'ದಿ ಕಾಶ್ಮೀರ್‌ ಫೈಲ್ಸ್‌ʼ ಚಿತ್ರತಂಡವನ್ನು ತನ್ನ ಕಾರ್ಯಕ್ರಮಕ್ಕೆ ಆಹ್ವಾನಿಸಲು ನಿರಾಕರಿಸಿದ ಕಪಿಲ್‌ ಶರ್ಮಾ: ಆರೋಪ

Update: 2022-03-08 14:39 GMT

ಹೊಸದಿಲ್ಲಿ: ಕಾಮೆಡಿಯನ್‌ ಕಪಿಲ್‌ ಶರ್ಮ ನಡೆಸಿಕೊಂಡು ಬರುತ್ತಿರುವ ಹಿಂದಿ ಕಿರುತೆರೆಯ ಜನಪ್ರಿಯ ಕಾಮಿಡಿ ಶೋ ದಿ ಕಪಿಲ್‌ ಶರ್ಮ ಶೋ (ಟಿಕೆಎಸ್‌ಎಸ್‌) ಕುರಿತು ಆರೋಪವೊಂದು ವ್ಯಕ್ತವಾಗಿದೆ. ಕಾಶ್ಮೀರಿ ಪಂಡಿತರ ʼನೈಜ ಕಥೆʼ ಎಂದು ಹೇಳಲಾದ  ಸಿನೆಮಾ ʼದಿ ಕಾಶ್ಮೀರ್‌ ಫೈಲ್ಸ್‌ʼ ಸಿನೆಮಾ ತಂಡವನ್ನು ಕಾರ್ಯಕ್ರಮಕ್ಕೆ ಆಹ್ವಾನಿಸದಿರುವ ಕುರಿತು ಟ್ವಿಟರಿನಲ್ಲಿ ಖಂಡನೆ ವ್ಯಕ್ತವಾಗಿದೆ. 

ಟಿಕೆಎಸ್‌ಎಸ್‌ ಕಾರ್ಯಕ್ರಮದಲ್ಲಿ ದೀಪಿಕಾ ಪಡುಕೋಣೆ, ಅಕ್ಷಯ್‌ ಕುಮಾರ್‌, ರಣವೀರ್‌ ಸಿಂಗ್‌, ಸಲ್ಮಾನ್‌ ಖಾನ್‌, ಆಲಿಯಾ ಭಟ್ ಮೊದಲಾದ ಜನಪ್ರಿಯ ತಾರೆಯರ ಸಿನೆಮಾಗಳ ಪ್ರಚಾರಕ್ಕಾಗಿ ಅವಕಾಶ ಮಾಡಿಕೊಡಲಾಗಿತ್ತು. ಅದರಂತೆ, ವಿವೇಕ್‌ ಅಗ್ನಿಹೋತ್ರಿ ಅವರ ನಿರ್ದೇಶನದ ದಿ ಕಾಶ್ಮೀರ್ ಫೈಲ್ಸ್‌ ಚಿತ್ರತಂಡವೂ ಟಿಕೆಎಸ್‌ಎಸ್‌ ಕಾರ್ಯಕ್ರಮದಲ್ಲಿ ಭಾಗಿಯಾಗಿ ಸಿನೆಮಾವನ್ನು ಪ್ರಚಾರ ಮಾಡಬೇಕೆಂದು ಅಭಿಮಾನಿಯೊಬ್ಬರು ನಿರ್ದೇಶಕ ಅಗ್ನಿಹೋತ್ರಿಯನ್ನು ಉಲ್ಲೇಖಿಸಿ ಮನವಿ ಮಾಡಿದ್ದಾರೆ. 

ಇದಕ್ಕೆ ಪ್ರತಿಕ್ರಿಯಿಸಿದ ಅಗ್ನಿಹೋತ್ರಿ, ʼನಮ್ಮ ತಂಡದಲ್ಲಿ ಸ್ಟಾರ್‌ಗಳು ಇಲ್ಲದ ಕಾರಣ ಟಿಕೆಎಸ್‌ಎಸ್‌ ಕಾರ್ಯಕ್ರಮದಲ್ಲಿ ಭಾಗವಹಿಸಲು ಅವಕಾಶ ನಿರಾಕರಿಸಲಾಯಿತು ಎಂದು ಆರೋಪಿಸಿದ್ದಾರೆ. ಹಾಗೂ ಕಪಿಲ್‌ ಶರ್ಮಾ ಶೋಗೆ ಯಾರನ್ನು ಆಹ್ವಾನಿಸಬೇಕು ಎಂಬುದನ್ನು ನಾನು ನಿರ್ಧರಿಸುವುದಿಲ್ಲ. ಅವರು ಯಾರನ್ನು ಆಹ್ವಾನಿಸಲು ಬಯಸುತ್ತಾರೆ ಎಂಬುದು ಅವರ ಮತ್ತು ಅವರ ನಿರ್ಮಾಪಕರ ಆಯ್ಕೆಯಾಗಿದೆ ಎಂದು ಟ್ವೀಟ್‌ ಮಾಡಿದ್ದಾರೆ.

ಇದು ಅಗ್ನಿಹೋತ್ರಿ ಅಭಿಮಾನಿಗಳಿಗೆ ಹಾಗೂ ದಿ ಕಾಶ್ಮೀರ್‌ ಫೈಲ್ಸ್‌ ಸಿನೆಮಾ ವೀಕ್ಷಿಸಲು ಕಾಯುತ್ತಿರುವ ಬಹುತೇಕ ಬಲಪಂಥೀಯರ ಅಸಮಾಧಾನಕ್ಕೆ ಕಾರಣವಾಗಿದೆ.  ಕಪಿಲ್‌ ಶರ್ಮಾ ಕಾರ್ಯಕ್ರಮವನ್ನು ಬಹಿಷ್ಕರಿಸುವಂತೆ ಟ್ವಿಟರಿನಲ್ಲಿ ಅಭಿಯಾನ ಶುರು ಮಾಡಲಾಗಿದೆ. 

ಬಲಪಂಥೀಯರು ಕಾಶ್ಮೀರ್‌ ಫೈಲ್ಸ್‌ ಚಿತ್ರದ ಪರ ನಿಂತಿದ್ದು,  ಕಾಶ್ಮೀರಿ ಪಂಡಿತರ ಹತ್ಯಾಕಾಂಡದ ಬಗ್ಗೆ ಈ ಸಿನೆಮಾ ಮಾಡಲಾಗಿದೆ ಎಂದು ಚಿತ್ರತಂಡದ ಮೂಲಗಳು ಹೇಳಿದೆ. ಬಿಜೆಪಿಯೊಂದಿಗೆ ಹಾಗೂ ಬಲಪಂಥೀಯರೊಂದಿಗೆ ಗುರುತಿಸಿಕೊಂಡಿರುವ ಮಿಥುನ್‌ ಚಕ್ರವರ್ತಿ, ಅನುಪಮ್‌ ಖೇರ್‌, ಪ್ರಕಾಶ್‌ ಬೆಳವಾಡಿ ಮೊದಲಾದವರು ಈ ಚಿತ್ರದ ಮುಖ್ಯಭೂಮಿಕೆಯಲ್ಲಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News