×
Ad

ಬಿಜೆಪಿ ಗೆಲುವಿಗೆ ಕೊಡುಗೆ ನೀಡಿರುವ ಮಾಯಾವತಿ, ಉವೈಸಿಗೆ ಪದ್ಮವಿಭೂಷಣ, ಭಾರತರತ್ನ ನೀಡಬೇಕು: ಶಿವಸೇನೆ

Update: 2022-03-11 11:58 IST

ಹೊಸದಿಲ್ಲಿ: ಉತ್ತರ ಪ್ರದೇಶದಲ್ಲಿ ಬಿಜೆಪಿಯ ದಾಖಲೆಯ ಗೆಲುವಿನ ಮರುದಿನ  ಪ್ರತಿಕ್ರಿಯಿಸಿರುವ  ಶಿವಸೇನೆ ನಾಯಕ ಹಾಗೂ  ಸಂಸದ ಸಂಜಯ್ ರಾವತ್ ಅವರು ಬಹುಜನ ಸಮಾಜ ಪಕ್ಷದ (ಬಿಎಸ್ಪಿ) ಅಧಿನಾಯಕಿ ಮಾಯಾವತಿ ಹಾಗೂ  ಎಐಎಂಐಎಂ ಮುಖ್ಯಸ್ಥ ಅಸದುದ್ದೀನ್ ಉವೈಸಿ ವಿರುದ್ಧ ವಾಗ್ದಾಳಿ ನಡೆಸಿದರು.  ಬಿಜೆಪಿಯ ಗೆಲುವಿನಲ್ಲಿ ಈ ಇಬ್ಬರ  ಕೊಡುಗೆಗಾಗಿ ಅವರಿಗೆ ಪದ್ಮವಿಭೂಷಣ ಅಥವಾ ಭಾರತ ರತ್ನ ನೀಡಬೇಕೆಂದು ಹೇಳಿದರು.

"ಬಿಜೆಪಿ ಅದ್ಭುತ ವಿಜಯವನ್ನು ಸಾಧಿಸಿದೆ. ಉತ್ತರಪ್ರದೇಶ ಅವರ ಆಡಳಿತವಿದ್ದ ರಾಜ್ಯವಾಗಿತ್ತು,  ಅಖಿಲೇಶ್ ಯಾದವ್ ಅವರ ಸ್ಥಾನಗಳು 42 ರಿಂದ 125 ಕ್ಕೆ ಏರಿದ್ದು,  3 ಪಟ್ಟು ಹೆಚ್ಚಾಗಿದೆ. ಮಾಯಾವತಿ ಮತ್ತು ಉವೈಸಿ ಬಿಜೆಪಿಯ ಗೆಲುವಿಗೆ ಕೊಡುಗೆ ನೀಡಿದ್ದಾರೆ. ಆದ್ದರಿಂದ ಅವರಿಗೆ ಪದ್ಮವಿಭೂಷಣ, ಭಾರತ ರತ್ನ ನೀಡಬೇಕು’’ ಎಂದು ರಾವತ್  ಹೇಳಿಕೆಯನ್ನು ಉಲ್ಲೇಖಿಸಿ  ಸುದ್ದಿ ಸಂಸ್ಥೆ ANI ವರದಿ ಮಾಡಿದೆ.

ನಾಲ್ಕು ರಾಜ್ಯಗಳಲ್ಲಿ ಬಿಜೆಪಿ ಗೆಲುವು ಸಾಧಿಸಿದ್ದರೂ ಉತ್ತರಾಖಂಡದಲ್ಲಿ ಅದರ ಮುಖ್ಯಮಂತ್ರಿ ಸೋತರು.  ಗೋವಾದಲ್ಲಿ ಇಬ್ಬರು ಉಪಮುಖ್ಯಮಂತ್ರಿಗಳು ಸೋಲನ್ನು ಎದುರಿಸಿದರು ಹಾಗೂ  ಪಂಜಾಬ್‌ನಲ್ಲಿ ಪಕ್ಷವನ್ನು "ಸಂಪೂರ್ಣವಾಗಿ ತಿರಸ್ಕರಿಸಲಾಗಿದೆ" ಎಂದು ರಾವತ್  ವಿಶ್ಲೇಷಿಸಿದ್ದಾರೆ.

"ಪ್ರಧಾನಿ, ಗೃಹ ಸಚಿವರು, ರಕ್ಷಣಾ ಸಚಿವರು, ಎಲ್ಲರೂ ಪಂಜಾಬ್‌ನಲ್ಲಿ ಭರ್ಜರಿ ಪ್ರಚಾರ ಮಾಡಿದ್ದಾರೆ, ಹಾಗಾದರೆ ನೀವು ಪಂಜಾಬ್‌ನಲ್ಲಿ ಏಕೆ ಸೋತಿದ್ದೀರಿ? ಉತ್ತರಪ್ರದೇಶ, ಉತ್ತರಾಖಂಡ, ಗೋವಾ ಈಗಾಗಲೇ ನಿಮ್ಮದಾಗಿದ್ದವು, ಅದು ಸರಿ. ಆದರೆ, ಯುಪಿಯಲ್ಲಿ ಶಿವಸೇನೆ , ಕಾಂಗ್ರೆಸ್‌ ಸೋಲಿಗೆ ಹೋಲಿಸಿದರೆ ನೀವು ಪಂಜಾಬ್‌ನಲ್ಲಿ ಹೆಚ್ಚು ಸೋತಿದ್ದೀರಿ " ಎಂದು ಶಿವಸೇನ ಸಂಸದರು ಹೇಳಿದ್ದಾರೆ.

ಬಿಎಸ್‌ಪಿ ಮತ್ತು ಎಐಎಂಐಎಂ ಬಿಜೆಪಿ ವಿರೋಧಿ ಮತಗಳನ್ನು ವಿಭಜಿಸಲು ಚುನಾವಣೆಯಲ್ಲಿ ಸ್ಪರ್ಧಿಸುವ ಬಿಜೆಪಿಯ "ಬಿ" ತಂಡಗಳು ಎಂದು ವಿರೋಧ ಪಕ್ಷದ ಅನೇಕರು ಆರೋಪಿಸಿದ್ದಾರೆ.

ಇಂತಹ ಆರೋಪಗಳನ್ನು ಎರಡೂ ಪಕ್ಷಗಳು ಪದೇ ಪದೇ ನಿರಾಕರಿಸಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News