ಬಿಎಸ್ಪಿ ಸೋಲಿಗೆ ಮಾಧ್ಯಮಗಳು, ಸಮಾಜವಾದಿ ಪಕ್ಷವನ್ನು ದೂಷಿಸಿದ ಮಾಯಾವತಿ

Update: 2022-03-11 10:13 GMT

ಲಕ್ನೊ: ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಯಲ್ಲಿ 403 ಸ್ಥಾನಗಳಲ್ಲಿಕೇವಲ  1 ಸ್ಥಾನವನ್ನು ಮಾತ್ರ ಗೆದ್ದ ಬಹುಜನ ಸಮಾಜ ಪಕ್ಷ (ಬಿಎಸ್‌ಪಿ) ಕಳಪೆ ಸಾಧನೆಗೆ  ಶುಕ್ರವಾರ ಪ್ರತಿಕ್ರಿಯಿಸಿದ  ಬಿಎಸ್‌ಪಿ ಮುಖ್ಯಸ್ಥೆ ಮಾಯಾವತಿ ತನ್ನ  ಪಕ್ಷದ ಸೋಲಿಗೆ ಮಾಧ್ಯಮಗಳು ಹಾಗೂ  ಸಮಾಜವಾದಿ ಪಕ್ಷ (ಎಸ್‌ಪಿ) ಕಾರಣ ಎಂದು ಆರೋಪಿಸಿದ್ದಾರೆ.

ಪಕ್ಷದ ಕಾರ್ಯಕರ್ತರ ಚೈತನ್ಯವನ್ನು ಮೇಲೆತ್ತಲು ಪ್ರಯತ್ನಿಸುತ್ತಿರುವಾಗ ತನ್ನ ಪಕ್ಷವನ್ನು  ಬಿಜೆಪಿಯ "ಬಿ ಟೀಮ್" ಎಂದು ಭಾವಿಸುವಂತೆ ಬಿಂಬಿಸಿ ಮಾಧ್ಯಮಗಳು ಮತ್ತು ರಾಜಕೀಯ ಪ್ರತಿಸ್ಪರ್ಧಿ ಎಸ್‌ಪಿ ಜನರನ್ನು ದಾರಿ ತಪ್ಪಿಸಿದವು ಎಂದು  ಅವರು ದೂಷಿಸಿದರು.

 2007ರಲ್ಲಿ ಉತ್ತರ ಪ್ರದೇಶದಲ್ಲಿ ಪೂರ್ಣ ಬಹುಮತದ ಸರಕಾರ ರಚಿಸಿದ್ದ ಬಿಎಸ್‌ಪಿ ಈ ಬಾರಿ ಶೇ.12.88ರಷ್ಟು ಮತಗಳಿಕೆಯೊಂದಿಗೆ ಕೇವಲ ಒಂದು ಸ್ಥಾನವನ್ನು ಗೆಲ್ಲುವಲ್ಲಿ ಯಶಸ್ವಿಯಾಗಿದೆ.

"ನಾವು ಇಡೀ ರಾಜ್ಯದಿಂದ ಪ್ರತಿಕ್ರಿಯೆಯನ್ನು ಸಂಗ್ರಹಿಸಿದ್ದೇವೆ. ಜಾತಿವಾದಿ ಮಾಧ್ಯಮಗಳು, ಅಸಹ್ಯ ತಂತ್ರಗಳು, ಮುಸ್ಲಿಮರು ಹಾಗೂ  ಬಿಜೆಪಿ ವಿರೋಧಿ ಹಿಂದೂಗಳನ್ನು ದಾರಿ ತಪ್ಪಿಸುವ ನಿರಂತರ ಋಣಾತ್ಮಕ ಪ್ರಚಾರಗಳು ಹೆಚ್ಚಿನ ಪ್ರಮಾಣದಲ್ಲಿ ಯಶಸ್ವಿಯಾಗಿದೆ. ಅವರು ಬಿಎಸ್ಪಿ ಬಿಜೆಪಿಯ ಬಿ-ಟೀಮ್ ಎಂಬ ಗ್ರಹಿಕೆಯನ್ನು ಸೃಷ್ಟಿಸಿದರು. ಬಿಜೆಪಿ ವಿರುದ್ಧ  ಎಸ್‌ಪಿಯಷ್ಟು ಹುರುಪಿನಿಂದ ನಾವು ಹೋರಾಡುತ್ತಿಲ್ಲ ಎಂದು ಹೇಳಲಾಗಿತ್ತು. ಸತ್ಯವು ಸಂಪೂರ್ಣವಾಗಿ ವಿರುದ್ಧವಾಗಿದೆ" ಎಂದು ಅವರು ಹೇಳಿದರು.

ಬಿಜೆಪಿ ವಿರುದ್ಧದ ಬಿಎಸ್‌ಪಿಯ ಹೋರಾಟವು ಕೇವಲ ರಾಜಕೀಯ ಮಾತ್ರವಲ್ಲ, ಸೈದ್ಧಾಂತಿಕ ಮತ್ತು ತಾತ್ವಿಕವೂ ಆಗಿದೆ ಎಂದು ಮಾಜಿ ಮುಖ್ಯಮಂತ್ರಿ ಮಾಯಾವತಿ ಪ್ರತಿಪಾದಿಸಿದರು.

"ಮಾಧ್ಯಮಗಳ ನಿರಂತರ ಅಪಪ್ರಚಾರ ಮತ್ತು ಬಿಜೆಪಿಯ ಆಕ್ರಮಣಕಾರಿ ಮುಸ್ಲಿಂ ವಿರೋಧಿ ಚುನಾವಣಾ ಪ್ರಚಾರವು ಮುಸ್ಲಿಂ ಸಮುದಾಯವನ್ನು ಎಸ್‌ಪಿಗೆ ಮತ ಹಾಕುವಂತೆ ಮಾಡಿದೆ. ಬಿಜೆಪಿಯನ್ನು ವಿರೋಧಿಸುವ ಹಿಂದೂಗಳು ಸಹ ಈ ಕಾರಣದಿಂದಾಗಿ ಬಿಎಸ್‌ಪಿಗೆ ಬರಲಿಲ್ಲ" ಎಂದು ಅವರು ಹೇಳಿದರು.

ಸಮಾಜವಾದಿ ಪಕ್ಷದ ಜಂಗಲ್ ರಾಜ್ ಮರುಕಳಿಸುವ ಭಯದಿಂದ ದಲಿತರು ಕೂಡ ಬಿಜೆಪಿಗೆ ಮತ ಹಾಕಿದ್ದಾರೆ ಎಂದ ಮಾಯಾವತಿ, “ಮೇಲ್ಜಾತಿ ಹಿಂದೂಗಳು ಹಾಗೂ  ಹಲವಾರು ಒಬಿಸಿ ಸಮುದಾಯಗಳಿಗೆ ಸೇರಿದ ಬಿಎಸ್‌ಪಿ ಬೆಂಬಲಿಗರಿಗೆ ಎಸ್‌ಪಿ ಮತ್ತೆ ಅಧಿಕಾರಕ್ಕೆ ಬಂದರೆ ರಾಜ್ಯವು ಹಿಂದಿನ ಜಂಗಲ್ ರಾಜ್ ಹಾಗೂ  ಗೂಂಡಾ ರಾಜ್‌ಗೆ ಮರಳುತ್ತದೆ ಎಂಬ ಭಯ  ಇತ್ತು. ಹೀಗಾಗಿ ಅವರು ಮುಂದೆ ಹೋಗಿ ಬಿಜೆಪಿಗೆ ಮತ ಹಾಕಿದ್ದಾರೆ' ಎಂದು ಮಾಯಾವತಿ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News