂಡಿರುವ ಭಾರತೀಯರನ್ನು ಸುರಕ್ಷಿತವಾಗಿ ಹೊರಕ್ಕೆ ಕರೆತರಲು ಕದನ ವಿರಾಮ ಸಾಧ್ಯತೆಯನ್ನು ಭಾರತ ನಿರೀಕ್ಷಿಸಿದೆ. ಖಾರ್ಕಿವ್ ನಲ್ಲಿ ಸುಮಾರು 300 ಮಂದಿ ಭಾರತೀಯರು ಸಿಲುಕಿಕೊಂಡಿದ್ದು, ಇವರ ಸ್ಥಳಾಂತರಕ್ಕೂ ನಿರಂತರ ಶೆಲ್ಲಿಂಗ್ ಸವಾಲಾಗಿ ಪರಿಣಮಿಸಿದೆ.

ಇದುವರೆಗೆ 20 ಸಾವಿರ ಭಾರತೀಯರನ್ನು ಸ್ಥಳಾಂತರಿಸಲಾಗಿದೆ. ತೆರವು ಕಾರ್ಯಾಚರಣೆ ಆರಂಭವಾದ ಬಳಿಕ 48 ವಿಮಾನಗಳಲ್ಲಿ ಭಾರತೀಯರನ್ನು ಕರೆ ತರಲಾಗಿದೆ. ಸುಮಾರು 16 ವಿಮಾನಗಳು ಉಕ್ರೇನ್‌ನ ನೆರೆಯ ದೇಶಗಳಿಂದ ಭಾರತಕ್ಕೆ ಆಗಮಿಸಲಿವೆ. ಇದುವರೆಗೆ 10500 ಭಾರತೀಯರು ಭಾರತಕ್ಕೆ ಮರಳಿದ್ದಾರೆ. ಉಕ್ರೇನ್ ಗಡಿಯ ಹೊರಗಿರುವ ಬಹುತೇಕ ಭಾರತೀಯರು ಶನಿವಾರದ ಒಳಗಾಗಿ ಸ್ವದೇಶಕ್ಕೆ ಆಗಮಿಸಲಿದ್ದಾರೆ ಎಂದು ಸರ್ಕಾರ ಹೇಳಿಕೆ ನೀಡಿದೆ.

ಇನ್ನೂ ಸುಮಾರು 2 ಸಾವಿರದಿಂದ 3 ಸಾವಿರ ಭಾರತೀಯರು ಉಕ್ರೇನ್‌ನಲ್ಲಿ ಉಳಿದಿದ್ದಾರೆ. ಈ ಹಿಂದೆ ಅಂದಾಜಿಸಲಾಗಿದ್ದ 20 ಸಾವಿರಕ್ಕಿಂತ ಹೆಚ್ಚಿನ ಸಂಖ್ಯೆಯಲ್ಲಿ ಭಾರತೀಯರು ಇದ್ದು, ಬಹುಶಃ ಇವರು ರಾಯಭಾರ ಕಚೇರಿಯಲ್ಲಿ ನೋಂದಾಯಿಸಿಕೊಂಡಿಲ್ಲ ಎಂದು ಮೂಲಗಳು ಹೇಳಿವೆ.

ಏತನ್ಮಧ್ಯೆ ನೆರೆಯ ಬಾಂಗ್ಲಾದೇಶ ಮತ್ತು ನೇಪಾಳದ ವಿದ್ಯಾರ್ಥಿಗಳು ಕೂಡಾ ತಮ್ಮನ್ನು ಸುರಕ್ಷಿತವಾಗಿ ಸ್ಥಳಾಂತರಿಸುವಂತೆ ಭಾರತಕ್ಕೆ ಮನವಿ ಮಾಡುತ್ತಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News