ಕೇಂದ್ರ ಸರಕಾರ ನಮ್ಮನ್ನು ಗುರಿಪಡಿಸುತ್ತಿದೆ ಎಂದ ಶಿವಸೇನೆ

Update: 2022-03-08 18:03 GMT

ಮುಂಬೈ,ಮಾ.8: ಮಹಾರಾಷ್ಟ್ರದ ಸಚಿವರಾದ ಆದಿತ್ಯ ಠಾಕ್ರೆ ಮತ್ತು ಅನಿಲ್ ಪರಬ್ ಅವರ ನಿಕಟವರ್ತಿಗಳ ಮೇಲೆ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ಮಂಗಳವಾರ ಸರಣಿ ದಾಳಿಗಳನ್ನು ನಡೆಸಿದ್ದಾರೆ. ಕೇಂದ್ರವು ಪ್ರತಿಪಕ್ಷ ಆಡಳಿತದ ಮಹಾರಾಷ್ಟ್ರ ಮತ್ತು ಪಶ್ಚಿಮ ಬಂಗಾಳಗಳನ್ನು ಆಯ್ಕೆಯ ಗುರಿಗಳನ್ನಾಗಿಸಿಕೊಳ್ಳುತ್ತಿದೆ ಎಂದು ಶಿವಸೇನೆಯು ಆರೋಪಿಸಿದೆ. ಸರಕಾರವು ಕೇಂದ್ರೀಯ ಸಂಸ್ಥೆಗಳ ದುರ್ಬಳಕೆ ಮಾಡಿಕೊಳ್ಳುತ್ತಿದೆ ಎಂದು ಆರೋಪಿಸಿದ ಠಾಕ್ರೆ,ಪ.ಬಂಗಾಳ ಮತ್ತು ಆಂಧ್ರ ಪ್ರದೇಶಗಳಲ್ಲಿ ಇಂತಹ ದಾಳಿಗಳು ನಡೆದಿವೆ. ಈಗ ಮಹಾರಾಷ್ಟ್ರದಲ್ಲಿ ಚುನಾವಣೆಗಳು ನಡೆಯಲಿದ್ದರೆ ಇಲ್ಲಿಯೂ ಅದು ಸಂಭವಿಸುತ್ತಿದೆ ಎಂದರು.

  ಠಾಕ್ರೆಯವರ ನಿಕಟವರ್ತಿ ಎಂದು ಪರಿಗಣಿಸಲಾಗಿರುವ ಶಿವಸೇನೆಯ ಪದಾಧಿಕಾರಿ ಹಾಗೂ ಶಿರಡಿ ಟ್ರಸ್ಟ್ ಸದಸ್ಯ ರಾಹುಲ್ ಕನಾಲ್ ಅವರ ನಿವಾಸಕ್ಕೆ ದಾಳಿ ನಡೆದಿದೆ ಎಂದು ಬೆಳವಣಿಗೆಯನ್ನು ಬಲ್ಲ ಮೂಲಗಳು ತಿಳಿಸಿವೆ. ಕೇಬಲ್ ಆಪರೇಟರ್ಗಳಾದ ಸದಾನಂದ ಕದಮ್ ಮತ್ತು ಬಜರಂಗ ಖರ್ಮಾಟೆ ಅವರಿಗೆ ಸೇರಿದ ಸ್ಥಳಗಳಲ್ಲೂ ಶೋಧ ಕಾರ್ಯಾಚರಣೆಗಳನ್ನು ನಡೆಸಲಾಗಿದ್ದು,ಅವರ ವ್ಯವಹಾರಗಳನ್ನು ಸ್ತಂಭನಗೊಳಿಸಲಾಗಿದೆ. ಇವರಿಬ್ಬರೂ ಶಿವಸೇನೆಯ ಸಚಿವ ಅನಿಲ್ ಪರಬ್ಗೆ ನಿಕಟರಾಗಿದ್ದಾರೆ ಎನ್ನಲಾಗಿದೆ.

ಸನ್ನಹಿತವಾಗಿರುವ,ದೇಶದಲ್ಲಿಯೇ ಅತ್ಯಂತ ಶ್ರೀಮಂತ ಬೃಹನ್ಮುಂಬೈ ಮಹಾನಗರ ಪಾಲಿಕೆ (ಬಿಎಂಸಿ)ಯ ಚುನಾವಣೆಗಳಿಗೂ ದಾಳಿಗಳಿಗೂ ನಂಟು ಕಲ್ಪಿಸಿರುವ ಹಿರಿಯ ಶಿವಸೇನೆ ನಾಯಕ ಸಂಜಯ ರಾವುತ್ ಅವರು,ಬಿಎಂಸಿ ಚುನಾವಣೆಗಳು ನಡೆಯುವವರೆಗೂ ಮುಂಬೈನ ಪ್ರತಿ ವಾರ್ಡಿನಲ್ಲಿಯೂ ದಾಳಿಗಳು ನಡೆಯಲಿವೆ. ಈಗ ಆದಾಯ ತೆರಿಗೆ ಅಧಿಕಾರಿಗಳಿಗೆ ಇದೊಂದೇ ಕೆಲಸವಾಗಿದೆ. ಮಹಾರಾಷ್ಟ್ರ ಮತ್ತು ಪ.ಬಂಗಾಳಗಳಲ್ಲಿ ಮಾತ್ರ ಏಕೆ ಜನರನ್ನು ಗುರಿಯಾಗಿಸಿಕೊಳ್ಳಲಾಗುತ್ತಿದೆ? ಶಿವಸೇನೆ ಮತ್ತು ತೃಣಮೂಲ ಕಾಂಗ್ರೆಸ್ ಮೇಲೆ ಮಾತ್ರ ದಾಳಿಗಳು ನಡೆಯುತ್ತಿವೆ. ರಾಜ್ಯ ಸರಕಾರಗಳು ಬೀಳುವಂತಾಗಲು ಒತ್ತಡವನ್ನು ಸೃಷ್ಟಿಸಲು ಕೇಂದ್ರ ಸರಕಾರವು ಇದನ್ನು ಮಾಡುತ್ತಿದೆ ಎಂದರು.

ಹೆಚ್ಚಿನ ದಾಳಿಗಳು ಮಹಾರಾಷ್ಟ್ರದಲ್ಲಿ ನಡೆಯುತ್ತಿವೆ. ಮಹಾರಾಷ್ಟ್ರ 14 ಮತ್ತು ಪ.ಬಂಗಾಳದಲ್ಲಿ ಏಳು ಗಣ್ಯರನ್ನು ಗುರಿಯಾಗಿಸಿಕೊಂಡು ದಾಳಿಗಳನ್ನು ನಡೆಸಲಾಗುತ್ತಿದೆ. ಬಿಜೆಪಿಗೆ ಸೇರಿದವರ ವಿರುದ್ಧ ಯಾವುದೇ ಕ್ರಮಗಳಿಲ್ಲ. ಏಕೆ,ಅವರೆಲ್ಲ ರಸ್ತೆಗಳಲ್ಲಿ ಭಿಕ್ಷೆ ಬೇಡುತ್ತಿದ್ದಾರೆಯೇ ಎಂದು ಪ್ರಶ್ನಿಸಿದ ಅವರು,ಶಿವಸೇನೆಯು 50 ಹೆಸರುಗಳನ್ನು ಆದಾಯ ತೆರಿಗೆ ಇಲಾಖೆ ಮತ್ತು ಜಾರಿ ನಿರ್ದೇಶನಾಲಯ (ಈ.ಡಿ.)ಕ್ಕೆ ಕಳುಹಿಸಿದೆ, ಆದರೆ ಸಂಸದರೋರ್ವರ ಸೂಚನೆಯ ಮೇರೆಗೆ ಅವರ ವಿರುದ್ಧ ಕ್ರಮಗಳನ್ನು ಕೈಗೊಳ್ಳುತ್ತಿಲ್ಲ ಎಂದರು.

ಈ.ಡಿ.ಯ ಏಜೆಂಟರು ಕಳೆದ ಕೆಲವು ವರ್ಷಗಳಿಂದ ಹಫ್ತಾ ವಸೂಲಿ ಕೆಲಸವನ್ನು ಮಾಡುತ್ತಿದ್ದಾರೆ ಎಂದು ಆರೋಪಿಸಿದ ರಾವುತ್,ಈ.ಡಿ. ಮತ್ತು ಕೆಲವು ಈ.ಡಿ.ಅಧಿಕಾರಿಗಳು ಬಿಜೆಪಿಯ ಎಟಿಎಂ ಯಂತ್ರಗಳಾಗಿದ್ದಾರೆ. ಕೆಲವು ಈ.ಡಿ.ಅಧಿಕಾರಿಗಳು ಬಿಜೆಪಿ ಟಿಕೆಟ್‌ಗಳಲ್ಲಿ ಚುನಾವಣೆಗಳಿಗೆ ಸ್ಪರ್ಧಿಸುತ್ತಿದ್ದಾರೆ ಮತ್ತು ತನಗೆ ತಿಳಿದಿರುವಂತೆ ಓರ್ವ ಅಧಿಕಾರಿ 50 ಜನರಿಗಾಗಿ ಚುನಾವಣಾ ವೆಚ್ಚಗಳನ್ನೂ ಭರಿಸುತ್ತಿದ್ದಾರೆ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News