ಉ.ಪ್ರ. ಚುನಾವಣೆಯಲ್ಲಿ ಹಿನ್ನಡೆ: ಆತ್ಮಹತ್ಯೆಗೆ ಯತ್ನಿಸಿದ ಸಮಾಜವಾದಿ ಪಕ್ಷದ ಮುಖಂಡ
ಲಕ್ನೋ: ಸಮಾಜವಾದಿ ಪಕ್ಷದ ಕಾನ್ಪುರದ ಉಪಾಧ್ಯಕ್ಷ ನರೇಂದ್ರ ಸಿಂಗ್ ಅಲಿಯಾಸ್ 'ಪಿಂಟು' (55) ಅವರು ಉತ್ತರ ಪ್ರದೇಶ ವಿಧಾನಸಭೆ ಚುನಾವಣೆಯಲ್ಲಿ ಭಾರತೀಯ ಜನತಾ ಪಕ್ಷದ ವಿರುದ್ಧ ಸೋತ ನಂತರ ಗುರುವಾರ ಲಕ್ನೋದ ವಿಧಾನ ಭವನದ ಹೊರಗೆ ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದಾರೆ ಎಂದು indianexpress.com ವರದಿ ಮಾಡಿದೆ.
ವಿದ್ಯುನ್ಮಾನ ಮತಯಂತ್ರಗಳ (ಇವಿಎಂ) ಅಕ್ರಮಗಳಿಂದಾಗಿ ರಾಜ್ಯ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ವಿರುದ್ಧ ಪಕ್ಷವು ಸೋತಿದೆ ಎಂದು ನಂಬಿದ್ದ ನರೇಂದ್ರ ಸಿಂಗ್ ಈ ಕ್ರಮ ಕೈಗೊಂಡಿದ್ದಾರೆ ಎಂದು ಎಸ್‌ಪಿಯ ಕಾನ್ಪುರ ಜಿಲ್ಲಾಧ್ಯಕ್ಷ ಡಾ. ಇಮ್ರಾನ್ ಹೇಳಿದ್ದಾರೆ.
ಉದ್ಯಮಿ ನರೇಂದ್ರ ಸಿಂಗ್ ಗೆ ಶೇ.30ರಷ್ಟು ಸುಟ್ಟ ಗಾಯಗಳಾಗಿದ್ದು, ಸಿವಿಲ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಅವರ ಸ್ಥಿತಿ ಚಿಂತಾಜನಕವಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ.
ಹಜರತ್‌ಗಂಜ್ ಪೊಲೀಸ್ ಠಾಣೆಯ ಸ್ಟೇಷನ್ ಹೌಸ್ ಆಫೀಸರ್ ಶ್ಯಾಮ್ ಬಾಬು ಶುಕ್ಲಾ, ಸಿಂಗ್ ಅವರ ಕ್ರಮದ ಹಿಂದಿನ ನಿಖರವಾದ ಕಾರಣವನ್ನು ಇನ್ನಷ್ಟೇ ತಿಳಿಯಬೇಕಾಗಿದೆ ಎಂದು ಹೇಳಿದರು.
ಪೊಲೀಸರ ಪ್ರಕಾರ, ಗುರುವಾರ, ಸಿಂಗ್ ಕಾನ್ಪುರದಿಂದ ಲಕ್ನೋಗೆ ಆಗಮಿಸಿದ್ದರು. ಬಿಜೆಪಿ ಸತತ ಎರಡನೇ ಬಾರಿಗೆ ಚುನಾವಣೆಯಲ್ಲಿ ಗೆಲುವು ಸಾಧಿಸುತ್ತಿದೆ ಎಂಬ ಸುದ್ದಿ ಕೇಳಿದ ನಂತರ ಸಿಂಗ್ ಅವರು ಬಕೆಟ್‌ನಲ್ಲಿ ಪೆಟ್ರೋಲ್ ತುಂಬಿಕೊಂಡು ವಿಧಾನ ಭವನದ ಹೊರಗೆ ಬಂದು ತನ್ನ ಮೈಮೇಲೆ ಸುರಿದುಕೊಂಡು ಬೆಂಕಿ ಹಚ್ಚಿಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಸ್ವಲ್ಪ ದೂರದಲ್ಲಿ ನಿಂತಿದ್ದ ಪೊಲೀಸ್ ತಂಡವು ಈ ದೃಶ್ಯವನ್ನು ಕಂಡು ಓಡಿಹೋಗಿ ಬೆಂಕಿಯನ್ನು ನಂದಿಸಿ ಅವರನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ಸಾಗಿಸಿದರು ಎಂದು ಪೊಲೀಸರು ತಿಳಿಸಿದ್ದಾರೆ.