×
Ad

ಇದು ನಮ್ಮ ಕೊನೆಯ ವೀಡಿಯೋ ಎಂದ ಉಕ್ರೇನ್‍ನಲ್ಲಿ ಸಿಲುಕಿರುವ ಭಾರತೀಯ ವಿದ್ಯಾರ್ಥಿಗಳು

Update: 2022-03-05 17:38 IST
Photo: NDTV

ಹೊಸದಿಲ್ಲಿ: ಯುದ್ಧಪೀಡಿತ ಉಕ್ರೇನ್ ರಾಜಧಾನಿ ಕ್ಯೀವ್ ಹಾಗೂ ಅಲ್ಲಿನ ಸುಮಿ ನಗರದಲ್ಲಿ ಇನ್ನೂ ಅತಂತ್ರ ಸ್ಥಿತಿಯಲ್ಲಿರುವ ಹಲವು ಭಾರತೀಯ ವಿದ್ಯಾರ್ಥಿಗಳನ್ನು ಅಲ್ಲಿಂದ ಸುರಕ್ಷಿತವಾಗಿ ಹೊರತರುವ ನಿಟ್ಟಿನಲ್ಲಿ ಆ ವಿದ್ಯಾರ್ಥಿಗಳಿಗೆ ಸುರಕ್ಷಿತ ಹಾದಿ ಒದಗಿಸಲು ಉಕ್ರೇನ್ ಮತ್ತು ರಷ್ಯಾ ಸರಕಾರಗಳನ್ನು ಹಲವಾರು ಬಾರಿ ಕೇಳಿಕೊಂಡಿದ್ದಾಗಿ ಹಾಗೂ ಸಚಿವಾಲಯ ಮತ್ತು ರಾಯಭಾರ ಕಚೇರಿಗಳು ವಿದ್ಯಾರ್ಥಿಗಳ ಜತೆ ನಿರಂತರ ಸಂಪರ್ಕದಲ್ಲಿರುವುದಾಗಿ ವಿದೇಶಾಂಗ ಸಚಿವಾಲಯ ಇಂದು ಹೇಳಿದೆ. ಆದರೆ ತಮ್ಮನ್ನು ಸುರಕ್ಷಿತವಾಗಿ ತಾಯ್ನಾಡಿಗೆ ವಾಪಸ್ ಕಳುಹಿಸಿಕೊಡುವಂತೆ ಅತಂತ್ರರಾಗಿರುವ ಹಲವು ವಿದ್ಯಾರ್ಥಿಗಳು ಮನವಿ ಮಾಡುತ್ತಿದ್ದಾರೆ.

"ಮುನ್ನೆಚ್ಚರಿಕೆ ವಹಿಸುವಂತೆ, ಆಶ್ರಯತಾಣಗಳ ಒಳಗೆ ಇರುವಂತೆ ಹಾಗೂ ಅನಗತ್ಯವಾಗಿ ಹೊರಬಾರದಂತೆ ವಿದ್ಯಾರ್ಥಿಗಳಿಗೆ ಸಲಹೆ ನೀಡಲಾಗಿದೆ,'' ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯದ ಅಧಿಕೃತ ವಕ್ತಾರ ಅರಿಂದಮ್ ಬಾಗ್ಚಿ ಹೇಳಿದ್ದಾರೆ.

ಸುಮಾರು 50 ಕಿಮೀ ದೂರವಿರುವ ರಷ್ಯಾ ಗಡಿ ತನಕ ತಾವು ಹೋಗುವುದಾಗಿ ಉಕ್ರೇನ್‍ನ ಸುಮಿ ನಗರದಲ್ಲಿ ಸಿಲುಕಿರುವ ಹಲವು ವಿದ್ಯಾರ್ಥಿಗಳು ವೀಡಿಯೋ ಮೂಲಕ ಹೇಳಿದ ನಂತರ ಸರಕಾರದಿಂದ ಸಲಹೆ ಬಂದಿದೆ.

ವಿದ್ಯಾರ್ಥಿಗಳು ಇದು ತಮ್ಮ ಕೊನೆಯ ವೀಡಿಯೋ, ನಮಗೇನಾದರೂ ಆದರೆ ಭಾರತ ಸರಕಾರ ಮತ್ತು ಉಕ್ರೇನ್‍ನಲ್ಲಿನ ಅದರ ದೂತಾವಾಸ ಕಾರಣ ಎಂದೂ ವೀಡಿಯೋದಲ್ಲಿ ಹೇಳಿಕೊಂಡಿದ್ದರು.

ಆದರೆ ದೂತಾವಾಸದ ಅಧಿಕಾರಿಗಳು ಸಂಪರ್ಕ ಸಾಧಿಸಿದ ನಂತರ ವಿದ್ಯಾರ್ಥಿಗಳು ತೆರಳದೇ ಇರಲು ನಿರ್ಧರಿಸಿದ್ದಾರೆ. ಅವೆರಲ್ಲರೂ ಸುಮಿ ವಿವಿ ಕ್ಯಾಂಪಸ್ಸಿನಿಂದ ವೀಡಿಯೋ ಪೋಸ್ಟ್ ಮಾಡಿದ್ದರು ಹಾಗೂ "ನಮಗಾಗಿ ಪ್ರಾರ್ಥಿಸಿ ಇದು ನಮ್ಮ ಕೊನೆಯ ವೀಡಿಯೋ'' ಎಂದೂ ಹೇಳಿಕೊಂಡಿದ್ದರು.

ಸುಮಿ ಸ್ಟೇಟ್ ಯುನಿವರ್ಸಿಟಿಯ ಮೆಡಿಕಲ್ ಇನ್‍ಸ್ಟಿಟ್ಯೂಟ್‍ನ ಹಾಸ್ಟೆಲುಗಳಲ್ಲಿ 800ರಿಂದ 900 ಮಂದಿ ಕಳೆದೊಂದು ವಾರದಿಂದ ಇದ್ದು ಅವರ ಬಳಿ ಸಾಕಷ್ಟು ಆಹಾರ ಮತ್ತು ನೀರು ಕೂಡ ಇಲ್ಲ ಎಂದು ವಿದ್ಯಾರ್ಥಿಗಳು ಅಲವತ್ತುಕೊಂಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News