ರಾಜೀವ್ ಗಾಂಧಿ ಹತ್ಯೆ ಪ್ರಕರಣದ ಆರೋಪಿ ಪೇರರಿವಾಳನ್ ಗೆ ಜಾಮೀನು ನೀಡಿದ ಸುಪ್ರೀಂ ಕೋರ್ಟ್
ಹೊಸದಿಲ್ಲಿ: ರಾಜೀವ್ ಗಾಂಧಿ ಹತ್ಯೆಯ ಆರೋಪಿ ಎಜಿ ಪೇರರಿವಾಳನ್ ಗೆ ಸುಪ್ರೀಂ ಕೋರ್ಟ್ ಬುಧವಾರ ಜಾಮೀನು ಮಂಜೂರು ಮಾಡಿದೆ ಎಂದು ತಿಳಿದು ಬಂದಿದೆ.
ಜೈಲಿನಿಂದ ಬಿಡುಗಡೆ ಕೋರಿ ಸಲ್ಲಿಸಿರುವ ಅರ್ಜಿಯ ಕುರಿತು ರಾಜ್ಯಪಾಲರು ಇನ್ನೂ ತೀರ್ಮಾನಿಸದ ಕಾರಣ ಪೇರರಿವಾಳನ್ ಗೆ ಜಾಮೀನು ನೀಡಬೇಕೆ? ಬೇಡವೇ? ಎಂದು ಸುಪ್ರೀಂ ಕೋರ್ಟ್ ಚಿಂತಿಸಿತ್ತು. ಪೇರರಿವಾಳನ್ ಮನವಿಯನ್ನು ನಿರ್ಧರಿಸಲು ರಾಷ್ಟ್ರಪತಿಗಳೇ ಸೂಕ್ತ ಅಧಿಕಾರ ಹೊಂದಿದ್ದಾರೆ ಎಂದು ಕೇಂದ್ರವು ಈ ಮನವಿಯನ್ನು ತಿರಸ್ಕರಿಸಿತ್ತು.
ಪ್ರಕರಣಕ್ಕೆ ಸಂಬಂಧಿಸಿದಂತೆ ಪೇರರಿವಾಳನ್ ನನ್ನು 19 ನೇ ವಯಸ್ಸಿನಲ್ಲಿ ಬಂಧಿಸಲಾಗಿತ್ತು. ಮೇ 1999 ರಲ್ಲಿ ಪೇರರಿವಾಳನ್ ಗೆ ಮರಣದಂಡನೆ ವಿಧಿಸಲಾಯಿತು. ಮಾಜಿ ಪ್ರಧಾನಿ ರಾಜೀವ್ ಗಾಂಧಿಯನ್ನು ಕೊಂದ ಬೆಲ್ಟ್ ಬಾಂಬ್ ನಲ್ಲಿ ಬಳಸಿದ 8-ವೋಲ್ಟ್ ಬ್ಯಾಟರಿಯನ್ನು ಖರೀದಿಸಿದ ಆರೋಪವನ್ನು ಆತ ಹೊಂದಿದ್ದ. 2014 ರಲ್ಲಿ, ಪೇರರಿವಾಳನ್, ಮುರುಗನ್ ಮತ್ತು ಸಂತನ್ (ಇಬ್ಬರೂ ಶ್ರೀಲಂಕಾದವರು), ಅವರ ಕ್ಷಮಾದಾನ ಅರ್ಜಿಗಳ ದೀರ್ಘಾವಧಿಯ ಬಾಕಿಯ ಮೇಲೆ ಜೀವಾವಧಿಗೆ ಬದಲಾಯಿಸಲಾಗಿತ್ತು. ಇದಾದ ಕೆಲವೇ ದಿನಗಳಲ್ಲಿ ತಮಿಳುನಾಡಿನ ಎಐಎಡಿಎಂಕೆ ಸರ್ಕಾರವು ಪ್ರಕರಣದ ಎಲ್ಲಾ ಏಳು ಅಪರಾಧಿಗಳನ್ನು ಬಿಡುಗಡೆ ಮಾಡುವಂತೆ ಆದೇಶಿಸಿತ್ತು.