ನಿರೀಕ್ಷೆಯನ್ನು ಹುಸಿಗೊಳಿಸಿದ ಟೋಕಿಯೊ ಕ್ರೀಡಾಚಿತ್ರ

Update: 2022-03-05 19:30 GMT

ಮಾನವೀಯ ಸೆಲೆಗಳನ್ನು ಅನಾವರಣಗೊಳಿಸುವ ನಿರ್ದೇಶಕನಾಗಿ ಜಪಾನ್‌ನಲ್ಲಿ ಪ್ರಸಿದ್ಧನಾಗಿದ್ದ ಇಚಿಕವನಿಗೆ ಅದು ಮೊದಲನೆಯ ಸಾಕ್ಷಚಿತ್ರ. ಒಲಿಂಪಿಕ್ ಆಂದೋಲನದ ಬಗ್ಗೆ ಇರಲಿ, ಕ್ರೀಡೆಯ ಬಗ್ಗೆ ಯಾವ ಆಸಕ್ತಿಯೂ ಇರಲಿಲ್ಲ. ಆತ ತನ್ನ ಚಿತ್ರ ರೂಪಿಸಲು ಮಾಡಿದ ಮೊದಲ ಕೆಲಸವೆಂದರೆ ಲೀನಿ ರೀಫಿನ್‌ಸ್ಟಾಯ್ಲಾಳ ಚಿತ್ರವನ್ನು ಸಾದ್ಯಂತವಾಗಿ ಅಭ್ಯಾಸ ಮಾಡಿದ್ದು. ಹಾಗಾಗಿ ಆ ಚಿತ್ರಕ್ಕಿಂತ ಭಿನ್ನವಾಗಿ ಚಿತ್ರಮಾಡಲು ನಿರ್ಧರಿಸಿದ. ಆ ನಿರ್ಧಾರವು ಚಿತ್ರವು ನಿರೀಕ್ಷೆಯನ್ನು ಹುಸಿಗೊಳಿಸಲು ನೆರವಾಯಿತು.


ನಿರ್ದೇಶಕಿ ಲೀನಿ ರೀಫಿನ್‌ಸ್ಟಾಯ್ಲಾ ಒಂದು ನಾಝಿ ಪ್ರಚಾರದ ರೀತಿಯಲ್ಲಿ ಕ್ರೀಡಾಸಾಕ್ಷ ಚಿತ್ರವನ್ನು ತೆಗೆಯಬೇಕೆಂಬ ಗುರಿಯಿಂದ ವಿಮುಖಳಾಗಿ ಕ್ರೀಡೆಯ ಒಂದು ಕಲಾತ್ಮಕ ಚಾರಿತ್ರಿಕವಾದ ದಾಖಲೆಯನ್ನು ಸೃಷ್ಟಿಸಿದಳು. ಆದರೆ ಅವಳಷ್ಟೇ ಸ್ವಾತಂತ್ರ್ಯವನ್ನು ವಹಿಸಿದ ಜಪಾನಿನ ಚಿತ್ರ ನಿರ್ದೇಶಕ ಕಾನ್ ಇಚಿಕವ ರೂಪಿಸಿದ, 1964ರಲ್ಲಿ ನಡೆದ ಟೋಕಿಯೊ ಒಲಿಂಪಿಕ್ ಕೂಟದ ಸಾಕ್ಷಚಿತ್ರ ನಿರೀಕ್ಷೆಯನ್ನು ಹುಸಿಗೊಳಿಸಿತು. ಇದು ಪ್ರೇಕ್ಷಕರ ದೃಷ್ಟಿಯಿಂದ ನೀರಸ ದಾಖಲೆಯಾದರೆ ಜಪಾನ್ ಸರಕಾರಕ್ಕೆ ಬೇಡವಾದ ಕೂಸೆನಿಸಿತು. ಆದರೆ ಕ್ರೀಡಾ ಸಾಕ್ಷಚಿತ್ರಗಳ ಇತಿಹಾಸದಲ್ಲಿ ಇವೆರಡೂ ಇಂದಿಗೂ ಅತ್ಯಂತ ಮುಖ್ಯ ಪ್ರಯತ್ನಗಳಾಗಿ ಚರ್ಚೆಯಲ್ಲಿವೆ. ಹಾಗೆಯೇ ಅವು ರೂಪಗೊಂಡ ಐತಿಹಾಸಿಕ ಸಂದರ್ಭ, ಚಲನಚಿತ್ರ ತಂತ್ರಜ್ಞಾನದ ಬೆಳವಣಿಗೆ ಮತ್ತು ಕ್ರೀಡಾಕೂಟವನ್ನು ದಾಖಲಿಸಲು ಬಳಸಿದ ನಿರೂಪಣಾ ವಿಧಾನಗಳನ್ನು ಆಧರಿಸಿ ಎರಡನ್ನು ಹೋಲಿಸಿ ಮೌಲ್ಯಮಾಪನ ಮಾಡುವ ಪರಿಪಾಟವಿದೆ. ಎರಡೂ ಚಿತ್ರಗಳ ವಿಶೇಷವೆಂದರೆ ಟೀಕಾಕಾರರು ಇರುವಷ್ಟೇ ಅವುಗಳ ಅಭಿಮಾನಿಗಳಿರುವುದು. ಆದರೂ ಬಹುತೇಕ ವಿಮರ್ಶಕರ ಅಭಿಪ್ರಾಯದ ಪ್ರಕಾರ ಮಿತಿಗಳ ನಡುವೆಯೂ ಅದ್ಭುತ ದೃಶ್ಯ ಸರಣಿಯನ್ನು ಅರಳಿಸಿದ ಲೀನಿ ರೀಫಿನ್‌ಸ್ಟಾಯ್ಲಾಳ ಚಿತ್ರವು ಒಂದು ಕಲಾತ್ಮಕ ಗೆಲುವು.

 ರೀಫಿನ್‌ಸ್ಟಾಯ್ಲಾಳ ಪ್ರಯತ್ನವು ಎರಡನೇ ಮಹಾಯುದ್ಧ ಆರಂಭವಾಗುವ ಅಥವಾ ಮುನ್ಸೂಚನೆಯಿದ್ದ ಮತ್ತು ಜರ್ಮನಿಯು ಮಿಲಿಟರಿ ದೃಷ್ಟಿಯಿಂದ ಶಕ್ತಿಶಾಲಿ ರಾಷ್ಟ್ರವಾಗಿ ಉದಯಿಸುತ್ತಿದ್ದ ಕಾಲದಲ್ಲಿ ಸಾಕಾರವಾಯಿತು. ಆದರೆ ಕಾನ್ ಇಚಿಕವನ ಪ್ರಯತ್ನವು ಮಹಾಯುದ್ಧದಲ್ಲಿ ಜರ್ಝರಿತವಾದ ದೇಶವು ಮತ್ತೆ ಕಟ್ಟುವ ಕೆಲಸದಲ್ಲಿ ಯಶಸ್ಸು ಕಂಡು ಜಗತ್ತನ್ನು ನಿಬ್ಬೆರಗಾಗಿಸಿದ ಸಂದರ್ಭದಲ್ಲಿ ಮೂಡಿಬಂದ ಸಾಕ್ಷಚಿತ್ರ. ರಾಜಕೀಯವಾಗಿ ಭಿನ್ನ ನೆಲೆಯಿದ್ದರೂ ಒಲಿಂಪಿಕ್ ವೇದಿಕೆಯ ಮೂಲಕ ತಮ್ಮ ರಾಷ್ಟ್ರದ ಹಿರಿಮೆಯನ್ನು ಸಾರುವ ಉಮೇದು ಎರಡೂ ದೇಶಗಳಿಗೂ ಇತ್ತು. ರೀಫಿನ್‌ಸ್ಟಾಯ್ಲಾಗೆ ಸಾಕ್ಷಚಿತ್ರ ನಿರ್ಮಿಸಿ ಅನುಭವವಿದ್ದರೆ ಇಚಿಕವ ತನ್ನ ಕಥಾಚಿತ್ರಗಳಿಂದ ಪ್ರಸಿದ್ಧನಾದವನು. ಎರಡೂ ಚಿತ್ರಗಳನ್ನು ರೂಪಿಸುವ ಅವಧಿಯಲ್ಲಿ ಪ್ರಭುತ್ವ ಬೆನ್ನಿಗಿತ್ತು. ಹಣಕ್ಕೆ, ಚಲನಚಿತ್ರ ಪರಿಕರಗಳಿಗೆ ಕೊರತೆಯಿರಲಿಲ್ಲ. ತಂತ್ರಜ್ಞರ ಬಳಕೆಗೆ ಮಿತಿಯಿರಲಿಲ್ಲ. ಮೊದಲನೆಯ ಚಿತ್ರ ತಯಾರಾದಾಗ ಚಲನಚಿತ್ರ ತಂತ್ರಜ್ಞಾನ ಇನ್ನೂ ಆರಂಭದ ಸ್ಥಿತಿಯಲ್ಲಿದ್ದು ಕಪ್ಪು ಬಿಳುಪಿನಲ್ಲಿ ತಯಾರಾಯಿತು. ಎರಡನೆಯ ಚಿತ್ರ ತಯಾರಾಗುವ ವೇಳೆಗೆ ತಂತ್ರಜ್ಞಾನ ಸಾಕಷ್ಟು ಸುಧಾರಿಸಿತ್ತು, ಬಣ್ಣದಲ್ಲಿ ತಯಾರಾಯಿತು.

ತನಗಿಷ್ಟ ಬಂದಷ್ಟು ತಂತ್ರಜ್ಞರನ್ನು ಬಳಸಿ ಚಿತ್ರೀಕರಿಸಿ, ಸಂಕಲಿಸಿದ ಲೀನಿ ರೀಫಿನ್‌ಸ್ಟಾಯ್ಲಾ ಆಟಗಾರರನ್ನು ಮತ್ತು ಅವರ ಸಾಧನೆಯನ್ನು ಹೆಚ್ಚು ಕೇಂದ್ರೀಕರಿಸಿದಳು. ಜೊತೆಗೆ ಗೆದ್ದ ಆಟಗಾರರನ್ನು ಆಯಾ ರಾಷ್ಟ್ರಗಳ ಅಭಿಮಾನಿ ವೃಂದದ ಹರ್ಷೋದ್ಗಾರಗಳನ್ನು ಚಿತ್ರಿಸಿ ಚಿತ್ರವು ಸಂಭ್ರಮದ ಅನುಭವವಾಗುವಂತೆ ಮಾಡಿದಳು. ‘ಒಲಿಂಪಿಯಾ’ ಚಿತ್ರದ ಆರಂಭದಲ್ಲಿ ಗ್ರೀಸ್‌ನಿಂದ ಹೊರಟ ಒಲಿಂಪಿಕ್ ಜ್ಯೋತಿ ನಾನಾ ದೇಶಗಳನ್ನು ಸುತ್ತಿ ಒಲಿಂಪಿಕ್ ಕ್ರೀಡಾಕೂಟವನ್ನು ತಲುಪಿದ ನಂತರ ಆತಿಥ್ಯ ದೇಶದ ಆಟಗಾರ ಒಲಿಂಪಿಕ್ ದೀಪ ಬೆಳಗುವವರೆಗಿನ ದೃಶ್ಯಗಳನ್ನು, ವಿಶಾಲವಾದ ಬರ್ಲಿನ್ ಕ್ರೀಡಾಂಗಣದ ವಿವಿಧ ಕೋನಗಳ ಚಿತ್ರಗಳನ್ನು, ಜನರ ಪ್ರತಿಕ್ರಿಯೆಗಳನ್ನು ಸಂಕಲಿಸಿ ಸಂತೋಷ ಅಲೆಅಲೆಯಾಗಿ ನಭಕ್ಕೇರುತ್ತಿದೆ ಯೇನೋ ಎಂಬಂತೆ ರೂಪಿಸಿದ್ದಳು. ಅದಕ್ಕಾಗಿ ಆಕೆ ಬಳಸಿಕೊಂಡ ಸಂಕಲನ ವಿಧಾನ ಆ ಕಾಲಕ್ಕೆ ವಿನೂತನವಾಗಿತ್ತು. ಒಲಿಂಪಿಕ್ ದೀಪದ ಹಿನ್ನೆಲೆಯಲ್ಲಿ ಕ್ರೀಡಾಂಗಣವನ್ನು ದಿನದ ಬೇರೆ ಬೇರೆ ಸಮಯದಲ್ಲಿ ತೋರಿಸಿದ ಚಮತ್ಕಾರ ಮನಸೆಳೆದಿತ್ತು.

ಬರ್ಲಿನ್ ಒಲಿಂಪಿಕ್ ನಂತರದಲ್ಲಿ ಅನೇಕ ದಂತಕತೆಗಳು ಹುಟ್ಟಿಕೊಂಡಿವೆ. ಅವುಗಳನ್ನು ಬಹುತೇಕ ಕಾಲ್ಪನಿಕ ಎನ್ನುವುದಕ್ಕೆ ಸಾಕ್ಷಚಿತ್ರದಲ್ಲಿ ಪುರಾವೆಗಳು ದೊರೆಯುತ್ತವೆ. ಅವುಗಳನ್ನಿಲ್ಲಿ ಚರ್ಚಿಸುವುದಕ್ಕೆ ಸಾಧ್ಯವಾಗದು. ಒಂದೇ ಒಂದು ಘಟನೆಯೆಂದರೆ ಹಿಟ್ಲರ್ ಗೆದ್ದವರನ್ನು ವಿಕ್ಟರಿ ಸ್ಟ್ಯಾಂಡ್‌ಗೆ ಬಂದು ಅಭಿನಂದಿಸುತ್ತಿದ್ದ ಎನ್ನುವುದು. ಹಿಟ್ಲರ್ ಉದ್ಘಾಟನೆಯ ನಂತರ ಕ್ರೀಡಾಂಗಣಕ್ಕೆ ಬರುವುದು ಅಪರೂಪವಾಗಿತ್ತು. ವಿಜಯಶಾಲಿಯಾದವರಿಗೆ ಪದಕ, ಆಲಿವ್ ಎಲೆಯ ಕಿರೀಟ ತೊಡಿಸುವವರು ಬೇರೆ ಬೇರೆ ಆಯೋಜಕರು. ಪದಕ ನೀಡಲು ಬಂದು ಧ್ಯಾನ್‌ಚಂದ್ ಅವರಿಗೆ ತಮ್ಮ ದೇಶಕ್ಕೆ ಬಂದರೆ ಮೇಜರ್ ಹುದ್ದೆ ಕೊಡುವೆನೆಂದು ಆಮಿಷ ಒಡ್ಡಿದನೆಂಬ ಕತೆಯಿದೆ. ಅಂತಹವುಗಳಿಗೆ ಇಲ್ಲಿ ಪುರಾವೆ ಸಿಗದು. ಇರಲಿ, ಕಾಲಾನಂತರದಲ್ಲಿ ಎಲ್ಲ ಪ್ರಮುಖ ಘಟನೆಗಳಿಗೂ ಇಂತಹ ದಿವ್ಯತೆ ಸೃಷ್ಟಿಯಾಗುವುದು ಸಹಜ.

ಆದರೆ ಕಾನ್ ಇಚಿಕವನ ಸಾಕ್ಷಚಿತ್ರವು ಇಂತಹ ನಾಟಕೀಯ ದೃಶ್ಯಗಳಿಂದ ಮುಕ್ತವಾಗಿದೆ. ಮಹಾಯುದ್ಧದ ತರುವಾಯ ಹೋರಾಡಿ ತನ್ನ ರಾಷ್ಟ್ರದಲ್ಲಿ 1964ರ ಒಲಿಂಪಿಕ್ ಕ್ರೀಡಾಕೂಟವನ್ನು ನಡೆಸುವುದು ಜಪಾನ್‌ಗೆ ಮಹತ್ವದ ಸಂಗತಿಯಾಗಿತ್ತು. ಮಹಾಯುದ್ಧದಿಂದ ವಿನಾಶ ಅನುಭವಿಸಿದ ನಾಡು ತನ್ನ ನಾಡಿಗರ ಅಪರಿಮಿತ ಸಂಕಲ್ಪಶಕ್ತಿಯಿಂದ ಮತ್ತೆ ತಲೆಯೆತ್ತಿ ನಿಂತಿರುವ ಭೌತಿಕ ಯಶಸ್ಸನ್ನು ಜಗತ್ತಿಗೆ ತೋರಿಸಬೇಕಿತ್ತು. ಅಂತರ್‌ರಾಷ್ಟ್ರೀಯ ಒಲಿಂಪಿಕ್ ಸಮಿತಿಯು ಚಿತ್ರನಿರ್ಮಾಣಕ್ಕೆ ನೀಡುವ ಅಲ್ಪಅನುದಾನವನ್ನು ನಿರಾಕರಿಸಿದ ಜಪಾನ್ ಸರಕಾರ ತಾನೇ ಸಂಪೂರ್ಣ ಹಣ ಒದಗಿಸಲು ನಿರ್ಧರಿಸಿತು. ಆಗ ‘ರಾಶೋಮನ್’, ‘ಸೆವೆನ್ ಸಮುರಾಯ್’ ಮತ್ತು ‘ಇಕಿರು’ ಚಿತ್ರಗಳಿಂದ ಜಗತ್‌ಪ್ರಸಿದ್ಧಿ ಪಡೆದಿದ್ದ ನಿರ್ದೇಶಕ ಅಕಿರ ಕುರಸೊವನನ್ನು ಚಿತ್ರ ನಿರ್ದೇಶನಕ್ಕೆ ಜಪಾನ್ ಸರಕಾರ ಆಹ್ವಾನಿಸಿತು. ಆದರೆ ಕುರಸೊವ ಚಿತ್ರ ನಿರ್ಮಾಣದಲ್ಲಿ ನಿರುಂಕುಶವಾಗಿರಲು ಹಾಕಿದ ಷರತ್ತಿನಿಂದಾಗಿ ಕೈತಪ್ಪಿತು. ಅವರ ಜಾಗಕ್ಕೆ ಕಾನ್ ಇಚಿಕವ ಬಂದು ಸೇರುವಂತಾಯಿತು.

ಮಾನವೀಯ ಸೆಲೆಗಳನ್ನು ಅನಾವರಣಗೊಳಿಸುವ ನಿರ್ದೇಶಕನಾಗಿ ಜಪಾನ್‌ನಲ್ಲಿ ಪ್ರಸಿದ್ಧನಾಗಿದ್ದ ಇಚಿಕವನಿಗೆ ಅದು ಮೊದಲನೆಯ ಸಾಕ್ಷಚಿತ್ರ. ಒಲಿಂಪಿಕ್ ಆಂದೋಲನದ ಬಗ್ಗೆ ಇರಲಿ, ಕ್ರೀಡೆಯ ಬಗ್ಗೆ ಯಾವ ಆಸಕ್ತಿಯೂ ಇರಲಿಲ್ಲ. ಆತ ತನ್ನ ಚಿತ್ರ ರೂಪಿಸಲು ಮಾಡಿದ ಮೊದಲ ಕೆಲಸವೆಂದರೆ ಲೀನಿ ರೀಫಿನ್‌ಸ್ಟಾಯ್ಲಾಳ ಚಿತ್ರವನ್ನು ಸಾದ್ಯಂತವಾಗಿ ಅಭ್ಯಾಸ ಮಾಡಿದ್ದು. ಹಾಗಾಗಿ ಆ ಚಿತ್ರಕ್ಕಿಂತ ಭಿನ್ನವಾಗಿ ಚಿತ್ರಮಾಡಲು ನಿರ್ಧರಿಸಿದ.

ಆ ನಿರ್ಧಾರವು ಚಿತ್ರವು ನಿರೀಕ್ಷೆಯನ್ನು ಹುಸಿಗೊಳಿಸಲು ನೆರವಾಯಿತು. ಲೀನಿಯ ಚಿತ್ರದ ಉದ್ಘಾಟನಾ ಸಮಾರಂಭದ ವೈಭವ ಈ ಚಿತ್ರದಲ್ಲಿ ಬರಲಿಲ್ಲ. ದೃಶ್ಯಗಳನ್ನು ಆದಷ್ಟು ವಾಸ್ತವವಾದಿ ನೆಲೆಯಲ್ಲಿ ನಿರೂಪಿಸಬೇಕೆಂಬ ನಿಲುವಿಗೆ ಆತು ಜೋತುಬಿದ್ದ. ಪ್ರೇಕ್ಷಕರು ಮತ್ತು ಅಸಾಮಾನ್ಯ ಸಾಧನೆ ಮಾಡಿದ ಆಟಗಾರರ ನಡುವೆ ಯಾವುದೇ ವ್ಯತ್ಯಾಸವಿಲ್ಲದಂತೆ ಚಿತ್ರ ನೀರಸವಾಗಿತ್ತು. ಲೀನಿ ರೀಫಿನ್‌ಸ್ಟಾಯ್ಲಾಳ ಚಿತ್ರದಲ್ಲಿ ಬರ್ಲಿನ್ ನಗರದ ವೈಭವ ಕಣ್ಣಿಗೆ ಕಾಣುವಂತೆ ರಾಚಿದರೆ, ಯುದ್ಧಾನಂತರ ಜಪಾನ್ ಆಧುನಿಕವಾಗಿ ನಿರ್ಮಿಸಿದ ವಿಶಾಲ ರಸ್ತೆಗಳ ಸೊಬಗು, ಕೈಗಾರಿಕೆಗಳಿಂದ ಉಕ್ಕಿಹರಿಯುವ ಜನಸ್ತೋಮ ಮತ್ತು ಶ್ರೀಮಂತ ಆರ್ಥಿಕ ಸಂಕೇತಗಳು- ಯಾವುವೂ ಚಿತ್ರದ ಭಾಗವಾಗಲಿಲ್ಲ. ಚಿತ್ರದ ಪರಿಣಾಮ ಹೆಚ್ಚಿಸುವ ಯಾವುದೇ ಅಂಶಗಳಿಗೆ ಇಚಿಕವನ ಚಿತ್ರದಲ್ಲಿ ಸ್ಥಳವಿರಲಿಲ್ಲ. ಒಲಿಂಪಿಕ್ ಅಥವಾ ಯಾವುದೇ ಕ್ರೀಡಾಕೂಟ ಎಂದರೆ ಅದು ಅಂಕಿ-ಅಂಶಗಳ ದಾಖಲೆ ಮಾತ್ರವಲ್ಲ. ಅದಕ್ಕೊಂದು ಇತಿಹಾಸ, ಸಾಧನೆಯ ಹಿಂದಿನ ಪ್ರಯತ್ನಗಳು, ಮನುಷ್ಯನ ಆಸಕ್ತಿ ಕೆರಳಿಸುವ ಸಂಗತಿಗಳಿಂದ ಕೂಡಿದ ಜಗತ್ತಿನ ಬೃಹತ್ ಪ್ರದರ್ಶನವಾಗಿರುತ್ತದೆ. ಆದರೆ ಅಲ್ಲಲ್ಲಿ ವಿರಳವಾಗಿ ಬರುವ ಶೀರ್ಷಿಕೆ ಮತ್ತು ಕಾಮೆಂಟರಿಯನ್ನು ಹೊರತುಪಡಿಸಿದರೆ ಟೋಕಿಯೋ ಒಲಿಂಪಿಕ್‌ನಲ್ಲಿ ಗೆದ್ದವರಾರು ಮತ್ತು ತೀವ್ರ ಸ್ಪರ್ಧೆ ಹೂಡಿಯೂ ಸೋತವರಾರು ಎನ್ನುವ ವಿವರಗಳೇ ದೊರೆಯುವುಲ್ಲ. ಬರೀ ಕ್ಲೋಸ್ ಅಪ್ ಷಾಟ್‌ಗಳಿಂದ ಕುಸ್ತಿ ಪಂದ್ಯಗಳು ಕಾಲುಗಳನ್ನು ತೊಡರಿಸುವ ಕಸರತ್ತಿನಂತೆ ಕಂಡರೆ, ನಡಿಗೆಯ ಸ್ಪರ್ಧೆಗಳಂತೂ ಕಾಲು ಮತ್ತೆ ತಲೆ ಮಾತ್ರ ಕುಣಿಯುವ, ಟಾಂ ಆ್ಯಂಡ್ ಜೆರಿ ಕಾರ್ಟೂನಿನಂತೆ ಕಾಣುತ್ತವೆ. ಶೂಟಿಂಗ್ ಸ್ಪರ್ಧೆಯಲ್ಲಿ ಆಟಗಾರನ ಏಕಾಗ್ರತೆಯನ್ನು ತೋರಿಸಲು ಅವನ ಕಣ್ಣಗಳನ್ನೇ ಕೇಂದ್ರೀಕರಿಸುವ ದೃಶ್ಯಗಳು ಸ್ಪಾಘೆಟ್ಟಿ ವೆಸ್ಟರ್ನ್ (ಕ್ಲಿಂಟ್ ಈಸ್ಟ್ ವುಡ್ ಚಿತ್ರಗಳನ್ನು ನೆನಪಿಸಿಕೊಳ್ಳಿ) ಚಿತ್ರಗಳನ್ನು ನೆನಪಿಸುತ್ತವೆ

ಕೆಲವು ಮುಖ್ಯವಾದ ಸ್ಪರ್ಧೆಗಳಿಗೆ ಅವುಗಳಿಗೆ ಸೂಕ್ತವಾದ ಅವಕಾಶವನ್ನು ಕಲ್ಪಿಸಿದರೆ ಬಹುತೇಕ ಘಟನೆಗಳು ಪೇಲವವಾಗಿ ದಾಖಲಾಗಿವೆ. ಹಿಂದಿನ ಒಲಿಂಪಿಕ್‌ನಲ್ಲಿ ಮ್ಯಾರಥಾನ್ ಸ್ಪರ್ಧೆಯನ್ನು ಬರಿಗಾಲಿನಲ್ಲಿಯೇ ಓಡಿ ಜಗತ್ತಿನ ಗಮನ ಸೆಳೆದಿದ್ದ ಇಥಿಯೋಪಿಯಾದ ಬರಿಗಾಲು ಸರದಾರ ಅಬಿಬೆ ಬಿಕಿಲ, ಜಪಾನಿನ ಬೀದಿಗಳಲ್ಲಿ ಜನಸ್ತೋಮದ ಹರ್ಷೋದ್ಗಾರದ ನಡುವೆ ಓಡುವ ದೃಶ್ಯ ಅಂತಹ ಅಪರೂಪಗಳಲ್ಲೊಂದು. ಚಿತ್ರ ಮುಗಿದ ನಂತರ ಮನಸ್ಸಿನಲ್ಲಿ ಉಳಿಯುವುದು ಬಿಕಿಲನ ಓಟವೊಂದೇ. ಅದೇ ರೀತಿ ಹಿಂದಿನ ಒಲಿಂಪಿಕ್‌ನಲ್ಲಿ ದಾಖಲೆಯ ಎರಡು ಚಿನ್ನದ ಪದಕ ಪಡೆದು ಟೊಕಿಯೋ ಒಲಿಂಪಿಕ್‌ನಲ್ಲಿ ಮೊದಲ ಸ್ಪರ್ಧೆಯಲ್ಲಿ ಚಿನ್ನ ಗೆದ್ದು ಮತ್ತಷ್ಟು ಪದಕಗಳ ಗೆಲುವಿನ ಭರವಸೆ ಮೂಡಿಸಿದ್ದ ಆಸ್ಟ್ರೇಲಿಯಾದ ತುಂಟ ಈಜುಗಾರ್ತಿ ಡಾನ್ ಫ್ರೇಸರ್ ತಾನು ಉಳಿದುಕೊಂಡಿದ್ದ ಜಪಾನ್ ಅರಮನೆಯ ಬಾವುಟ ಕದಿಯಲು ಹೋಗಿ ಸಿಕ್ಕುಬಿದ್ದು ಕ್ರೀಡಾಕೂಟದಿಂದ ಹೊರನಡೆದ ವಿಲಕ್ಷಣ ಘಟನೆಗಳ ಪ್ರಸ್ತಾಪವೂ ಇಲ್ಲ. ಅಮೆರಿಕದ ನಂತರ ಪದಕ ಪಟ್ಟಿಯಲ್ಲಿ ಎರಡನೇ ಸ್ಥಾನ ಪಡೆದ ಆತಿಥೇಯ ದೇಶದ ಸಾಧನೆಯೂ ವೈಭವವಾಗಿ ವ್ಯಕ್ತಗೊಂಡಿಲ್ಲ. ಟೋಕಿಯೋ ಒಲಿಂಪಿಯಾಡ್‌ನ ಒಂದು ಎದ್ದುಕಾಣುವ ಲಕ್ಷಣವೆಂದರೆ ಇಚಿಕವನ ಇಡೀ ಚಿತ್ರದಲ್ಲಿ ಆಟಗಾರರು, ಪ್ರೇಕ್ಷಕರು ಮತ್ತು ಅಧಿಕಾರಿ-ಆಯೋಜಕರು ಎಲ್ಲರೂ ಒಂದೇ- ಯಾರೂ ಹೆಚ್ಚಲ್ಲ; ಕಡಿಮೆಯೂ ಅಲ್ಲ. ಇಚಿಕವ ಎಲ್ಲವನ್ನು ಒಂದೇ ಅಳತೆಗೋಲಿನಲ್ಲಿ ನಿರೂಪಿಸಿರುವುದು ಸಾಕ್ಷಚಿತ್ರದ ಒಂದು ದೊಡ್ಡ ಮಿತಿ.

ಇಚಿಕವನ ಸಾಕ್ಷಚಿತ್ರ ತನ್ನ ನಿರೀಕ್ಷೆಯಂತೆ ಮೂಡಿ ಬಂದಿಲ್ಲ ಎನ್ನುವುದು ಜಪಾನ್ ಸರಕಾರ ತೆಗೆದ ತಕರಾರು ವಿವಾದವಾಯಿತು. ಜಪಾನ್ ಸರಕಾರದ ಆರೋಪವನ್ನು ಅನುಮೋದಿಸಿದಂತೆಯೇ ಇಚಿಕವನ ನಿರೂಪಣೆಯನ್ನು ಅನೇಕರು ಶ್ಲಾಘಿಸಿದರು. ಈ ಚಿತ್ರವು ಸಿನೆಮಾ ಮಾಧ್ಯಮದಲ್ಲಿ ಸಮುಚಿತವಾಗಿ ಸಂಯೋಜನೆಗೊಂಡಿದ್ದು ವಾಸ್ತವವಾದಿ ನಿರೂಪಣೆಗೆ ಒಂದು ಮಾದರಿಯೆಂದರು. ಅದಕ್ಕೆ ನೀಡಿದ ಕಾರಣ-ಇಚಿಕವ ಎಲ್ಲಿಯೂ ಯಾವುದನ್ನೂ ವೈಭವೀಕರಿಸದೆ, ಸಂಗತಿಗಳನ್ನು ನಿರ್ಲಿಪ್ತವಾಗಿ ಕಟ್ಟಿಕೊಟ್ಟಿರುವುದು. ಹಣಹೂಡಿದವರ ಕಲ್ಪನೆಯಂತೆ ಅದು ಕಾಣದಿದ್ದರೆ ಚಿತ್ರದ ದೋಷವಲ್ಲ ಎಂದೂ ಬರೆದರು. ಆದರೆ 165 ನಿಮಿಷ ದೀರ್ಘವಾಗಿದ್ದ ಚಿತ್ರವನ್ನು ಮರುಸಂಕಲಿಸಬೇಕೆಂದು ಜಪಾನ್ ಸರಕಾರ ಹಠ ಹಿಡಿಯಿತು. ಪರಿಣಾಮ 93 ನಿಮಿಷಗಳ ಅವಧಿಯ ಚಿತ್ರವಾಗಿ ಸಾರ್ವಜನಿಕ ಪ್ರದರ್ಶನಕ್ಕೆ ಸಿದ್ಧವಾಯಿತು.

ಮರುಸಂಕಲನಗೊಂಡ ಚಿತ್ರವು 1965ರ ಮಾರ್ಚ್ ತಿಂಗಳಲ್ಲಿ ಜಪಾನ್ ಮತ್ತು ಅಕ್ಟೋಬರ್ ತಿಂಗಳಲ್ಲಿ ಅಮೆರಿಕದಲ್ಲಿ ಸಾರ್ವಜನಿಕ ಪ್ರದರ್ಶನಕ್ಕೆ ಬಿಡುಗಡೆಯಾಯಿತು. ಭಾರತದಲ್ಲಿ 1967ರಲ್ಲಿ ಬಿಡುಗಡೆಯಾಯಿತು. ಮತ್ತೆ 1984ರಲ್ಲಿ ಚಿತ್ರವು ಅದರ ಮೂಲ ರೂಪದಲ್ಲಿ (165 ನಿಮಿಷ) ಬಿಡುಗಡೆಯಾಯಿತು. ಈಗ 125 ನಿಮಿಷಗಳ ಇಂಗ್ಲಿಷ್ ನಿರೂಪಣೆಯಿರುವ ಪರಿಷ್ಕೃತ ಆವೃತ್ತಿಯು ಯೂ ಟ್ಯೂಬ್‌ನಲ್ಲೂ ಲಭ್ಯವಿದೆ.

ಚಾರಿತ್ರಿಕ ಸಂದರ್ಭಗಳು, ರಾಜಕೀಯ ಸನ್ನಿವೇಶಗಳನ್ನು ಹೊರತುಪಡಿಸಿ ನೋಡಿದರೂ ಲೀನಿ ರೀಫಿಯ್‌ಸ್ಟಾಯ್ಲಾ ಮತ್ತು ಕಾನ್ ಇಚಿಕವ ಅವರ ಎರಡು ಮಹತ್ವದ ಸಾಕ್ಷಚಿತ್ರಗಳು ಒಲಿಂಪಿಕ್ ಕ್ರೀಡಾಕೂಟವನ್ನು ದಾಖಲಿಸಿದ ಎರಡು ವಿಭಿನ್ನ ಮಾದರಿಗಳೆಂದೇ ಪರಿಗಣಿತವಾಗಿವೆ. ಫ್ಯಾಶಿಸಂ ತುಂಬಿದ್ದ ಬರ್ಲಿನ್ ಒಲಿಂಪಿಕ್ಸ್ ಅನ್ನು ತನ್ನ ಸಾಕ್ಷಚಿತ್ರದ ಮೂಲಕ ಲೀನಿಯು ಕ್ರೀಡಾಪಟುಗಳನ್ನು ಅತೀಂದ್ರಿಯ ಶಕ್ತಿಪಡೆದ ವ್ಯಕ್ತಿಗಳಂತೆ, ಪಂದ್ಯಗಳನ್ನು ಜಾದೂವಿನಂತೆ ಕಾಣಿಸಿ ಪುರಾಣಸದೃಶ ಕಾವ್ಯವನ್ನಾಗಿ ರೂಪಿಸಿದರೆ, ಕಾನ್ ಇಚಿಕವ ಗುರಿಸಾಧನೆಗೆ ಅಪಾರವಾಗಿ ಶ್ರಮಿಸಿದ ಆಟಗಾರರು ಇಡೀ ಮೈದಾನದ ಒಂದು ಭಾಗವಾಗಿ, ಕ್ರೀಡಾಕೂಟ ಒಂದು ದೈನಂದಿನ ಸಾಮಾನ್ಯ ಸಂಗತಿಗಳ ನಿರ್ಲಿಪ್ತ ದರ್ಶನವನ್ನು ರೂಪಿಸಿದರು.

Writer - ಕೆ. ಪುಟ್ಟಸ್ವಾಮಿ

contributor

Editor - ಕೆ. ಪುಟ್ಟಸ್ವಾಮಿ

contributor

Similar News