ಅಮೆರಿಕದ ಟ್ಯಾಂಕ್ ನಿರೋಧಕ ಕ್ಷಿಪಣಿ ಬಳಸಿ ರಶ್ಯಾದ 280 ಟ್ಯಾಂಕ್ ನಾಶಗೊಳಿಸಿದ ಉಕ್ರೇನ್: ಪತ್ರಕರ್ತರ ವರದಿ

Update: 2022-03-05 04:35 GMT

 
ಹೊಸದಿಲ್ಲಿ, ಮಾ.4: ತಮಗಿಂತ ಹಲವು ಪಟ್ಟು ಹೆಚ್ಚಿರುವ ರಶ್ಯಾದ ಪಡೆಯ ವಿರುದ್ಧ ಕೆಚ್ಚೆದೆಯಿಂದ ಹೋರಾಡುತ್ತಿರುವ ಉಕ್ರೇನ್ ಸೇನೆಯ ಬಳಿ ಅಮೆರಿಕ ಒದಗಿಸಿದ, ಕೈಯಿಂದಲೇ ಉಡಾಯಿಸಬಹುದಾದ ಟ್ಯಾಂಕ್ ನಿರೋಧಕ ಕ್ಷಿಪಣಿಗಳಿದ್ದು ಇದುವರೆಗೆ ರಶ್ಯಾದ 280ಕ್ಕೂ ಹೆಚ್ಚು ಟ್ಯಾಂಕ್ಗಳು ನಾಶವಾಗಿವೆ ಮತ್ತು ರಶ್ಯಾದ ಹಲವು ಸೈನಿಕರು ಹತರಾಗಿದ್ದಾರೆ ಎಂದು ಯುದ್ಧರಂಗದ ವರದಿ ಮಾಡುತ್ತಿರುವ ಅಮೆರಿಕದ ಪತ್ರಕರ್ತರು ವರದಿ ಮಾಡಿದ್ದಾರೆ.
 
ಉಕ್ರೇನ್ ಯೋಧರು 300 ಅಮೆರಿಕದ ಜಾವೆಲಿನ್ ಕ್ಷಿಪಣಿಗಳನ್ನು ಹಾರಿಸಿದ್ದು ಇದರಲ್ಲಿ ಕನಿಷ್ಟ 280 ಟ್ಯಾಂಕ್ಗಳು ನಾಶವಾಗಿವೆ. ಅಂದರೆ 93% ಕ್ಷಿಪಣಿ ಯಶಸ್ವಿಯಾಗಿದೆ ಎಂದು ಅಮೆರಿಕದ ಯುದ್ಧಕಾರ್ಯಾಚರಣೆಯ ವಿಶೇಷ ಅಧಿಕಾರಿಗಳನ್ನು ಉಲ್ಲೇಖಿಸಿ ಪತ್ರಕರ್ತ ಜ್ಯಾಕ್ ಮರ್ಫಿ ವರದಿ ಮಾಡಿದ್ದಾರೆ.

ಯುದ್ಧರಂಗದಲ್ಲಿ ಬಳಕೆಯಾಗುವ ಟ್ಯಾಂಕ್ ಗಳ ಮೇಲ್ಭಾಗವನ್ನು ಹೊರತುಪಡಿಸಿ ಇತರ ಎಲ್ಲಾ ಭಾಗಗಳು ಗಟ್ಟಿಯಾಗಿರುತ್ತವೆ. ವಿಮಾನ ಮಾರ್ಗದ ಮೂಲಕ ಸಾಗುವ ಜಾವೆಲಿನ್ ಕ್ಷಿಪಣಿಗಳು ಟ್ಯಾಂಕ್ ನ ಮೇಲ್ಭಾಗಕ್ಕೆ ಅಪ್ಪಳಿಸುತ್ತವೆ. ಅಗತ್ಯ ಬಿದ್ದರೆ ಗುಂಡು ಹಾರಿಸುವಂತೆ, ನೇರವಾಗಿ ಎದುರಿನ ಗುರಿಗೆ ಈ ಕ್ಷಿಪಣಿಯನ್ನು ಉಡಾಯಿಸಬಹುದು. ಜಾವೆಲಿನ್ ಕ್ಷಿಪಣಿಯ ಪ್ರಥಮ ಕಂತು 2018ರಲ್ಲಿ ಉಕ್ರೇನ್ಗೆ ಪೂರೈಕೆಯಾಗಿದೆ. ಕ್ಷಿಪಣಿ ಮತ್ತು ಅದಕ್ಕೆ ಸಂಬಂಧಿಸಿದ ತರಬೇತಿ ಸೇರಿದಂತೆ 75 ಮಿಲಿಯನ್ ಡಾಲರ್ ಮೊತ್ತದ ಒಪ್ಪಂದ ಇದಾಗಿದೆ. ಜಾವೆಲಿನ್ ಕ್ಷಿಪಣಿಯನ್ನು ಒಬ್ಬ ಯೋಧ ಹೆಗಲ ಮೇಲೆ ಹೊತ್ತೊಯ್ದು ಸುಲಭವಾಗಿ ಉಡಾಯಿಸಬಹುದು ಎಂದು ಮರ್ಫಿ ಮಾಹಿತಿ ನೀಡಿದ್ದಾರೆ.

ಉಕ್ರೇನ್ ಯೋಧರ ಬಳಿ ಜಾವೆಲಿನ್ ಕ್ಷಿಪಣಿ ಇರುವುದನ್ನು ಅರಿತುಕೊಂಡ ರಶ್ಯಾ, ತನ್ನ ಟಿ-72 ಟ್ಯಾಂಕ್ ಪಡೆಯನ್ನು ಮುಂಚೂಣಿ ನೆಲೆಯಿಂದ ವಾಪಾಸು ಪಡೆದುಕೊಂಡಿದೆ ಎಂದು ಅಮೆರಿಕದ ಸೇನಾಧಿಕಾರಿಗಳು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News