ವಿದೇಶದಲ್ಲಿ ವೈದ್ಯಕೀಯ ಪದವಿ ಪಡೆದವರು ಪರೀಕ್ಷೆಯ ನಂತರ ಭಾರತದಲ್ಲಿ ಇಂಟರ್ನ್ ಶಿಪ್ ಪೂರ್ಣಗೊಳಿಸಬಹುದು: ಎನ್ ಎಂಸಿ
ಹೊಸದಿಲ್ಲಿ: ಕೋವಿಡ್ ಕಾರಣ ಅಥವಾ ಉಕ್ರೇನ್‍ನಲ್ಲಿ ನಡೆಯುತ್ತಿರುವಂತಹ ಯುದ್ಧಂತಹ ಕೆಲವೊಂದು ಕೈಮೀರಿದ ಪ್ರಕರಣಗಳಿಂದಾಗಿ ಇಂಟರ್ನ್‍ಶಿಪ್ ಪೂರ್ಣಗೊಳಿಸಲು ಸಾಧ್ಯವಾಗದ ವಿದೇಶದಲ್ಲಿ ವೈದ್ಯಕೀಯ ಪದವಿ ಪಡೆದವರು ಭಾರತದಲ್ಲಿ ಒಂದು ಪರೀಕ್ಷೆಯಲ್ಲಿ ತೇರ್ಗಡೆಗೊಂಡ ನಂತರ ಇಲ್ಲಿ ತಮ್ಮ ಇಂಟರ್ನ್‍ಶಿಪ್ ಪೂರ್ಣಗೊಳಿಸಬಹುದು ಎಂದು ರಾಷ್ಟ್ರೀಯ ವೈದ್ಯಕೀಯ ಆಯೋಗ(ಎನ್ ಎಂಸಿ) ಹೇಳಿದೆ.
ವಿದ್ಯಾರ್ಥಿಗಳು ಫಾರಿನ್ ಮೆಡಿಕಲ್ ಗ್ರಾಜುವೇಟ್ ಪರೀಕ್ಷೆಯಲ್ಲಿ ತೇರ್ಗಡೆಗೊಂಡಲ್ಲಿ ಭಾರತದಲ್ಲಿ ಇಂಟರ್ನ್‍ಶಿಪ್ ಪೂರ್ಣಗೊಳಿಸಲು ಅವರು ಸಲ್ಲಿಸುವ ಅರ್ಜಿಗಳನ್ನು ಆಯಾ ರಾಜ್ಯಗಳ ವೈದ್ಯಕೀಯ ಮಂಡಳಿಗಳು ಪರಿಗಣಿಸಬಹುದಾಗಿದೆ ಎಂದು ಆಯೋಗ ಹೇಳಿದೆ.
ಆಯೋಗದ ಈ ಕ್ರಮವು ಉಕ್ರೇನ್‍ನಿಂದ ವಾಪಸ್ ಬಂದಿರುವ ನೂರಾರು ವೈದ್ಯಕೀಯ ವಿದ್ಯಾರ್ಥಿಗಳಿಗೆ ಪ್ರಯೋಜನಕಾರಿಯಾಗಲಿದೆ.
"ರಾಷ್ಟ್ರೀಯ ವೈದ್ಯಕೀಯ ಮಂಡಳಿ ನಡೆಸುವ ಫಾರಿನ್ ಮೆಡಿಕಲ್ ಗ್ರಾಜುವೇಟ್ ಪರೀಕ್ಷೆಯಲ್ಲಿ ಅಭ್ಯರ್ಥಿಗಳು ತೇರ್ಗಡೆಯಾಗಿದ್ದಾರೆಂಬುದನ್ನು ಖಾತ್ರಿಪಡಿಸಿಕೊಂಡು ರಾಜ್ಯ ವೈದ್ಯಕೀಯ ಮಂಡಳಿಗಳು 12 ತಿಂಗಳು ಇಂಟರ್ನ್‍ಶಿಪ್ ಅಥವಾ ಬಾಕಿ ಅವಧಿಯ ಇಂಟರ್ನ್‍ಶಿಪ್‍ಗೆ ಇಲ್ಲಿ ಅನುಮೋದನೆ ನೀಡಬಹುದಾಗಿದೆ,'' ಎಂದು ಆಯೋಗದ ಸುತ್ತೋಲೆ ತಿಳಿಸಿದೆ.
ಈ ರೀತಿ ವಿದೇಶಗಳಲ್ಲಿ ವೈದ್ಯಕೀಯ ಪದವಿ ಪೂರೈಸಿದ ಅಭ್ಯರ್ಥಿಗಳಿಗೆ ಇಂಟರ್ನ್‍ಶಿಪ್‍ಗಾಗಿ ಯಾವುದೇ ಶುಲ್ಕ ವಿಧಿಸಬಾರದೆಂದು ಆಯಾ ವೈದ್ಯಕೀಯ ಕಾಲೇಜಿಂದ ಲಿಖಿತ ಭರವಸೆಯನ್ನು ರಾಜ್ಯ ವೈದ್ಯಕೀಯ ಮಂಡಳಿಗಳು ಪಡೆಯಬೇಕು ಎಂದು ಆಯೋಗ ಹೇಳಿದೆ.
"ಸರಕಾರಿ ವೈದ್ಯಕೀಯ ಕಾಲೇಜುಗಳಲ್ಲಿ ಇಂಟರ್ನ್‍ಶಿಪ್ ನಡೆಸುವ ಭಾರತೀಯ ವೈದ್ಯಕೀಯ ಪದವೀಧರರಿಗೆ ದೊರಕುವಷ್ಟೇ ಸ್ಟೈಪೆಂಡ್ ಅನ್ನು ವಿದೇಶಿ ವೈದ್ಯಕೀಯ ವಿದ್ಯಾರ್ಥಿಗಳಿಗೆ ನೀಡಬೇಕು,'' ಎಂದು ಸುತ್ತೋಲೆ ತಿಳಿಸಿದೆ.