"ಉಕ್ರೇನ್‌ ನ ನೆರೆಯ ದೇಶಗಳ ನಾಯಕರೊಂದಿಗೆ ಮೋದಿಗಿರುವ ʼವೈಯಕ್ತಿಕʼ ಸಂಬಂಧದಿಂದ ರಕ್ಷಣಾ ಕಾರ್ಯಾಚರಣೆ ಸಾಧ್ಯವಾಯಿತು"

Update: 2022-03-06 11:48 GMT

ಲಕ್ನೋ: ಉಕ್ರೇನ್‌ನಿಂದ ಹಿಂದಿರುಗಿದ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿದ ಉತ್ತರ ಪ್ರದೇಶದ ಮುಖ್ಯಮಂತ್ರಿ ಆದಿತ್ಯನಾಥ್ ಅವರು, ಭಾರತೀಯ ನಾಗರಿಕರನ್ನು ಸ್ಥಳಾಂತರಿಸುವ "ಇಂತಹ ಯಶಸ್ವಿ ಮತ್ತು ವ್ಯವಸ್ಥಿತ ಕಾರ್ಯಾಚರಣೆ" ಈ ಹಿಂದೆ ಎಂದಿಗೂ ಕೈಗೊಂಡಿರಲಿಲ್ಲ ಎಂದು ಹೇಳಿದ್ದಾರೆ.

ರೊಮೇನಿಯಾ ಮತ್ತು ಹಂಗೇರಿ ಸೇರಿದಂತೆ ಉಕ್ರೇನ್‌ನ ನೆರೆಯ ರಾಷ್ಟ್ರಗಳೊಂದಿಗೆ ಪ್ರಧಾನಿ ನರೇಂದ್ರ ಮೋದಿ ಅವರ “ವೈಯಕ್ತಿಕ” ಸಂಬಂಧದಿಂದಾಗಿ ಈ ದೇಶಗಳು ತಮ್ಮ ಗಡಿಯನ್ನು ಭಾರತೀಯ ನಾಗರಿಕರಿಗೆ ಮಾತ್ರ ತೆರೆದಿವೆ, ಇದು ವಿದ್ಯಾರ್ಥಿಗಳು ಸುರಕ್ಷಿತವಾಗಿ ಮರಳಲು ಕಾರಣವಾಯಿತು ಎಂದು ಅವರು ಹೇಳಿದರು.

ಉಕ್ರೇನ್‌ನಿಂದ ಸ್ಥಳಾಂತರಿಸಲ್ಪಟ್ಟ 52 ವಿದ್ಯಾರ್ಥಿಗಳು ಮತ್ತು ಅವರ ಪೋಷಕರೊಂದಿಗೆ ಅವರ ಅಧಿಕೃತ ನಿವಾಸ, ಕಾಳಿದಾಸ್ ಮಾರ್ಗ್‌ನಲ್ಲಿ ನಡೆದ ಸಭೆಯಲ್ಲಿ ಆದಿತ್ಯನಾಥ, ನರೇಂದ್ರ ಮೋದಿ ಸರ್ಕಾರದ ಮೇಲೆ ವಿದ್ಯಾರ್ಥಿಗಳಿಗಿರುವ ನಂಬಿಕೆಯಿಂದಾಗಿ ಅವರು ಸುರಕ್ಷಿತವಾಗಿ ಮರಳಲು ಸಾಧ್ಯವಾಯಿತು ಎಂದು ಹೇಳಿದರು.

"ಉಕ್ರೇನ್‌ನಲ್ಲಿ ಸಿಕ್ಕಿಬಿದ್ದಿರುವ ಇತರ ದೇಶಗಳ ನಾಗರಿಕರನ್ನು ತಮ್ಮ ಸ್ವಂತ ಖರ್ಚಿನಲ್ಲಿ ಮನೆಗೆ ಮರಳಲು ಒತ್ತಾಯಿಸಲಾಗುತ್ತಿದೆ. ಆದರೆ ಭಾರತ ಸರ್ಕಾರವು ತನ್ನ ನಾಗರಿಕರನ್ನು ಸರ್ಕಾರದ ವೆಚ್ಚದಲ್ಲಿ ಮರಳಿ ಕರೆತರುತ್ತಿದೆ. ಇಂದು ನಡೆಯುತ್ತಿರುವಂತೆ ಇಂತಹ ಯಶಸ್ವಿ ಮತ್ತು ವ್ಯವಸ್ಥಿತ ವಾಪಸಾತಿ ಕಾರ್ಯಾಚರಣೆಯನ್ನು ಹಿಂದೆಂದೂ ಮಾಡಿರಲಿಲ್ಲ," ಎಂದು ಮುಖ್ಯಮಂತ್ರಿ ಆದಿತ್ಯನಾಥ್ ಹೇಳಿದರು.

ಉತ್ತರ ಪ್ರದೇಶದ ಒಟ್ಟು 2,397 ವಿದ್ಯಾರ್ಥಿಗಳು ಉಕ್ರೇನ್‌ನಲ್ಲಿ ವೈದ್ಯಕೀಯ ಮತ್ತು ಇತರ ಕೋರ್ಸ್‌ಗಳಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ. ಅವರಲ್ಲಿ ಶನಿವಾರ ಸಂಜೆಯವರೆಗೆ 1,400 ವಿದ್ಯಾರ್ಥಿಗಳನ್ನು ಸುರಕ್ಷಿತವಾಗಿ ಕರೆತರಲಾಗಿದೆ ಎಂದು ಅವರು ಹೇಳಿದರು.

ಉಳಿದ 1,000 ಮಕ್ಕಳನ್ನು ಮರಳಿ ಕರೆತರಲು ಸರ್ಕಾರ ಪ್ರಯತ್ನಿಸುತ್ತಿದೆ, ಇಂದು ಕೆಲವರು ಬರುತ್ತಿದ್ದಾರೆ, ಉಕ್ರೇನ್‌ನಿಂದ ಹಿಂತಿರುಗುವ ಮಕ್ಕಳ ಪೋಷಕರನ್ನು ಭೇಟಿ ಮಾಡಿ ಅವರ ಸಮಸ್ಯೆಗಳನ್ನು ಪರಿಹರಿಸಲು ರಾಜ್ಯದ ಪ್ರತಿ ಜಿಲ್ಲಾಧಿಕಾರಿಗಳಿಗೆ ಸೂಚನೆಗಳನ್ನು ನೀಡಲಾಗಿದೆ ಎಂದು ಅವರು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News