ಭಾರತ ಮಾನವ ಶಕ್ತಿಯನ್ನು ಅಭಿವೃದ್ಧಿಪಡಿಸಬೇಕು, ಚಿಪ್, ಹಾರ್ಡ್‌ವೇರ್‌ ನಿರ್ಮಾಣವನ್ನಲ್ಲ: ರಘುರಾಮ್ ರಾಜನ್

Update: 2022-03-09 11:51 GMT

ಹೊಸದಿಲ್ಲಿ: ಯುದ್ಧಪೀಡಿತ ಉಕ್ರೇನ್‍ನಲ್ಲಿ ವೈದ್ಯಕೀಯ ವ್ಯಾಸಂಗ ಮಾಡುತ್ತಿದ್ದ ಸಾವಿರಾರು ವಿದ್ಯಾರ್ಥಿಗಳು ಇದೀಗ ನಿಸ್ಸಹಾಯಕರಾಗಿ ವಾಪಸ್ ಸ್ವದೇಶಕ್ಕೆ ಮರಳಬೇಕಾದ ಅನಿವಾರ್ಯತೆಯ ಸ್ಥಿತಿ ಎದುರಾಗಿರುವ ಹಿನ್ನೆಲೆಯಲ್ಲಿ ಪ್ರತಿಕ್ರಿಯಿಸಿರುವ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದ ಮಾಜಿ ಗವರ್ನರ್ ರಘುರಾಮ್ ರಾಜನ್, "ಭಾರತದ ವಿದ್ಯಾರ್ಥಿಗಳು ವೈದ್ಯಕೀಯ ಪದವಿ ಶಿಕ್ಷಣಕ್ಕಾಗಿ ವಿದೇಶಕ್ಕೆ ಏಕೆ ಹೋಗಬೇಕಾಯಿತು. ನಾವೇಕೆ ಈ ರೀತಿ ನಮ್ಮ ಮಾನವ ಸಂಪನ್ಮೂಲವನ್ನು ರಫ್ತುಗೊಳಿಸುತ್ತಿದ್ದೇವೆ? ಅವುಗಳನ್ನು ನಮ್ಮ ದೇಶದಲ್ಲಿಯೇ ಉಳಿಸಿಕೊಳ್ಳಲು ಸಾಧ್ಯವಿಲ್ಲವೇ? ನಮ್ಮ ಶಕ್ತಿಗಳ ಮೇಲೆ ನಮ್ಮ ಗಮನ ಕೇಂದ್ರೀಕೃತವಾಗಬೇಕು" ಎಂದು ಸುದ್ದಿ ವಾಹಿನಿಯೊಂದಕ್ಕೆ ನೀಡಿದ ಸಂದರ್ಶನದಲ್ಲಿ ಅವರು ಹೇಳಿದ್ದಾರೆ.

"ಅಮಾನ್ಯೀಕರಣ ನಂತರ ನಮ್ಮ ಆರ್ಥಿಕತೆ ಸರಿಯಾಗಿ ಚೇತರಿಸಿಕೊಂಡಿಲ್ಲ. ಭಾರತದಲ್ಲಿ ಹಾರ್ಡ್‍ವೇರ್ ಬಗ್ಗೆ ಹೆಚ್ಚಿನ ಗಮನ ನೀಡಲಾಗುತ್ತಿದೆ, ಇಲ್ಲಿ ನಮ್ಮ ಮುಖ್ಯ ಶಕ್ತಿಯೇ ಮನುಷ್ಯರ ಬುದ್ಧಿಮತ್ತೆ ಹಾಗೂ ಕೌಶಲ್ಯಗಳು. ಜಾಗತಿಕವಾಗಿ ಸ್ಪರ್ಧಾತ್ಮಕವಾದ ಚಿಪ್ ಫ್ಯಾಕ್ಟರಿ ನಿರ್ಮಾಣಕ್ಕೆ 10ರಿಂದ 20 ಬಿಲಿಯನ್ ಡಾಲರ್  ಬೇಕಾಗಬಹುದು. ಆದರೆ ಇದೇ ಹಣದಿಂದ ಎಷ್ಟು ವಿವಿಗಳನ್ನು ನಿರ್ಮಿಸಬಹುದು ಎಷ್ಟು ಉನ್ನತ ವಿಜ್ಞಾನಿಗಳು, ಇಂಜಿನಿಯರ್‍ಗಳನ್ನು  ಸಿದ್ಧಪಡಿಸಬಹುದು, ಚಿಪ್ ನಿರ್ಮಿಸದೆಯೇ ಅವರೆಷ್ಟು ಚಿಪ್ ವಿನ್ಯಾಸಗಳನ್ನು ಸಿದ್ಧಪಡಿಸಬಹುದು ಎಂಬುದನ್ನು ಯೋಚಿಸಿ" ಎಂದು ಅವರು ಹೇಳಿದರು.

"ನಾವು ನಮ್ಮ ಸಾಮರ್ಥ್ಯಗಳನ್ನು ಚೆನ್ನಾಗಿ ಬಳಸಿಕೊಳ್ಳುತ್ತಿಲ್ಲ, ನಾವು ಅನುಸರಿಸುತ್ತಿರುವ ಆರ್ಥಿಕ ಮಾದರಿ ಸಾವಿರಾರು ಮಂದಿಯನ್ನು ಉದ್ಯೋಗವಿಲ್ಲದಂತೆ ಮಾಡಿದೆ" ಎಂದು ಅವರು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News