×
Ad

'ಬಿಜೆಪಿಯೇತರ ಮುಸ್ಲಿಂ ಮಹಿಳೆಯರʼ ಫೋಟೊಗಳನ್ನು ಹುಡುಕಿದ್ದ ಬುಲ್ಲಿಬಾಯ್‌ ಅಪ್ಲಿಕೇಶನ್‌ ನಿರ್ಮಾಪಕರು: ಚಾರ್ಜ್‌ಶೀಟ್‌

Update: 2022-03-10 23:37 IST

ಮುಂಬೈ: ಮುಸ್ಲಿಂ ಮಹಿಳೆಯರನ್ನು ಹರಾಜಿಗಿಟ್ಟು ಭಾರೀ ವಿವಾದ ಸೃಷ್ಟಿಸಿದ್ದ ʼಬುಲ್ಲೀ ಬಾಯ್‌ʼ ಅಪ್ಲಿಕೇಶನ್‌ ರಚಿಸಿದ ತಂಡದ ಮೇಲೆ ಮುಂಬೈ ಪೊಲೀಸರು ಚಾರ್ಜ್‌ ಶೀಟ್‌ ಸಲ್ಲಿಸಿದ್ದು, ಚಾರ್ಜ್‌ ಶೀಟ್‌ನಲ್ಲಿ ಒಟ್ಟಾರೆ 100 ಬಿಜಪಿಯೇತರ ಮುಸ್ಲಿಂ ಮಹಿಳೆಯರನ್ನು ಗುರಿ ಮಾಡಲು ಈ ತಂಡವು ಯೋಜನೆ ಹಾಕಿಕೊಂಡಿತ್ತು ಎಂದು ಹೇಳಲಾಗಿದೆ.

ಬುಲ್ಲಿ ಬಾಯ್‌ ಅಪ್ಲಿಕೇಶನ್‌ ಮೂಲಕ ಅಶ್ಲೀಲ ಕಮೆಂಟ್‌ಗಳೊಂದಿಗೆ ಮುಸ್ಲಿಂ ಮಹಿಳೆಯರ ಫೋಟೋಗಳನ್ನು ಬಳಸಿ ಅವರನ್ನು ಹರಾಜಿಗಿಟ್ಟಿರುವ ಆರೋಪದ ಮೇಲೆ ಈಗಾಗಲೇ ಆರು ಆರೋಪಿಗಳನ್ನು ಬಂಧಿಸಲಾಗಿದ್ದು, ಹರಾಜಿಗಿಡಲು ಬಿಜೆಪಿಯೇತರ 100 ಪ್ರಸಿದ್ಧ ಭಾರತೀಯ ಮುಸ್ಲಿಂ ಮಹಿಳೆಯರ ಫೋಟೋಗಳನ್ನು ಅವರು ಹುಡುಕಿದ್ದರು ಎಂದು ಚಾರ್ಜ್‌ ಶೀಟ್‌ನಲ್ಲಿ ಆರೋಪಿಸಲಾಗಿದೆ ಎಂದು indianexpress ವರದಿ ಮಾಡಿದೆ.

 ಜನವರಿ 1 ರಂದು ಮಹಿಳೆಯೊಬ್ಬರು ಆನ್‌ಲೈನ್ ಪೋರ್ಟಲ್‌ನಲ್ಲಿ ತನ್ನನ್ನು ಹಾಗೂ ಇತರ ಮುಸ್ಲಿಂ ಮಹಿಳೆಯರ ಫೋಟೋಗಳನ್ನು ಅಶ್ಲೀಲ ಕಮೆಂಟ್‌ಗಳೊಂದಿಗೆ ಹರಾಜಿಗಿಡಲಾದ ಬಗ್ಗೆ ದೂರು ನೀಡಿದ್ದರು. ನಂತರ ಜನವರಿಯಲ್ಲಿ ಆರು ವ್ಯಕ್ತಿಗಳ ಬಂಧನವಾಗಿದ್ದು, ಅವರ ವಿರುದ್ಧ ಈ ತಿಂಗಳ ಆರಂಭದಲ್ಲಿ ಚಾರ್ಜ್‌ಶೀಟ್ ಸಲ್ಲಿಸಲಾಗಿತ್ತು.

ಆರೋಪಿ ನೀರಜ್ ಬಿಷ್ಣೋಯ್ (20) ಯದ್ದು ಎಂದು ಹೇಳಿಕೊಳ್ಳಲಾದ ಹ್ಯಾಂಡಲ್‌ನಿಂದ ಸಹ-ಆರೋಪಿ ನೀರಜ್ ಸಿಂಗ್ (28) ರೊಂದಿಗೆ "ಏನಾದರೂ ದೊಡ್ಡದನ್ನು ಮಾಡಲು" ಚರ್ಚಿಸಿದ್ದಾರೆ ಎಂದು ಚಾರ್ಜ್‌ಶೀಟ್‌ ಹೇಳಿದೆ. ಆ್ಯಪ್‌ಗಾಗಿ ಬಿಷ್ಣೋಯ್ 100 ಪ್ರಸಿದ್ಧ ಭಾರತೀಯ ಬಿಜೆಪಿಯೇತರ ಮುಸ್ಲಿಂ ಮಹಿಳೆಯರ ಫೋಟೋಗಳನ್ನು ಹುಡುಕಿದ್ದಾರೆ ಎಂದು ಎಂದು ಪೊಲೀಸರ ಚಾರ್ಜ್‌ಶೀಟ್ ಆರೋಪಿಸಿದೆ.

"ತಂಡದ ಕೆಲವು ಸದಸ್ಯರು ನಂತರ ಮುಸ್ಲಿಂ ಮಹಿಳೆಯರ ಟ್ವಿಟರ್ ಹ್ಯಾಂಡಲ್‌ಗಳ ಲಿಂಕ್‌ಗಳು ಮತ್ತು ಸ್ಕ್ರೀನ್‌ಶಾಟ್‌ಗಳನ್ನು ಕಳುಹಿಸಿದ್ದಾರೆ. ಕೆಲವು ದಿನಗಳ ನಂತರ, ಬಿಷ್ಣೋಯ್ ಹರಾಜಿಗೆ ಅಪ್ಲಿಕೇಶನ್‌ನ ಮೂಲ ಕೋಡ್ ಸಿದ್ಧವಾಗಿದೆ, ಅದನ್ನು ಕ್ರ್ಯಾಕ್ ಮಾಡಲು ಅಥವಾ ನಕಲು ಮಾಡಲು ಸಾಧ್ಯವಿಲ್ಲ ಎಂದು ಹೇಳಿದರು. ಅಲ್ಲದೇ 50 ಬಿಜೆಪಿಯೇತರ ಮುಸ್ಲಿಂ ಮಹಿಳೆಯರ ಫೋಟೋಗಳು ಪತ್ತೆಯಾಗಿವೆ, ಇನ್ನೂ 50 ಫೋಟೋಗಳು ಅಥವಾ ಸ್ಕ್ರೀನ್‌ಶಾಟ್‌ಗಳನ್ನು ಹುಡುಕಬೇಕು,” ಎಂದು ಆತ ಗುಂಪಿನೊಂದಿಗೆ ಚರ್ಚಿಸಿರುವುದಾಗಿ ಚಾರ್ಜ್‌ಶೀಟ್‌ನಲ್ಲಿ ಉಲ್ಲೇಖಿಸಲಾಗಿದೆ.

ಕಳೆದ ತಿಂಗಳಿನಲ್ಲಿ ʼಬುಲ್ಲೀ ಬಾಯ್‌ʼ ಅಪ್ಲಿಕೇಶನ್‌ ಪ್ರಕರಣವು ಬೆಳಕಿಗೆ ಬಂದಿದ್ದ, ಬಿಜೆಪಿ ಸಿದ್ಧಾಂತಗಳನ್ನು ಟೀಕಿಸುತ್ತಿದ್ದ ಹಲವು ಮುಸ್ಲಿಂ ಮಹಿಳೆಯರ ಫೋಟೋಗಳನ್ನು ಅಕ್ರಮವಾಗಿ ಸಂಗ್ರಹಿಸಿ ಆನ್‌ಲೈನ್‌ನಲ್ಲಿ ಅವರನ್ನು ಬಿಕರಿಗಿಟ್ಟಿದ್ದರು. ಬಂಧನಕ್ಕೊಳಗಾದ ಆರೋಪಿಗಳಲ್ಲಿ ಯುವತಿಯೂ ಇರುವುದು ಸಾಕಷ್ಟು ಚರ್ಚೆಗೆ ಗ್ರಾಸವಾಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News