×
Ad

ಇವಿಎಂ ಸಾಗಾಟದ 'ಶಿಷ್ಟಾಚಾರದಲ್ಲಿ ಲೋಪ' ಎಂದು ಒಪ್ಪಿಕೊಂಡ ಅಧಿಕಾರಿ: ಸಮಾಜವಾದಿ ಪಕ್ಷ ಟ್ವೀಟ್

Update: 2022-03-09 12:13 IST

ವಾರಣಾಸಿ: ಉತ್ತರ ಪ್ರದೇಶದ ವಿದ್ಯುನ್ಮಾನ ಮತಯಂತ್ರಗಳನ್ನು (ಇವಿಎಂ) ಅಕ್ರಮವಾಗಿ ಸಾಗಿಸಲಾಗಿದೆ ಎಂದು  ಅಖಿಲೇಶ್ ಯಾದವ್ ಆರೋಪಿಸಿದ  ಒಂದು ದಿನದ ನಂತರ  ಇವಿಎಂ ಯಂತ್ರಗಳ ಸಾಗಾಟದ ಶಿಷ್ಟಾಚಾರದಲ್ಲಿ ಲೋಪವಾಗಿದೆ ಎಂದು ಒಪ್ಪಿಕೊಂಡಿರುವ ಅಧಿಕಾರಿಯ ಹೇಳಿಕೆಯ ವೀಡಿಯೊವನ್ನು ಸಮಾಜವಾದಿ ಪಕ್ಷ ಟ್ವೀಟಿಸಿದೆ.

ನಿನ್ನೆ ಸಂಜೆ ಸುದ್ದಿಗಾರರೊಂದಿಗೆ ಮಾತನಾಡಿದ ವಾರಣಾಸಿಯ ಕಮಿಷನರ್ ದೀಪಕ್ ಅಗರ್ವಾಲ್ ಇವಿಎಂಗಳ ಸಾಗಾಟದಲ್ಲಿನ ಶಿಷ್ಟಾಚಾರದಲ್ಲಿ ಲೋಪವಾಗಿದೆ ಎಂದು ಒಪ್ಪಿಕೊಂಡಿದ್ದಾರೆ. ಆದಾಗ್ಯೂ, ಪ್ರಶ್ನಿಸಲ್ಪಟ್ಟಿರುವ  ಮತ ಯಂತ್ರಗಳನ್ನು  ತರಬೇತಿ ಉದ್ದೇಶಕ್ಕಾಗಿ ಮಾತ್ರ ಬಳಸಲಾಗಿದೆ ಎಂದು ಅವರು ಹೇಳಿದರು.

"ನೀವು ಇವಿಎಂಗಳ ಸಾಗಾಟದ ಪ್ರೋಟೋಕಾಲ್ ಬಗ್ಗೆ ಮಾತನಾಡಿದರೆ, ಪ್ರೋಟೋಕಾಲ್‌ನಲ್ಲಿ ಲೋಪವಿದೆ ಎಂದು  ನಾನು ಒಪ್ಪಿಕೊಳ್ಳುತ್ತೇನೆ. ಆದರೆ ಮತದಾನದಲ್ಲಿ ಬಳಸುವ ಯಂತ್ರಗಳನ್ನು ತೆಗೆದುಕೊಂಡು ಹೋಗುವುದು ಅಸಾಧ್ಯ ಎಂದು ನಾನು ನಿಮಗೆ ಖಾತರಿ ನೀಡಬಲ್ಲೆ. ಎಣಿಕೆ ಕೇಂದ್ರಗಳಲ್ಲಿ ಸಿಸಿಟಿವಿ ಕ್ಯಾಮೆರಾಗಳು, ಭದ್ರತಾ ಸಿಬ್ಬಂದಿ ಹಾಗೂ  ರಾಜಕೀಯ ಪಕ್ಷದ ಪ್ರತಿನಿಧಿಗಳು ಇದ್ದಾರೆ. ರಾಜಕೀಯ ಪಕ್ಷದ ಕಾರ್ಯಕರ್ತರು ಕಣ್ಣಿಡಲು ಕೇಂದ್ರಗಳ ಹೊರಗೆ ಕುಳಿತುಕೊಳ್ಳಬಹುದು" ಎಂದು ಆಯುಕ್ತರು ಹೇಳಿದರು.

ಸಮಾಜವಾದಿ ಪಕ್ಷವು ಟ್ವಿಟರ್‌ನಲ್ಲಿ ಆಯುಕ್ತರ ಹೇಳಿಕೆಯನ್ನು ಹಂಚಿಕೊಂಡಿದೆ,. ಶಿಷ್ಟಾಚಾರವನ್ನು ಅನುಸರಿಸಿಲ್ಲ ಎಂದು ಅಧಿಕಾರಿ ಒಪ್ಪಿಕೊಂಡಿದ್ದಾರೆಂದು ಅದು ಹೇಳಿದೆ.

"ವಿವಿಧ ಜಿಲ್ಲೆಗಳ ಇವಿಎಂಗಳಲ್ಲಿ ಉಲ್ಲಂಘನೆಯ ಮಾಹಿತಿ ಇದೆ. ಯಾರ ಆದೇಶದ ಮೇರೆಗೆ ಇದು ನಡೆಯುತ್ತಿದೆ? ಅಧಿಕಾರಿಗಳು ಮುಖ್ಯಮಂತ್ರಿ (ಯೋಗಿ ಆದಿತ್ಯನಾಥ್) ಕಚೇರಿಯಿಂದ ಒತ್ತಡಕ್ಕೆ ಒಳಗಾಗಿದ್ದಾರೆಯೇ? ಇದನ್ನು ಚುನಾವಣಾ ಆಯೋಗವು ಸ್ಪಷ್ಟಪಡಿಸಬೇಕು" ಎಂದು ಸಮಾಜವಾದಿ ಪಕ್ಷವು ಚುನಾವಣಾ ಆಯೋಗವನ್ನು ಟ್ಯಾಗ್ ಮಾಡಿ ಟ್ವೀಟಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News