ಪಂಚರಾಜ್ಯ ವಿಧಾನಸಭೆ ಚುನಾವಣೆ ಗುರುವಾರ ಮತ ಎಣಿಕೆ

Update: 2022-03-09 18:13 GMT
photo pti

ಹೊಸದಿಲ್ಲಿ,ಮಾ.9: ಏಳು ಹಂತಗಳಲ್ಲಿ ನಡೆದ ಪಂಚರಾಜ್ಯಗಳ ವಿಧಾನಸಭಾ ಚುನಾವಣೆಯ ಮತ ಏಣಿಕೆ ಗುರುವಾರ ನಡೆಯಲಿದ್ದು,ಕಣದಲ್ಲಿರುವ ರಾಜಕೀಯ ಪಕ್ಷಗಳ ಭವಿಷ್ಯ ಬಹಿರಂಗವಾಗಲಿದೆ.

ಉತ್ತರಪ್ರದೇಶ, ಉತ್ತರಾಖಂಡ,ಗೋವಾ,ಮಣಿಪುರ ಹಾಗೂ ಪಂಜಾಬ್ ರಾಜ್ಯಗಳ ವಿಧಾನಸಭಾ ಕ್ಷೇತ್ರಗಳ ಮತಏಣಿಕೆ ಗುರುವಾರ ಬೆಳಿಗ್ಗೆ 8:00 ಗಂಟೆಗೆ ಆರಂಭವಾಗಲಿದೆಯೆಂದು ಚುನಾಣಾ ಆಯೋಗ ತಿಳಿಸಿದೆ.

ಈ ಐದು ರಾಜ್ಯಗಳಲ್ಲಿ ಒಟ್ಟು 1200 ಮತಏಣಿಕೆ ಕೇಂದ್ರಗಳನ್ನು ಸ್ಥಾಪಿಸಲಾಗಿದ್ದು, ದೇಶದಲ್ಲೇ ಗರಿಷ್ಠ ವಿಧಾನಸಭಾ ಕ್ಷೇತ್ರಗಳನ್ನು ಹೊಂದಿರುವ ಉತ್ತರಪ್ರದೇಶದಲ್ಲಿ 403 ವಿಧಾನಸಭಾ ಕ್ಷೇತ್ರಗಳಿದ್ದು ಅಲ್ಲಿ 750ಕ್ಕೂ ಅಧಿಕ ಮತಏಣಿಕೆ ಕೇಂದ್ರಗಳನ್ನು ಸ್ಥಾಪಿಸಲಾಗಿದೆ. ಪಂಜಾಬ್ ಆನಂತರದ ಸ್ಥಾನದಲ್ಲಿದ್ದು ಅಲ್ಲಿ 200ಕ್ಕೂ ಅಧಿಕ ಮತಏಣಿಕೆ ಕೇಂದ್ರಗಳಿವೆ.

ಈ ಐದು ರಾಜ್ಯಗಳಲ್ಲಿ ನಡೆಯಲಿರುವ ಮತಏಣಿಕೆ ಪ್ರಕ್ರಿಯೆಯ ಕಣ್ಗಾವಲಿಗಾಗಿ 650ಕ್ಕೂ ಅಧಿಕ ಚುನಾವಣಾ ವೀಕ್ಷಕರನ್ನು ನಿಯೋಜಿಸಲಾಗಿದೆ. ಕೋವಿಡ್ ಸಾಂಕ್ರಾಮಿಕದ ಹಾವಳಿಯ ಹಿನ್ನೆಲೆಯಲ್ಲಿ ಚುನಾವಣಾ ಆಯೋಗವು ಮತಏಣಿಕೆ ದಿನಾಂಕದಂದು ಪ್ರತ್ಯೇಕ ಕೋವಿಡ್-19 ಮಾರ್ಗದರ್ಶಿ ಸೂತ್ರಗಳನ್ನು ಜಾರಿಗೊಳಿಸಿದೆ.
 
ಉತ್ತರಪ್ರದೇಶದಲ್ಲಿ ಆದಿತ್ಯನಾಥ ನಾಥ್ ನೇತೃತ್ವದ ಬಿಜೆಪಿ ಸರಕಾರ ಹಾಗೂ ಅಖಿಲೇಶ್ ಯಾದವ್ ನೇತೃತ್ವದ ಸಮಾಜವಾದಿ ಪಕ್ಷದ ವಿರುದ್ಧ ಬಿರುಸಿನ ಸ್ಪರ್ಧೆ ಏರ್ಪಟ್ಟಿದೆ. ಆದಾಗ್ಯೂ ಬಹುತೇಕ ಚುನಾವಣೋತ್ತರ ಸಮೀಕ್ಷೆಗಳಲ್ಲಿ ಬಿಜೆಪಿ ಮರಳಿ ಅಧಿಕಾರದ ಗದ್ದುಗೆಯನ್ನು ಹಿಡಿಯುವ ಸೂಚನೆ ನೀಡಿದೆ. 

ಪಂಜಾಬ್‌ನಲ್ಲಿ ಆಡಳಿತಾರೂಢ ಕಾಂಗ್ರೆಸ್‌ಗೆ ಹಿನ್ನೆಡೆಯಾಗಲಿದ್ದು, ಅಲ್ಲಿ ಆಪ್ ಮೊದಲ ಬಾರಿಗೆ ಸರಳ ಬಹುಮತದೊಂದಿಗೆ ಅಧಿಕಾರದ ಗದ್ದುಗೆ ಹಿಡಿಯುವ ಸಾಧ್ಯತೆಯಿದೆ ಎಂದು ಸಮೀಕ್ಷೆಗಳು ತಿಳಿಸಿವೆ. ಮಣಿಪುರ ಹಾಗೂ ಉತ್ತರಾಖಂಡ ರಾಜ್ಯಗಳಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್ ನಡುವೆ ಜಿದ್ದಾಜಿದ್ದಿಯ ಸ್ಪರ್ಧೆ ಏರ್ಪಟ್ಟಿದೆ. 

40 ಸದಸ್ಯ ಬಲದ ಗೋವಾದಲ್ಲಿ ಕಾಂಗ್ರೆಸ್ ಹಾಗೂ ಬಿಜೆಪಿ ನಡುವೆ ನಿಕಟ ಸ್ಪರ್ಧೆಯಿದ್ದು, ಅತಂತ್ರ ವಿಧಾನಸಭೆ ನಿರ್ಮಾಣವಾಗುವ ಸಾಧ್ಯತೆಯಿದೆ ಎಂದು ಚುನಾವಣೋತ್ತರ ಸಮೀಕ್ಷೆಗಳು ತಿಳಿಸಿವೆ.ಆದರೆ ಆಮ್ ಆದ್ಮಿ ಪಕ್ಷ ಮತ್ತು ಪಕ್ಷೇತರರು ಸರಕಾರ ರಚನೆಯಲ್ಲಿ ಕಿಂಗ್‌ಮೇಕರ್ ಆಗುವ ನಿರೀಕ್ಷೆಯಿದೆ ಎಂದು ಸಮೀಕ್ಷೆಗಳು ತಿಳಿಸಿವೆ.

ಉ.ಪ್ರ.,ಪಂಜಾಬ್, ಮಣಿಪುರ,ಗೋವಾ, ಉತ್ತರಾಖಂಡ ಈ ಐದು ರಾಜ್ಯಗಳಿಗೆ ಫೆಬ್ರವರಿ, ಮಾರ್ಚ್ ತಿಂಗಳುಗಳಲ್ಲಿ ಒಟ್ಟು ಏಳು ಹಂತದಲ್ಲಿ ಮತದಾನ ನಡೆದಿತ್ತು.
/***/

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News