×
Ad

ಕಾಂಗ್ರೆಸ್‌ ಅಧ್ಯಕ್ಷರಾಗಿಯೇ ಮುಂದುವರಿಯಲಿರುವ ಸೋನಿಯಾ ಗಾಂಧಿ: ಸರ್ವಾನುಮತದ ತೀರ್ಮಾನ ಕೈಗೊಂಡ ಸಿಡಬ್ಲ್ಯೂಸಿ

Update: 2022-03-13 22:11 IST

ಹೊಸದಿಲ್ಲಿ: ರವಿವಾರ ನಾಲ್ಕೂವರೆ ಗಂಟೆಗಳ ಕಾಲ ನಡೆದ ಬೃಹತ್ ಸಭೆಯ ನಂತರ ಸೋನಿಯಾ ಗಾಂಧಿ ಕಾಂಗ್ರೆಸ್ ಅಧ್ಯಕ್ಷರಾಗಿ ಉಳಿಯಲಿದ್ದಾರೆ ಎಂದು ಪಕ್ಷ ತಿಳಿಸಿದೆ. ಇತ್ತೀಚೆಗಷ್ಟೇ ನಡೆದ ರಾಜ್ಯ ಚುನಾವಣೆಯಲ್ಲಿ ಹೀನಾಯ ಸೋಲು ಕಂಡಿರುವ ಹಿನ್ನೆಲೆಯಲ್ಲಿ ನಾಯಕತ್ವದಲ್ಲಿ ಬದಲಾವಣೆಗೆ ಕೂಗು ಕೇಳಿ ಬಂದ ನಡುವೆಯೇ ಕಾಂಗ್ರೆಸ್‌ ಈ ಸಭೆ ನಡೆಸಿದ್ದು, ಸಭೆಯಲ್ಲಿ 50 ಕ್ಕೂ ಹೆಚ್ಚು ನಾಯಕರು ಭಾಗವಹಿಸಿದ್ದರು.   

ಕಾರ್ಯಕಾರಿ ಸಮಿತಿಯ ಸಭೆ (CWC) ಯಲ್ಲಿ ಮಾತನಾಡಿದ ಸೋನಿಯಾ ಗಾಂಧಿ, ಪಕ್ಷ ಬಯಸಿದರೆ ಕಾಂಗ್ರೆಸ್ ಹುದ್ದೆಗಳಿಗೆ ರಾಜೀನಾಮೆ ನೀಡಲು ಗಾಂಧಿಗಳು ಸಿದ್ಧರಿದ್ದಾರೆ ಎಂದು ಹೇಳಿದ್ದಾರೆ, ಆದರೆ CWC ಸೋನಿಯಾ ಗಾಂಧಿ ಅವರಿಂದ ರಾಜಿನಾಮೆ ಪಡೆಯಲು ನಿರಾಕರಿಸಿತು ಎಂದು ಸಭೆಯ ಬಳಿಕ ಪಕ್ಷದ ಮೂಲಗಳು ತಿಳಿಸಿದೆ.

" CWC ಯು ಸೋನಿಯಾ ಗಾಂಧಿಯವರ ನಾಯಕತ್ವದಲ್ಲಿ ತನ್ನ ನಂಬಿಕೆಯನ್ನು ಸರ್ವಾನುಮತದಿಂದ ಪುನರುಚ್ಚರಿಸುತ್ತದೆ ಹಾಗೂ ಕಾಂಗ್ರೆಸ್ ಅಧ್ಯಕ್ಷರನ್ನು ಪಕ್ಷವನ್ನು ಮುನ್ನಡೆಸಲು ಮನವಿ ಮಾಡುತ್ತದೆ." ಎಂದು ಕಾಂಗ್ರೆಸ್ ಹೇಳಿಕೆ ತಿಳಿಸಿದೆ.

ಸಂಸತ್ತಿನ ಬಜೆಟ್ ಅಧಿವೇಶನ ಮುಗಿದ ನಂತರ ಸಾಂಸ್ಥಿಕ ಚುನಾವಣೆಗಳ ಮೇಲೆ ಕೇಂದ್ರೀಕರಿಸಲು "ಚಿಂತನ್ ಶಿವರ್"  ನಡೆಸುವುದಾಗಿ ಪಕ್ಷ ಹೇಳಿದೆ.

ಪಂಚರಾಜ್ಯ ಚುನಾವಣೆಗಳಲ್ಲಿ ಕಾಂಗ್ರೆಸ್ ಸೋಲಿನ ಪ್ರಮಾಣವು ಸಂಘಟನಾತ್ಮ ಬದಲಾವಣೆಗಳು ಮತ್ತು ಜವಾಬ್ದಾರಿಯುತ ನಾಯಕತ್ವಕ್ಕಾಗಿ ಹೊಸ ಬೇಡಿಕೆಗಳನ್ನು ಹುಟ್ಟುಹಾಕಿತ್ತು.  ಎರಡು ವರ್ಷಗಳ ಹಿಂದೆ 23 ಭಿನ್ನಮತೀಯರ ಗುಂಪು ಇದೇ ಬೇಡಿಕೆಯನ್ನಿಟ್ಟು ಸೋನಿಯಾ ಗಾಂಧಿಗೆ ಪತ್ರವನ್ನು ಬರೆದಿದ್ದರು.

 ಈ ಭಿನ್ನಮತೀಯರ ಗುಂಪನ್ನು  "G-23" ಎಂದು ಕರೆಯಲಾಗುತ್ತಿದ್ದು, CWC ನಲ್ಲಿ G-23 ಯ ಮೂವರು ಸದಸ್ಯರಾದ ಆನಂದ್ ಶರ್ಮಾ, ಗುಲಾಂ ನಬಿ ಆಜಾದ್ ಮತ್ತು ಮುಕುಲ್ ವಾಸ್ನಿಕ್ ಸೇರಿದ್ದಾರೆ. ಅವರಲ್ಲದೆ, ಮಲ್ಲಿಕಾರ್ಜುನ್‌ ಖರ್ಗೆ, ಪ್ರಿಯಾಂಕ ಗಾಂಧಿ ವಾದ್ರಾ ಹಾಗೂ ರಾಹುಲ್‌ ಗಾಂಧಿ ಕೂಡಾ ಸಭೆಯಲ್ಲಿ ಭಾಗವಹಿಸಿದ್ದರು. ಸಭೆಯಲ್ಲಿ ಶರ್ಮಾ ಮತ್ತು ಗುಲಾಂ ನಬಿ ಆಜಾದ್ ಬಹಿರಂಗವಾಗಿ ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಸಭೆಯ ಮೊದಲು, ಗಾಂಧಿಯವರು ಅಧಿಕೃತ ಹುದ್ದೆಗಳಿಂದ ಕೆಳಗಿಳಿಯುತ್ತಾರೆ ಎಂಬ ಊಹಾಪೋಹವನ್ನು ಕಾಂಗ್ರೆಸ್ ನಿರಾಕರಿಸಿತ್ತು.

ಈ ನಡುವೆ ಹಲವಾರು ನಾಯಕರು ರಾಹುಲ್ ಗಾಂಧಿಗೆ ಬೆಂಬಲ ನೀಡಿ ಟ್ವೀಟ್ ಕೂಡಾ ಮಾಡಿದ್ದರು. ರಾಜಸ್ಥಾನ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಹೇಳಿದ್ದರು. "ಕಳೆದ ಮೂರು ದಶಕಗಳಿಂದ ಗಾಂಧಿ ಕುಟುಂಬದಿಂದ ಯಾರೂ ಪ್ರಧಾನಿ ಅಥವಾ ಮಂತ್ರಿಯಾಗಲಿಲ್ಲ. ಕಾಂಗ್ರೆಸ್‌ನ ಒಗ್ಗಟ್ಟಿಗೆ ಗಾಂಧಿ ಕುಟುಂಬ ಮುಖ್ಯವಾಗಿದೆ ಎಂಬುದನ್ನು ಅರ್ಥಮಾಡಿಕೊಳ್ಳುವುದು ಗಮನಾರ್ಹವಾಗಿದೆ" ಎಂದು ಅವರು ಸುದ್ದಿ ಸಂಸ್ಥೆ ANI ಗೆ ತಿಳಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News