ಸುಪ್ರೀಂ ಆದೇಶದ ಹೊರತಾಗಿಯೂ ಸಿಎಎ ಪ್ರತಿಭಟನಾಕಾರರ ವಿರುದ್ಧ ಮತ್ತೆ ಕ್ರಮಕ್ಕೆ ಮುಂದಾದ ಉತ್ತರಪ್ರದೇಶ ಸರಕಾರ

Update: 2022-03-09 12:32 GMT

ಹೊಸದಿಲ್ಲಿ:  ಪೌರತ್ವ ತಿದ್ದುಪಡಿ ಕಾಯಿದೆ ವಿರೋಧಿಸಿ ಪ್ರತಿಭಟಿಸಿದವರಿಗೆ ಹಾನಿ ನಷ್ಟ ಭರಿಸುವ ಕುರಿತಂತೆ  ಜಾರಿಗೊಳಿಸಲಾದ ಎಲ್ಲಾ ನೋಟಿಸ್‍ಗಳನ್ನು ವಾಪಸ್ ಪಡೆದುಕೊಳ್ಳಲಾಗಿದೆ ಎಂದು ಉತ್ತರ ಪ್ರದೇಶ ಸರಕಾರ ಸುಪ್ರೀಂ ಕೋರ್ಟಿಗೆ ಹೇಳಿದ ಬೆನ್ನಲ್ಲೇ ಕೆಲವು ಆರೋಪಿಗಳ ವಿರುದ್ಧ ಮತ್ತೆ ಕ್ರಮಕ್ಕೆ ಸರಕಾರ ಮುಂದಾಗಿದೆ.

ಪ್ರತಿಭಟನಾಕಾರರಲ್ಲಿ ಹಲವರಿಗೆ ಕ್ಲೇಮ್ಸ್ ಟ್ರಿಬ್ಯುನಲ್ ಮುಂದೆ ಹಾಜರಾಗುವಂತೆ ನೋಟಿಸ್  ಬಂದಿದೆ ಎಂದು ತಿಳಿದು ಬಂದಿದೆ. ಕ್ಲೇಮ್ಸ್ ಟ್ರಿಬ್ಯುನಲ್, ಲಕ್ನೋ ವಲಯದ ಅಧ್ಯಕ್ಷ ಪ್ರೇಮ್ ಕಾಲಾ ಸಿಂಗ್ ಅವರು ಈ ನೋಟಿಸ್‍ಗಳಲ್ಲಿ ಆರೋಪಿಗಳೆಂದು ಹೇಳಲಾದ ವ್ಯಕ್ತಿಗಳಿಗೆ ಟ್ರಿಬ್ಯುನಲ್ ಮುಂದೆ ವಿಚಾರಣೆಗೆ ಹಾಜರಾಗುವಂತೆ ಹಾಗೂ ಅವರ ವಿರುದ್ಧ ಕ್ರಮವೇಕೆ ಕೈಗೊಳ್ಳಬಾರದೆಂಬ ಪ್ರಶ್ನೆಗೆ ಉತ್ತರಿಸುವಂತೆ ಹೇಳಿದ್ದಾರೆ.

ಕ್ಲೇಮ್ಸ್ ಟ್ರಿಬ್ಯುನಲ್ ಹಾದಿ ಹಿಡಿಯುವುದಕ್ಕೆ ಸುಪ್ರೀಂ ಕೋರ್ಟ್ ನಿರಾಕರಿಸಿರುವ ಹೊರತಾಗಿಯೂ ಸರಕಾರ ಅಂತಹುದೇ ಕ್ರಮಕ್ಕೆ ಮುಂದಾಗಿದೆ.

ಫೆಬ್ರವರಿಯಲ್ಲಿ ಪ್ರತಿಭಟನಾಕಾರರಲ್ಲಿ ಒಬ್ಬರಾಗಿದ್ದ ಪರ್ವೈಝ್ ಆರಿಫ್ ಟಿಟು ತಮ್ಮ ವಿರುದ್ಧ ಹಾನಿ ನಷ್ಟ ಭರಿಸುವಿಕೆ ನೋಟಿಸ್ ಜಾರಿ ರದ್ದುಗೊಳಿಸುವಂತೆ ಕೋರಿ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ವೇಳೆ  ಪ್ರತಿಕ್ರಿಯಿಸಿದ್ದ ನ್ಯಾಯಾಲಯ ನಿಮ್ಮ ಕ್ರಮವನ್ನು ವಾಪಸ್ ಪಡೆಯಿರಿ ಇಲ್ಲದೇ ಹೋದರೆ ನೆಲದ ಕಾನೂನಿಗೆ ವಿರುದ್ಧವಾಗಿದೆ ಎಂದು ನಾವೇ ಅದನ್ನು ರದ್ದುಗೊಳಿಸುತ್ತೇವೆ ಎಂದು ಹೇಳಿತ್ತು.

ಅದಾಗಲೇ ಹಾನಿ ನಷ್ಟ ಮೊತ್ತ ಪಾವತಿಸಿದ್ದ ನಾಗರಿಕರ ಕೋಟಿಗಟ್ಟಲೆ ಹಣವನ್ನು ವಾಪಸ್ ನೀಡುವಂತೆಯೂ ನ್ಯಾಯಾಲಯ ಸರಕಾರಕ್ಕೆ ಸೂಚಿಸಿತ್ತು.

ಹಾನಿ ನಷ್ಟ ಪಾವತಿಸುವಂತೆ ಡಿಸೆಂಬರ್ 2019ರಲ್ಲಿ ಆದಿತ್ಯನಾಥ್ ಸರಕಾರ 274 ನೋಟಿಸ್‍ಗಳನ್ನು ಜಾರಿಗೊಳಿಸಿತ್ತು. ಇವುಗಳ ಪೈಕಿ ಹಾನಿ  ನಷ್ಟ ಪಾವತಿಸುವ ಆದೇಶವನ್ನು 236 ಪ್ರಕರಣಗಳಲ್ಲಿ ಹೊರಡಿಸಲಾಗಿದ್ದರೆ 38 ಪ್ರಕರಣಗಳನ್ನು ಮುಚ್ಚಲಾಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News