×
Ad

ಆದಿತ್ಯನಾಥ್‌ ನೇತೃತ್ವದ ಬಿಜೆಪಿ ಸರಕಾರ ಇವಿಎಂಗಳನ್ನು ಹ್ಯಾಕ್‌ ಮಾಡುತ್ತಿದೆ: ಆಘಾತಕಾರಿ ಹೇಳಿಕೆ ನೀಡಿದ ಅಖಿಲೇಶ್‌

Update: 2022-03-08 20:01 IST

ಲಕ್ನೋ: ಚುನಾವಣಾ ಎಣಿಕೆ ದಿನಕ್ಕೆ (ಮಾರ್ಚ್ 10) ಎರಡು ದಿನಗಳ ಮುಂಚಿತವಾಗಿ, ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ ಅವರು ಮಂಗಳವಾರ, "ವಾರಣಾಸಿಯಲ್ಲಿ ಯೋಗಿ ಆದಿತ್ಯನಾಥ್ ನೇತೃತ್ವದ ಬಿಜೆಪಿ ಸರ್ಕಾರವು ಇವಿಎಂ ಹ್ಯಾಕ್ ಮಾಡಿದೆ" ಎಂಬ ಆಘಾತಕಾರಿ ಹೇಳಿಕೆ ನೀಡಿದ್ದಾರೆ.

ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಯ ಮತಎಣಿಕೆಗೆ ಕೇವಲ ಎರಡು ದಿನಗಳಿರುವಾಗ ವಾರಣಾಸಿಯ ಮತ ಎಣಿಕೆ ಕೇಂದ್ರದಿಂದ ವಿದ್ಯುನ್ಮಾನ ಮತಯಂತ್ರ (ಇವಿಎಂ)ಗಳನ್ನು ಸಾಗಿಸಲಾಗುತ್ತಿದೆ ಎಂದು ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್‌ ಯಾದವ್ ಅವರು ಆರೋಪಿಸಿದ್ದಾರೆ. ಸರಕಾರದ ಮೇಲೆ ‘ಕಳ್ಳತನ’ದ ಆರೋಪವನ್ನು ಹೊರಿಸಿರುವ ಅವರು, 2017ರ ಚುನಾವಣೆಗಳಲ್ಲಿ ರಾಜ್ಯದ ಸುಮಾರು 50 ಕೇತ್ರಗಳಲ್ಲಿ ಬಿಜೆಪಿಯ ಗೆಲುವಿನ ಅಂತರ 5,000 ಮತಗಳಿಗೂ ಕಡಿಮೆಯಿತ್ತು ಎಂಬುದನ್ನು ಉಲ್ಲೇಖಿಸಿದ್ದಾರೆ.

 ಟ್ರಕ್‌ನಲ್ಲಿ ಕೆಲವು ಇವಿಎಮ್‌ಗಳನ್ನು ಸಾಗಿಸುತ್ತಿರುವ ವೀಡಿಯೊಗಳು ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿರುವ ಹಿನ್ನೆಲೆಯಲ್ಲಿ ವಾರಣಾಸಿ ಜಿಲ್ಲಾಧಿಕಾರಿ ಕೌಶಲ್ ರಾಜ್ ಶರ್ಮಾ ಅವರು, ಅವು ಮತದಾನಕ್ಕೆ ಬಳಕೆಯಾದ ಇವಿಎಮ್‌ಗಳಲ್ಲ, ಅವುಗಳನ್ನು ಸಿಬ್ಬಂದಿಗೆ ತರಬೇತಿ ನೀಡಲು ಬಳಸಲಾಗಿತ್ತಷ್ಟೇ ಎಂದು ಸ್ಪಷ್ಟಪಡಿಸಿದ್ದಾರೆ. 

ಕೆಲವು ರಾಜಕೀಯ ಪಕ್ಷಗಳು ವದಂತಿಗಳನ್ನು ಹರಡುತ್ತಿವೆ ಎಂದು ಆರೋಪಿಸಿದ ಅವರು, ಚುನಾವಣೆಗಳಲ್ಲಿ ಬಳಕೆಯಾದ ಇವಿಎಮ್‌ಗಳು ಸ್ಟ್ರಾಂಗ್ ರೂಮಿನಲ್ಲಿ ಸಿಆರ್ಪಿಎಫ್ ರಕ್ಷಣೆಯಲ್ಲಿ ಸುಭದ್ರವಾಗಿವೆ ಮತ್ತು ಸಿಸಿಟಿವಿ ಕಣ್ಗಾವಲು ಇದ್ದು, ಅದನ್ನು ಎಲ್ಲ ರಾಜಕೀಯ ಪಕ್ಷಗಳು ನೋಡುತ್ತಿರುತ್ತಾರೆ ಎಂದು ತಿಳಿಸಿದ್ದಾರೆ. ಇವಿಎಮ್‌ಗಳನ್ನು ಮಂಡಿ ಮತಎಣಿಕೆ ಕೇಂದ್ರದ ದಾಸ್ತಾನು ಪ್ರದೇಶದಿಂದ ಸ್ಥಳೀಯ ಕಾಲೇಜೊಂದಕ್ಕೆ ಸಾಗಿಸಲಾಗುತ್ತಿತ್ತು ಎಂದಿದ್ದಾರೆ.

ಆದಾಗ್ಯೂ, ಮಾಧ್ಯಮಗಳೊಂದಿಗೆ ಮಾತನಾಡಿದ ಅಖಿಲೇಶ್ ಜಿಲ್ಲಾಧಿಕಾರಿಗಳ ಹೇಳಿಕೆಯನ್ನು ಬಲವಾಗಿ ಅಲ್ಲಗಳೆದರು. ‘ವಾರಣಾಸಿಯಲ್ಲಿ ಒಂದು ಟ್ರಕ್ ಅನ್ನು ನಾವು ತಡೆದು ನಿಲ್ಲಿಸಿದ್ದೆವು, ಅದಾಗ್ಯೂ ಅಲ್ಲಿಂದ ಎರಡು ಟ್ರಕ್ಗಳು ಪರಾರಿಯಾಗಿದ್ದವು. ಯಾವುದೇ ಸಂಶಯಾಸ್ಪದ ಚಟುವಟಿಕೆ ನಡೆದಿರದಿದ್ದರೆ ಇವಿಎಮ್‌ ಗಳಿದ್ದ ಟ್ರಕ್ಗಳು ಏಕೆ ಪರಾರಿಯಾಗಿದ್ದವು? ಅಭ್ಯರ್ಥಿಗಳ ಒಪ್ಪಿಗೆಯಿಲ್ಲದೆ ಯಾವುದೇ ಇವಿಎಮ್‌ ಅನ್ನು ಸ್ಥಳಾಂತರಿಸುವಂತಿಲ್ಲ ’ ಎಂದ ಅವರು, ಮುಖ್ಯಮಂತ್ರಿಗಳ ಪ್ರಧಾನ ಕಾರ್ಯದರ್ಶಿಯೋರ್ವರು ಜಿಲ್ಲಾಧಿಕಾರಿಗಳಿಗೆ ಕರೆ ಮಾಡಿ ‘ಬಿಜೆಪಿ ಸೋಲುತ್ತಿರುವ ಕ್ಷೇತ್ರಗಳಲ್ಲಿ ಮತ ಎಣಿಕೆ ನಿಧಾನವಾಗಿ ನಡೆಯಬೇಕು ’ಎಂದು ಸೂಚಿಸುತ್ತಿದ್ದಾರೆ ಎಂಬ ಮಾಹಿತಿ ನಮಗೆ ಲಭಿಸಿದೆ. ಈಗ ಇವಿಎಮ್‌ಗಳು ಸಿಕ್ಕಿಬಿದ್ದಿರುವುದರಿಂದ ಅಧಿಕಾರಿಗಳು ಹಲವಾರು ನೆಪಗಳನ್ನು ಹೇಳುತ್ತಾರೆ ಎಂದರು.

ಕಳೆದ ಚುನಾವಣೆಗಳಲ್ಲಿ ಬಿಜೆಪಿ 47 ಸ್ಥಾನಗಳನ್ನು 5,000ಕ್ಕೂ ಕಡಿಮೆ ಅಂತರದಿಂದ ಗೆದ್ದಿತ್ತು. ಈಗ ಚುನಾವಣೋತ್ತರ ಸಮೀಕ್ಷೆಗಳು ಬಿಜೆಪಿ ಗೆಲ್ಲಲಿದೆ ಎಂಬ ಹುಯಿಲನ್ನೆಬ್ಬಿಸಿವೆ ಮತ್ತು ನಡೆಯುತ್ತಿರಬಹುದಾದ ಯಾವಿದೇ ಇವಿಎಂ ಕಳ್ಳತನವನ್ನು ಕಡೆಗಣಿಸಲಾಗುತ್ತಿದೆ ಎಂದರು.

ವಾರಣಾಸಿಯಲ್ಲಿ ಇವಿಎಂಗಳಿದ್ದ ಟ್ರಕ್ ಸಿಕ್ಕಿಬಿದ್ದಿರುವ ಸುದ್ದಿಯು ಉ.ಪ್ರದೇಶದ ಪ್ರತಿಯೊಂದು ವಿಧಾನಸಭಾ ಕ್ಷೇತ್ರದಲ್ಲಿಯೂ ಎಚ್ಚರಿಕೆಯಿಂದಿರಬೇಕು ಎಂಬ ಸಂದೇಶವನ್ನು ನೀಡುತ್ತಿದೆ. ಎಸ್ಪಿ ಮೈತ್ರಿಕೂಟದ ಎಲ್ಲ ಅಭ್ಯರ್ಥಿಗಳು ಮತ್ತು ಬೆಂಬಲಿಗರು ಮತ ಎಣಿಕೆಯಲ್ಲಿ ಅಕ್ರಮಗಳನ್ನು ತಡೆಯಲು ತಮ್ಮ ಕ್ಯಾಮೆರಾಗಳೊಂದಿಗೆ ಸಜ್ಜಾಗಿರಬೇಕು. ಪ್ರಜಾಪ್ರಭುತ್ವ ಮತ್ತು ಭವಿಷ್ಯದ ರಕ್ಷಣೆಗಾಗಿ ಮತ ಎಣಿಕೆಯಲ್ಲಿ ಯುವಜನರು ಯೋಧರಂತೆ ಕಾರ್ಯ ನಿರ್ವಹಿಸಬೇಕು ಎಂದರು.

ಬಿಜೆಪಿ ಪಕ್ಷದಿಂದ ಹೊರಬಂದು ಸಮಾಜವಾದಿ ಪಕ್ಷ ಸೇರ್ಪಡೆಗೊಂಡಿರುವ ಸ್ವಾಮಿ ಪ್ರಸಾದ್‌ ಮೌರ್ಯ ಕೂಡಾ ಇಂತಹದೇ ಧಾಟಿಯಲ್ಲಿ ಮಾತನಾಡಿದ್ದು, ಆದಿತ್ಯನಾಥ್‌ ಸರಕಾರ ಮತಯಂತ್ರಗಳನ್ನು ಹ್ಯಾಕ್‌ ಮಾಡಿದೆ ಎಂದು ಆರೋಪಿಸಿದ್ದಾರೆ.

ಕುತೂಹಲಕಾರಿಯೆಂಬಂತೆ ಸಮಾಜವಾದಿ ಪಕ್ಷದ ಅಭ್ಯರ್ಥಿಯೋರ್ವರು ತಮ್ಮ ವಾಹನದಲ್ಲಿ ಬಂದು, ಇವಿಎಂ ಇರುವ ಕೊಠಡಿಗೆ ಸ್ವಲ್ಪ ದೂರದಲ್ಲಿ ನಿಂತು ಬೈನಾಕ್ಯುಲರ್‌ ಮೂಲಕ ಕಣ್ಗಾವಲಿಟ್ಟಿರುವ ವೀಡಿಯೊವೊಂದು ಸಾಮಾಜಿಕ ತಾಣದಾದ್ಯಂತ ವೈರಲ್‌ ಆಗಿದೆ. "ಇವಿಎಂ ಸ್ಟ್ರಾಂಗ್ ರೂಮ್ ಮತ್ತು ಅದರ ಸುತ್ತಲಿನ ಇತರ ಚಲನವಲನಗಳ ಮೇಲೆ ನಿಗಾ ಇಡಲು ಎಸ್‌ಪಿ ಮುಖ್ಯಸ್ಥರು ಆದೇಶಿಸಿದ್ದಾರೆ. ನಾವು 8 ಗಂಟೆಗಳ ಅವಧಿಗೆ ಮೂರು ಪಾಳಿಗಳಲ್ಲಿ ಕೆಲಸ ಮಾಡುತ್ತೇವೆ. ನಮಗೆ ಎಕ್ಸಿಟ್ ಪೋಲ್‌ಗಳಲ್ಲಿ ನಂಬಿಕೆ ಇಲ್ಲ, ಅಖಿಲೇಶ್ ಯಾದವ್ ಸಿಎಂ ಆಗುತ್ತಾರೆ. ನಾವು ಬಹುಮತ ಪಡೆದು ಸರ್ಕಾರ ರಚಿಸುತ್ತೇವೆ" ಎಂದು ಹಸ್ತಿನಾಪುರದ ಎಸ್ಪಿ ಪಕ್ಷದ ಅಭ್ಯರ್ಥಿ ಯೋಗೇಶ್‌ ವರ್ಮಾ ಹೇಳಿಕೆ ನೀಡಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News