ನೀರು ಮತ್ತು ವಿದ್ಯುತ್ ಪೂರೈಕೆ ನಿಲ್ಲಿಸುವುದಾಗಿ ಸೇನೆಗೆ ತೆಲಂಗಾಣ ಸಚಿವ ಕೆಟಿಆರ್ ಎಚ್ಚರಿಕೆ

Update: 2022-03-13 18:17 GMT
photo pti

ಹೈದರಾಬಾದ್,ಮಾ.13: ಮಿಲಿಟರಿ ಅಧಿಕಾರಿಗಳು ವಿನಾಕಾರಣ ರಸ್ತೆಗಳನ್ನು ಮುಚ್ಚುವ ಮೂಲಕ ದಂಡುಪ್ರದೇಶಗಳ ಬಳಿಯ ನಿವಾಸಿಗಳಿಗೆ ತೊಂದರೆಗಳನ್ನುಂಟು ಮಾಡುತ್ತಿದ್ದಾರೆ ಎಂದು ಆರೋಪಿಸಿರುವ ತೆಲಂಗಾಣದ ಪೌರಾಡಳಿತ ಮತ್ತು ನಗರಾಭಿವೃದ್ಧಿ ಸಚಿವ ಕೆ.ಟಿ.ರಾಮರಾವ್ ಅವರು,ರಾಜ್ಯ ಸರಕಾರವು ದಂಡು ಪ್ರದೇಶಗಳಿಗೆ ನೀರು ಮತ್ತು ವಿದ್ಯುತ್ ಪೂರೈಕೆಯನ್ನು ನಿಲ್ಲಿಸಲಿದೆ ಎಂದು ಎಚ್ಚರಿಕೆ ನೀಡಿದ್ದಾರೆ.


ನಾಲೆಯೊಂದರ ಮೇಲೆ ಚೆಕ್ಡ್ಯಾಂ ನಿರ್ಮಿಸುವ ಸೇನಾಧಿಕಾರಿಗಳ ನಿರ್ಧಾರದಿಂದಲೂ ನಿವಾಸಿಗಳು ಕಳವಳಗೊಂಡಿದ್ದಾರೆ ಎಂದು ಅವರು ತಿಳಿಸಿದ್ದಾರೆ. ಶನಿವಾರ ರಾಜ್ಯ ವಿಧಾನಸಭೆಯ ಪ್ರಶ್ನೆವೇಳೆಯಲ್ಲಿ ಹೈದರಾಬಾದ್ ನಗರದಲ್ಲಿ ನಾಲೆ ಅಭಿವೃದ್ಧಿ ಕಾರ್ಯಕ್ರಮದ ಕುರಿತು ಮಾತನಾಡುತ್ತಿದ್ದ ಅವರು,‘ಅಗತ್ಯವಾದರೆ ಕಠಿಣ ಕ್ರಮಕ್ಕೂ ಸರಕಾರವು ಸಿದ್ಧವಿದೆ. ಅವರು (ಸೇನೆ) ಅರ್ಥ ಮಾಡಿಕೊಳ್ಳದಿದ್ದರೆ ನಾವು ಏನಾದರೂ ಮಾಡಬೇಕಾಗುತ್ತದೆ. ಅಗತ್ಯವಾದರೆ ನಾವು ಅಲ್ಲಿಗೆ ನೀರು ಮತ್ತು ವಿದ್ಯುತ್ ಪೂರೈಕೆಯನ್ನು ನಿಲ್ಲಿಸುತ್ತೇವೆ. ಆಗ ಅವರು ಏನು ಮಾಡುತ್ತಾರೆ ಎಂದು ನಾವು ನೋಡುತ್ತೇವೆ ’ಎಂದರು. ಶಾಂತಿಯುತ ಸಹಬಾಳ್ವೆ ಇರಬೇಕು. ರಸ್ತೆಗಳ ಮುಚ್ಚುಗಡೆ ಮತ್ತು ಚೆಕ್ಡ್ಯಾಂ ನಿರ್ಮಾಣ ಕುರಿತು ಸರಕಾರವು ಸುಮ್ಮನಿರಲು ಸಾಧ್ಯವಿಲ್ಲ ಎಂದೂ ಅವರು ಹೇಳಿದರು.

ಈ ವಿಷಯದ ಕುರಿತು ಮಿಲಿಟರಿ ಅಧಿಕಾರಿಗಳೊಂದಿಗೆ ಮಾತನಾಡುವಂತೆ ಮತ್ತು ಕಠಿಣ ಕ್ರಮವನ್ನು ಕೈಗೊಳ್ಳಲು ಹಿಂಜರಿಯದಂತೆ ರಾವ್ ಅಧಿಕಾರಿಗಳಿಗೆ ನಿರ್ದೇಶ ನೀಡಿದರು.
ಹೈದರಾಬಾದ್ನಲ್ಲಿ ಮಳೆನೀರಿನ ಒಳಚರಂಡಿ ವ್ಯವಸ್ಥೆಯ ಸುಧಾರಣೆಗಾಗಿ ತೆಲಂಗಾಣ ಸರಕಾರದ ಯೋಜನೆಗಾಗಿ ಯಾವುದೇ ಹಣಕಾಸು ನೆರವು ಒದಗಿಸದ್ದಕ್ಕಾಗಿ ಕೇಂದ್ರದ ವಿರುದ್ಧವೂ ದಾಳಿ ನಡೆಸಿದ ರಾವ್,ಗುಜರಾತಿನಲ್ಲಿ ನೆರೆ ಸಂಭವಿಸಿದ್ದಾಗ ಸ್ವತಃ ಪ್ರಧಾನಿಯವರೇ ಅಲ್ಲಿಗೆ ತೆರಳಿ 1,000 ಕೋ.ರೂ.ಗಳ ನೆರವನ್ನು ನೀಡಿದ್ದರು. ಆದರೆ ನೆರೆ ಸಹಾಯಕ್ಕಾಗಿ ಹೈದರಾಬಾದ್ಗೆ ಒಂದು ಪೈಸೆಯನ್ನೂ ನೀಡಿಲ್ಲ ಎಂದರು.
 
ರಾವ್ ಹೇಳಿಕೆಗೆ ಪ್ರತಿಕ್ರಿಯಿಸಿದ ಬಿಜೆಪಿ ವಕ್ತಾರ ಎನ್.ವಿ.ಸುಭಾಷ್ ಅವರು,‘ಸುಶಿಕ್ಷಿತ ಸಚಿವ ಕೆಟಿಆರ್ ಹೇಳಿಕೆ ನಿಜಕ್ಕೂ ಆಘಾತವನ್ನುಂಟು ಮಾಡಿದೆ. ಅವರಿಗೆ ಭಾರತೀಯ ಸೇನೆಯ ಬಗ್ಗೆ ಗೌರವ ಸಹ ಇಲ್ಲ. ಇದು ನಮ್ಮ ಸೇನೆಯನ್ನು ತೆಲಂಗಾಣ ಸರಕಾರವು ಹೇಗೆ ನೋಡುತ್ತಿದೆ ಎನ್ನುವುದನ್ನು ತೋರಿಸುತ್ತಿದೆ ’ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News