ಜಮ್ಮುಕಾಶ್ಮೀರ: ಜಾಮೀನು ಪಡೆದ ಕೆಲವೇ ಗಂಟೆಗಳಲ್ಲಿ ಪತ್ರಕರ್ತ ಫಹದ್‌ ಶಾರನ್ನು ಮೂರನೇ ಬಾರಿಗೆ ಬಂಧಿಸಿದ ಪೊಲೀಸರು

Update: 2022-03-06 09:00 GMT

ಶ್ರೀನಗರ: ಪ್ರತ್ಯೇಕ ಪ್ರಕರಣಗಳಲ್ಲಿ ಶೋಪಿಯಾನ್ ನ್ಯಾಯಾಲಯದಿಂದ ಜಾಮೀನು ಪಡೆದ ಕೆಲವೇ ಗಂಟೆಗಳ ಬಳಿಕ, ಮೂರನೇ ಪ್ರಕರಣಕ್ಕೆ ಸಂಬಂಧಿಸಿದಂತೆ ಪತ್ರಕರ್ತ ಫಹದ್ ಶಾ ಅವರನ್ನು ಶ್ರೀನಗರ ಪೊಲೀಸರು ಶನಿವಾರ ಬಂಧಿಸಿದ್ದಾರೆ ಎಂದು ʼದಿ ಕಾಶ್ಮೀರ್ ವಾಲಾʼ ಹೇಳಿಕೆಯಲ್ಲಿ ತಿಳಿಸಿದೆ.

ಫಹದ್‌ ಷಾ ಅವರು ಸುದ್ದಿ ಪೋರ್ಟಲ್ ದಿ ಕಾಶ್ಮೀರ್ ವಾಲ್ಲಾದ ಮುಖ್ಯ ಸಂಪಾದಕರಾಗಿದ್ದಾರೆ. ಒಂದು ತಿಂಗಳ ಅವಧಿಯಲ್ಲಿ ಬೇರೆ ಬೇರೆ ಪ್ರಕರಣಗಳಿಗೆ ಸಂಬಂಧಿಸಿ ಅವರನ್ನು ಬಂಧಿಸಿರುವುದು ಇದು ಮೂರನೇ ಬಾರಿ. 

ಸಾಮಾಜಿಕ ಮಾಧ್ಯಮದಲ್ಲಿ ದೇಶ ವಿರೋಧಿ ವಿಷಯವನ್ನು ಪೋಸ್ಟ್ ಮಾಡಿದ್ದಕ್ಕಾಗಿ ಪತ್ರಕರ್ತನನ್ನು ಫೆಬ್ರವರಿ 4 ರಂದು ಪುಲ್ವಾಮಾ ಪೊಲೀಸರು ಬಂಧಿಸಿದ್ದರು. ರಾಷ್ಟ್ರೀಯ ತನಿಖಾ ಸಂಸ್ಥೆ ನ್ಯಾಯಾಲಯವು 22 ದಿನಗಳ ಬಳಿಕ ಅವರಿಗೆ ಜಾಮೀನು ಮಂಜೂರು ಮಾಡಿತ್ತು. ಅವರು ಜಾಮೀನು ಪಡೆದ ಕೆಲವೇ ಗಂಟೆಗಳ ನಂತರ, ಫೆಬ್ರವರಿ 26 ರಂದು ಪ್ರತ್ಯೇಕ ಪ್ರಕರಣದಲ್ಲಿ ಶೋಪಿಯಾನ್ ಪೊಲೀಸರು ಮತ್ತೆ ಬಂಧಿಸಿದ್ದರು.

ರವಿವಾರದ ಹೇಳಿಕೆಯಲ್ಲಿ, ಕಾಶ್ಮೀರ್ ವಾಲಾ, "ಮೇ 2020 ರಲ್ಲಿ ವರದಿ ಮಾಡಿದ್ದಕ್ಕಾಗಿ ನ್ಯೂಸ್ ಪೋರ್ಟಲ್ ವಿರುದ್ಧ ಮತ್ತೊಂದು ಪ್ರಕರಣ ದಾಖಲಿಸಲಾಗಿದ್ದು, ಶ್ರೀನಗರ ಪೊಲೀಸರು ಷಾ ಅವರನ್ನು ಮತ್ತೆ ಬಂಧಿಸಿದ್ದಾರೆ ಎಂದು ಹೇಳಿದರು. ಅವರನ್ನು ಸಫದ್ಕಲ್ ಪೊಲೀಸ್ ಠಾಣೆಯಲ್ಲಿ ದಾಖಲಿಸಲಾಗಿದೆ.

ಶಾ ವಿರುದ್ಧ ಭಾರತೀಯ ದಂಡ ಸಂಹಿತೆಯ ಸೆಕ್ಷನ್ 147 (ಗಲಭೆ), 307 (ಕೊಲೆಗೆ ಯತ್ನ), 109 (ಪ್ರಚೋದನೆ), 501 (ಮಾನಹಾನಿಕರ ವಿಷಯವನ್ನು ಮುದ್ರಿಸುವುದು) ಮತ್ತು 505 (ಸಾರ್ವಜನಿಕ ಕಿಡಿಗೇಡಿತನ) ಅಡಿಯಲ್ಲಿ ಆರೋಪ ಹೊರಿಸಲಾಗಿದೆ ಎಂದು ವರದಿಗಳು ತಿಳಿಸಿವೆ..

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News