×
Ad

ಪುಣೆ: ಸಾರ್ವಜನಿಕ ಸಾರಿಗೆಗಾಗಿ ಪ್ರಧಾನಿಯಿಂದ 150 ವಿದ್ಯುತ್ ಚಾಲಿತ ಬಸ್‌ಗಳ ಲೋಕಾರ್ಪಣೆ

Update: 2022-03-06 23:32 IST

ಪುಣೆ,ಮಾ.6: ಪ್ರಧಾನಿ ನರೇಂದ್ರ ಮೋದಿಯವರು ರವಿವಾರ ಇಲ್ಲಿ ಸಾರ್ವಜನಿಕ ಸಾರಿಗೆಗಾಗಿ ಒಲೆಕ್ಟ್ರಾ ಗ್ರೀನ್‌ಟೆಕ್ ಲಿ.ತಯಾರಿಸಿರುವ 150 ವಿದ್ಯುತ್ ಚಾಲಿತ ಬಸ್‌ಗಳನ್ನು ಲೋಕಾರ್ಪಣೆಗೊಳಿಸಿದರು. ಈ ಸಂದರ್ಭದಲ್ಲಿ ಪ್ರಧಾನಿಯವರು ಪುಣೆಯ ಬಾಣೇರ್ ನಲ್ಲಿ ಅತ್ಯಾಧುನಿಕ ವಿದ್ಯುತ್ ಚಾಲಿತ ಬಸ್ ಡಿಪೋ ಮತ್ತು ಚಾರ್ಜಿಂಗ್ ಸ್ಟೇಷನ್ ಅನ್ನೂ ಉದ್ಘಾಟಿಸಿದರು ಎಂದು ಹೈದರಾಬಾದ್ ಮೂಲದ ಒಲೆಕ್ಟ್ರಾ ಗ್ರೀನ್‌ಟೆಕ್  ಲಿ. ಹೇಳಿಕೆಯಲ್ಲಿ ತಿಳಿಸಿದೆ.

ಒಲೆಕ್ಟ್ರಾ ಪ್ರಸ್ತುತ ಪುಣೆ ಮಹಾನಗರ ಪರಿವಾಹನ ಮಹಾಮಂಡಳ ಲಿ.ಗಾಗಿ ನಗರದಲ್ಲಿ 150 ಇ-ಬಸ್‌ಗಳನ್ನು ಕಾರ್ಯಾಚರಿಸುತ್ತಿದೆ.

ಮೇಘಾ ಇಂಜಿನಯರಿಂಗ್ ಆ್ಯಂಡ್ ಇನ್ಫಾಸ್ಟ್ರಕ್ಚರ್  ಲಿ.ನ ಅಂಗಸಂಸ್ಥೆಯಾಗಿರುವ ಒಲೆಕ್ಟ್ರಾ ಸೂರತ್, ಮುಂಬೈ, ಸಿಲ್ವಾಸಾ, ಗೋವಾ,ಪುಣೆ,ನಾಗ್ಪುರ,ಹೈದರಾಬಾದ್ ಮತ್ತು ಡೆಹ್ರಾಡೂನ್‌ಗಳಲ್ಲಿಯೂ ತನ್ನ ಇ-ಬಸ್‌ಗಳನ್ನು ನಿರ್ವಹಿಸುತ್ತಿದೆ.

ಹಲವಾರು ನಗರಗಳಲ್ಲಿ ಪ್ರಯಾಣಿಕರ ಪ್ರತಿಕ್ರಿಯೆ ಅತ್ಯುತ್ತಮವಾಗಿದ್ದು,ಆಯಾ ಸಾರಿಗೆ ಸಂಸ್ಥೆಗಳು ತಮ್ಮ ವಿದ್ಯುತ್ಚಾಲಿತ ಬಸ್‌ಗಳ ಸಂಖ್ಯೆಯನ್ನು ಹೆಚ್ಚಿಸಲು ಬಯಸಿವೆ ಎಂದು ಹೇಳಿಕೆಯು ತಿಳಿಸಿದೆ.

ಪುಣೆ ನಗರದಲ್ಲಿ ಈಗಾಗಲೇ ಕಾರ್ಯಾಚರಿಸುತ್ತಿರುವ 150 ವಿದ್ಯುತ್ಚಾಲಿತ ಬಸ್‌ಗಳ ಸಮೂಹಕ್ಕೆ ಇನ್ನೂ 150 ಬಸ್‌ಗಳನ್ನು ಸೇರಿಸುತ್ತಿರುವುದು ಒಲೆಕ್ಟ್ರಾ ಪಾಲಿಗೆ ಹೆಮ್ಮೆಯ ವಿಷಯವಾಗಿದೆ ಎಂದು ಕಂಪನಿಯ ಅಧ್ಯಕ್ಷ ಹಾಗೂ ಆಡಳಿತ ನಿರ್ದೇಶಕ ಕೆ.ವಿ.ಪ್ರದೀಪ ತಿಳಿಸಿದರು.

12 ಮೀ.ಉದ್ದದ ವಾತಾನುಕೂಲಿತ ಒಲೆಕ್ಟ್ರಾ ಬಸ್‌ಗಳು 33 ಪ್ರಯಾಣಿಕರಿಗೆ ಆಸನ ಸಾಮರ್ಥ್ಯವನ್ನು ಹೊಂದಿವೆ. ಪ್ರಯಾಣಿಕರ ಸುರಕ್ಷತೆಗಾಗಿ ಸಿಸಿಟಿವಿ ಕ್ಯಾಮೆರಾಗಳು,ಪ್ರತಿ ಆಸನಕ್ಕೆ ಎಮರ್ಜನ್ಸಿ ಬಟನ್‌ಗಳು ಮತ್ತು ಯುಎಸ್ಬಿ ಸಾಕೆಟ್‌ಗಳನ್ನುಅಳವಡಿಸಲಾಗಿದೆ.
ಬಸ್‌ನಲ್ಲಿ ಲೀಥಿಯಂ-ಅಯಾನ್ ಬ್ಯಾಟರಿಯನ್ನು ಅಳವಡಿಸಲಾಗಿದ್ದು,ಒಮ್ಮೆ ಚಾರ್ಜ್ ಮಾಡಿದ ಬಳಿಕ ಸಂಚಾರ ಮತ್ತು ಪ್ರಯಾಣಿಕರ ಹೊರೆ ಸ್ಥಿತಿಯನ್ನು ಅವಲಂಬಿಸಿ ಸುಮಾರು 200 ಕಿ.ಮೀ.ವರೆಗೆ ಸಂಚರಿಸಬಹುದಾಗಿದೆ. ಹೈ-ಪವರ್ ಎಸಿ ಮತ್ತು ಡಿಸಿ ಚಾರ್ಜಿಂಗ್ ವ್ಯವಸ್ಥೆಗಳಿಂದಾಗಿ ಬ್ಯಾಟರಿಯು 3-4 ಗಂಟೆಗಳಲ್ಲಿ ಸಂಪೂರ್ಣವಾಗಿ ರೀಚಾರ್ಜ್ ಆಗುತ್ತದೆ ಎಂದು ಕಂಪನಿಯು ಹೇಳಿಕೆಯಲ್ಲಿ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News