×
Ad

ಜೂನಿಯರ್ ರಾಷ್ಟ್ರೀಯ ತ್ರೋಬಾಲ್ ಚಾಂಪಿಯನ್‌ಶಿಪ್: ಹರ್ಯಾಣ ತಂಡ ವಿನ್ನರ್ಸ್‌, ಕರ್ನಾಟಕ ತಂಡಕ್ಕೆ ರನ್ನರ್ಸ್‌ ಪ್ರಶಸ್ತಿ

Update: 2022-03-07 18:23 IST

ಶಿರ್ವ, ಮಾ.7: ತ್ರೋಬಾಲ್ ಫೆಡರೇಶನ್ ಆಫ್ ಇಂಡಿಯಾ, ತ್ರೋಬಾಲ್ ಅಸೋಸಿಯೇಶನ್ ಆಫ್ ಕರ್ನಾಟಕ ಮತ್ತು ಕುಂಜಾರುಗಿರಿ ಪಾಜಕ ಆನಂದ ತೀರ್ಥ ವಿದ್ಯಾಲಯದ ಸಂಯುಕ್ತ ಆಶ್ರಯದಲ್ಲಿ ವಿದ್ಯಾಲಯದಲ್ಲಿ ಆಯೋಜಿಸಲಾದ 31ನೇ ಜೂನಿಯರ್ ರಾಷ್ಟ್ರೀಯ ತ್ರೋಬಾಲ್ ಚಾಂಪಿಯನ್‌ಶಿಪ್ ಇದರ ಬಾಲಕಿಯರ ವಿಭಾಗದಲ್ಲಿ ಹರ್ಯಾಣ ತಂಡವು ಪ್ರಶಸ್ತಿ ಗೆದ್ದುಕೊಂಡಿದೆ.

ಅಂತಿಮ ಪಂದ್ಯಾಟದಲ್ಲಿ ಹರ್ಯಾಣ ತಂಡವು ಕರ್ನಾಟಕ ತಂಡವನ್ನು 25-20, 25-18 ಅಂತರದಿಂದ ಮಣಿಸಿ ಗೆಲುವನ್ನು ಸಾಧಿಸಿ ಟ್ರೋಫಿಯನ್ನು ತನ್ನದಾಗಿಸಿದೆ. ಬಾಲಕರ ವಿಭಾಗದಲ್ಲಿ ರೋಚಕ ಪೈನಲ್ ಪಂದ್ಯಾಟವನ್ನು ಕಂಡಿದ್ದು, ಹರ್ಯಾಣ ತಂಡವು ಕರ್ನಾಟಕ ತಂಡವನ್ನು 25-23, 17-25, 25-20, ಅಂತರದಿಂದ ಮಣಿಸಿ ಗೆಲುವನ್ನು ಸಾಧಿಸಿದೆ. ಎರಡೂ ವಿಭಾಗ ಗಳಲ್ಲಿಯೂ ಹರ್ಯಾಣ ತಂಡಗಳು ಜಯಿಸುವ ಮೂಲಕ ಹೊಸ ದಾಖಲೆಯನ್ನು ಬರೆದಿವೆ.

ಬಾಲಕಿಯರ ವಿಭಾಗದಲ್ಲಿ ಛತ್ತೀಸ್‌ಗಢ ಮತ್ತು ತಮಿಳುನಾಡು ತಂಡಗಳು, ಬಾಲಕರ ವಿಭಾಗದಲ್ಲಿ ಛತ್ತೀಸ್‌ಗಡ ಮತ್ತು ಮುಂಬಯಿ ತಂಡಗಳು ತೃತೀಯ ಸ್ಥಾನ ಪಡೆದುಕೊಂಡವು.

ಸಮಾರೋಪ ಸಮಾರಂಭ: ಪೇಜಾವರ ಮಠಾಧೀಶ ವಿಶ್ವಪ್ರಸನ್ನತೀರ್ಥ ಸ್ವಾಮೀಜಿ ಅಧ್ಯಕ್ಷತೆಯಲ್ಲಿ ನಡೆದ ಸಮಾರೋಪ ಸಮಾರಂಭದಲ್ಲಿ ವಿಜೇತ ತಂಡಗಳಿಗೆ ಟ್ರೋಫಿ, ಬಹುಮಾನವನ್ನು ವಿತರಿಸಲಾಯಿತು.

ಈ ಸಂದರ್ಭ ಕಾಪು ಕ್ಷೇತ್ರದ ಶಾಸಕ ಲಾಲಾಜಿ ಆರ್.ಮೆಂಡನ್, ಉಡುಪಿ, ದ.ಕ. ಜಿಲ್ಲಾ ಮೀನುಗಾರಿಕಾ ಫೆಡರೇಶನ್ ಅಧ್ಯಕ್ಷ ಯಶ್‌ಪಾಲ್ ಸುವರ್ಣ, ಯುವಜನ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕ ರೋಶನ್ ಕುಮಾರ್ ಶೆಟ್ಟಿ, ಮಂಗಳೂರು ವಿವಿ ದೈಹಿಕ ಶಿಕ್ಷಣ ನಿರ್ದೇಶಕ ಜೆರಾಲ್ಡ್ ಸಂತೋಷ್ ಡಿಸೋಜ, ತ್ರೋಬಾಲ್ ಫೆಡರೇಶನ್ ಆಫ್ ಇಂಡಿಯಾದ ಜನರಲ್ ಸೆಕ್ರೆಟರಿ ರಮಣ್ ಕುಮಾರ್ ಸಹಾನಿ, ಕರ್ನಾಟಕದ ತ್ರೋಬಾಲ್ ಅಸೋಸಿಯೇಶನ್ ಅಧ್ಯಕ್ಷ ಪ್ರಕಾಶ್ ಇ., ಪ್ರಧಾನ ಕಾರ್ಯದರ್ಶಿ ಶರಣ್ ಕುಮಾರ್ ನಾಯಕ್, ತ್ರೋಬಾಲ್ ಅಸೋಸಿಯೇಶನ್ ಆಫ್ ಕರ್ನಾಟಕದ ಸೆಕ್ರೆಟರಿ ರಾಜೇಶ್ ಟಿ.ಬಿ. ಉಪಸ್ಥಿತರಿದ್ದರು.

ಪದವಿ ಪೂರ್ವ ಕಾಲೇಜು ವಿಭಾಗದ ಪ್ರಾಂಶುಪಾಲ ವಿಜಯ ಪಿ.ರಾವ್ ಸ್ವಾಗತಿಸಿದರು. ಆನಂದತೀರ್ಥ ವಿದ್ಯಾಲಯದ ಪ್ರಾಂಶುಪಾಲೆ ಗೀತಾ ಎಸ್. ಕೋಟ್ಯಾನ್ ವಂದಿಸಿದರು. ವಿಜೇತಾ ಹಾಗೂ ಸುನಾಲಿನಿ ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News