‘ಶಾಲೆ ತೊರೆ, ಮನೆಗೆ ನಡೆ’ : ಸರಕಾರದ ಹೊಸ ಯೋಜನೆ?
ಉಡುಪಿಯ ಸ್ಥಳೀಯ ಶಿಕ್ಷಣ ಸಂಸ್ಥೆಯೊಂದರಲ್ಲಿ ಸಮವಸ್ತ್ರ ವಿವಾದವಾದುದು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವರ ಅಧಿಕೃತ ಆದೇಶದ ಬಳಿಕ. ಈ ಮೂಲಕ ವಿವಾದವನ್ನು ರಾಜ್ಯದ ಎಲ್ಲ ಶಾಲೆಗಳಿಗೆ ವಿಸ್ತರಿಸಿದ ಹೆಗ್ಗಳಿಕೆ ನಮ್ಮ ಶಿಕ್ಷಣ ಸಚಿವರಿಗೆ ಸೇರಬೇಕು. ಬಳಿಕ ಅನಿವಾರ್ಯವಾಗಿ ವಿದ್ಯಾರ್ಥಿಗಳು ಸರಕಾರದ ಆದೇಶದ ವಿರುದ್ಧ ನ್ಯಾಯಾಲಯಕ್ಕೆ ತೆರಳಬೇಕಾಯಿತು. ನಮ್ಮ ನ್ಯಾಯಾಲಯವೋ ಶಿಕ್ಷಣದ ಬಗ್ಗೆ ‘ಭಯಂಕರ ಕಾಳಜಿ’ಯನ್ನು ವ್ಯಕ್ತಪಡಿಸಿತು. ಅದು ತೀರ್ಪನ್ನು ಘೋಷಿಸಿ, ಬಳಿಕ ವಿಚಾರಣೆಗೆ ಶುರು ಹಚ್ಚಿತು. ಸಂತ್ರಸ್ತರು ‘ನಮ್ಮನ್ನು ಧಿರಿಸಿನ ಕಾರಣಕ್ಕಾಗಿ ಶಿಕ್ಷಣದಿಂದ ಹೊರಗೆ ಹಾಕಿದ್ದಾರೆ’ ಎಂದು ತೋಡಿಕೊಂಡಾಗ, ವಿಚಾರಣೆ ನಡೆದು ತೀರ್ಪು ಹೊರಬೀಳುವವರೆಗೆ ಅವರನ್ನು ಕಾಲೇಜಿನೊಳಗೆ ಸೇರಿಸುವುದಕ್ಕೆ ನ್ಯಾಯಾಲಯ ಆದೇಶ ನೀಡಬೇಕಾಗಿತ್ತು. ಆದರೆ ತೀರ್ಪು ಹೊರ ಬೀಳುವವರೆಗೆ ಸಮವಸ್ತ್ರ ಆದೇಶವನ್ನು ಪಾಲಿಸಬೇಕು ಎನ್ನುವ ಅಡ್ಡಗೋಡೆಯ ಮಧ್ಯಂತರ ಆದೇಶವೊಂದನ್ನು ನೀಡಿತು. ಅದನ್ನು ‘ಶಿಕ್ಷಣ ವಿರೋಧಿ’ಗಳು ಬಳಸಿಕೊಂಡು ವಿದ್ಯಾರ್ಥಿನಿಯರಿಗೆ ಶಿಕ್ಷಣದ ಹಕ್ಕನ್ನು ನಿರಾಕರಿಸಿದರು ಮತ್ತು ಆ ನಿರಾಕರಣೆಯ ಕಳಂಕವನ್ನು ನ್ಯಾಯಾಲಯದ ತಲೆಗೆ ಕಟ್ಟಿದರು. ನಾಳೆ ವಿದ್ಯಾರ್ಥಿನಿಯರ ಪರವಾಗಿ ತೀರ್ಪು ಬಂದರೆ, ಈ ಶಿಕ್ಷಣ ಸಂಸ್ಥೆಗಳು ವಿದ್ಯಾರ್ಥಿನಿಯರಿಗೆ ಕಳೆದ ತರಗತಿಗಳನ್ನು, ಗೈರಾದ ಪರೀಕ್ಷೆಗಳನ್ನು ಮರಳಿ ಒದಗಿಸುತ್ತವೆಯೇ? ಎನ್ನುವ ಪ್ರಶ್ನೆಗೆ ್ಯಾಯಾಲಯದ ಬಳಿಯೂ ಉತ್ತರ ಇದ್ದಂತಿಲ್ಲ.
ಇದೀಗ ನ್ಯಾಯಾಲಯದ ಆದೇಶಕ್ಕೆ ಮೊದಲೇ ಶಿಕ್ಷಣ ಸಚಿವರು ಇನ್ನೊಂದು ಆದೇಶವನ್ನು ನೀಡಿ ಬಿಟ್ಟಿದ್ದಾರೆ. ‘ಒಟ್ಟಾರೆ ಪರೀಕ್ಷೆಗೆ ಗೈರಾದವರಿಗೆ ಮರು ಪರೀಕ್ಷೆಗೆ ಅವಕಾಶ ನೀಡುವ ಪ್ರಶ್ನೆಯೇ ಇಲ್ಲ’ ಎಂದಿದ್ದಾರೆ. ಒಂದು ವೇಳೆ ತೀರ್ಪು ವಿದ್ಯಾರ್ಥಿನಿಯರ ಪರವಾಗಿ ಬಂದರೆ, ಸರಕಾರ ಈವರೆಗೆ ವಿದ್ಯಾರ್ಥಿನಿಯರನ್ನು ಶಿಕ್ಷಣ ಸಂಸ್ಥೆಗಳಿಂದ ಹೊರ ಹಾಕಿದ ಅಭಿವೃದ್ಧಿ ಮಂಡಳಿಯ ವಿರುದ್ಧ ಕ್ರಮವನ್ನು ತೆಗೆದುಕೊಳ್ಳಬೇಕು. ಅಷ್ಟೇ ಅಲ್ಲ, ಸಂತ್ರಸ್ತ ವಿದ್ಯಾರ್ಥಿನಿಯರಿಗೆ ಪರಿಹಾರವನ್ನು ನೀಡಬೇಕು. ಮುಖ್ಯವಾಗಿ ಅವರು ಕಳೆದುಕೊಂಡ ತರಗತಿಗಳನ್ನು ವಿಶೇಷ ತರಗತಿಗಳ ಮೂಲಕ ಶಿಕ್ಷಕರು ಒದಗಿಸಿ ಕೊಡಬೇಕು. ಯಾಕೆಂದರೆ, ಇಲ್ಲಿ ವಿದ್ಯಾರ್ಥಿನಿಯರನ್ನು ಹೊರ ಹಾಕಿರುವುದೇ ಶಿಕ್ಷಕರು ಮತ್ತು ಆಡಳಿತ ಮಂಡಳಿ. ಯಾವ ಕಾರಣಕ್ಕೂ ವಿದ್ಯಾರ್ಥಿನಿಯರು ಕಾಲೇಜುಗಳಿಗೆ ಬಹಿಷ್ಕಾರ ಹಾಕಿದ್ದಲ್ಲ. ‘ಬಹಿಷ್ಕಾರ’ ಎನ್ನುವ ಪದವೇ ಈ ನಾಗರಿಕ ಬದುಕಿನಲ್ಲಿ ಅಮಾನವೀಯ ಪದವಾಗಿ ವ್ಯಾಖ್ಯಾನಿಸಿಸಲ್ಪಡುತ್ತಿರುವಾಗ, ಸರ್ವರಿಗೂ ಸಮಾನ ಶಿಕ್ಷಣ ಒದಗಿಸುವ ಒಂದೇ ಉದ್ದೇಶದಿಂದ ನಿರ್ಮಾಣಗೊಂಡಿರುವ ಸರಕಾರಿ ಕಾಲೇಜುಗಳಲ್ಲಿ ಧಿರಿಸಿನ ಕಾರಣಕ್ಕೆ ವಿದ್ಯಾರ್ಥಿನಿಯರನ್ನು ಬಹಿಷ್ಕರಿಸಿರುವುದು ನಾಚಿಕೆಗೇಡಿನ ಸಂಗತಿ. ತಮ್ಮ ತಪ್ಪುಗಳನ್ನು ತಿದ್ದಿಕೊಂಡು ಅವರಿಗಾದ ಅನ್ಯಾಯವನ್ನು ಸರಿಪಡಿಸುವುದು ಸರಕಾರದ ಕರ್ತವ್ಯ. ಆದರೆ ಇದೀಗ ಶಿಕ್ಷಣ ಸಚಿವರೇ, ‘ಪರೀಕ್ಷೆ ಗೈರಾದವರಿಗೆ ಮತ್ತೊಮ್ಮೆ ಅವಕಾಶ ನೀಡುವುದಿಲ್ಲ’ ಎಂಬ ಹೇಳಿಕೆ ಮಹಿಳೆಯರ ಶಿಕ್ಷಣದ ಕುರಿತಂತೆ ಅವರಿಗೆಷ್ಟು ಕಾಳಜಿಯಿದೆ ಎನ್ನುವುದನ್ನು ಬಹಿರಂಗಪಡಿಸಿದೆ.
ರಾಜ್ಯದಲ್ಲಿ ಕಳೆದ ಒಂದು ವರ್ಷದಲ್ಲಿ ಶಾಲೆ ತೊರೆದ ಮಕ್ಕಳ ಸಂಖ್ಯೆ 40,000ಕ್ಕೂ ಅಧಿಕ. ಇದೇ ಸಂದರ್ಭದಲ್ಲಿ ಈ ಸಂಖ್ಯೆಗೆ ಸರಕಾರದ ನೇತೃತ್ವದಲ್ಲಿ ಶಿಕ್ಷಣ ಸಂಸ್ಥೆಗಳಿಂದ ಹೊರ ಹಾಕಿದ ವಿದ್ಯಾರ್ಥಿನಿಯರನ್ನು ಸೇರಿಸುವ ಕೆಲಸ ನಡೆಯಬೇಕಾಗಿದೆ. ಸಾಧ್ಯವಾದರೆ ಮುಂದಿನ ದಿನಗಳಲ್ಲಿ ‘ಬರಬೇಡ ಬಾಲೆ ಶಾಲೆಗೆ’ ‘ಶಾಲೆ ತೊರೆ, ಮನೆಗೆ ನಡೆ’ ಮೊದಲಾದ ಯೋಜನೆಗಳನ್ನು ಘೋಷಿಸಿ ಈ ಸಂಖ್ಯೆಯನ್ನು ಇನ್ನಷ್ಟು ಹೆಚ್ಚಿಸುವ ಕೆಲಸವನ್ನು ಮಾಡಬೇಕು. ಬಜೆಟ್‌ನಲ್ಲಿ ಇದಕ್ಕಾಗಿಯೂ ಒಂದಿಷ್ಟು ಹಣವನ್ನು ಘೋಷಿಸಿದರೆ ಅಳಿದುಳಿದ ಸರಕಾರಿ ಶಾಲೆಗಳನ್ನು ಸಂಪೂರ್ಣವಾಗಿ ಮುಚ್ಚಬಹುದು. ಜೊತೆಗೆ ಮಹಿಳೆಯರು ಮನೆಯಲ್ಲೇ ಬಂಧಿತರಾಗಿ, ಪುರುಷರ ಸೇವೆ ಮಾಡುತ್ತಾ ಇರುವುದಕ್ಕೂ ಇದು ಅನುಕೂಲವಾಗಬಹುದು. ವಿಪರ್ಯಾಸವೆಂದರೆ, ಸರಕಾರ ಈಗಾಗಲೇ ‘ಬಾ ಬಾಲೆ ಶಾಲೆಗೆ’ ಎನ್ನುವಂತಹ ಹತ್ತು ಹಲವು ಯೋಜನೆಗಳನ್ನು ಘೋಷಿಸಿ, ಬಾಲಕಿಯಕರನ್ನು ಶಾಲೆಗೆ ಸೇರಿಸಲು ಪ್ರೋತ್ಸಾಹ ನೀಡಿದೆ. ಅದಕ್ಕಾಗಿ ನೂರಾರು ಕೋಟಿ ರೂಪಾಯಿಗಳನ್ನು ವ್ಯಯ ಮಾಡಿದೆ. ಇದೀಗ ದೇಶದಲ್ಲೇ ಮೊದಲ ಬಾರಿಗೆ, ವಿದ್ಯಾರ್ಥಿನಿಯರನ್ನು ಶಾಲೆಯಿಂದ, ಕಾಲೇಜುಗಳಿಂದ ಹೊರಗಿಡುವುದಕ್ಕೆ ಸರಕಾರ ನೆಪಗಳನ್ನು ಹುಡುಕುತ್ತಿದೆ ಮತ್ತು ಅವರನ್ನು ಪರೀಕ್ಷೆ ಬರೆಯದಂತೆ ಶಿಕ್ಷಣ ಸಂಸ್ಥೆಯ ಗೇಟಿನಲ್ಲೇ ತಡೆದು, ಇದೀಗ ಪರೀಕ್ಷೆ ಬರೆಯಲು ಅವಕಾಶ ವಂಚಿತ ರಾದ ವಿದ್ಯಾರ್ಥಿನಿಯರನ್ನೇ ಆರೋಪಿಗಳನ್ನಾಗಿಸಲು ನೋಡುತ್ತಿದೆ.
ಪರಿಸ್ಥಿತಿಯ ದುಷ್ಪರಿಣಾಮಗಳ ಅರಿವಿದ್ದೂ ಹೈಕೋರ್ಟ್ ಶೀಘ್ರ ತೀರ್ಪು ನೀಡುವುದಕ್ಕೆ ಮುಂದಾಗಿಲ್ಲ. ಅದರ ಅರ್ಥ ಈ ದೇಶದ ವಿದ್ಯಾರ್ಥಿನಿಯರ ಪಾಲಿಗೆ ಶಿಕ್ಷಣ ಅನಿವಾರ್ಯವಾಗಿರುವ ವಿಷಯವೇನೂ ಅಲ್ಲ ಎಂದಾಯಿತು. ಆದುದರಿಂದಲೇ, ಮಧ್ಯಂತರ ಆದೇಶದ ಮೂಲಕ ವಿದ್ಯಾರ್ಥಿನಿಯರಿಗೆ ಕಾಲೇಜುಗಳು ಬಹಿಷ್ಕಾರ ಹಾಕುವುದಕ್ಕೆ ಪರೋಕ್ಷ ಸಹಕಾರ ನೀಡಿತು. ಇದೀಗ ತೀರ್ಪನ್ನು ಮುಂದೂಡುತ್ತಾ ವಿದ್ಯಾರ್ಥಿನಿಯರಿಗೆ ಪರೀಕ್ಷೆಯೇ ಇಲ್ಲದಂತೆ ಮಾಡಿದೆ. ಇದರ ಬೆನ್ನಿಗೇ ಶಿಕ್ಷಣ ಸಚಿವರು ‘ಯಾವುದೇ ಕಾರಣಕ್ಕೆ ವಿದ್ಯಾರ್ಥಿನಿಯರಿಗೆ ಮರು ಪರೀಕ್ಷೆಗೆ ಅವಕಾಶ ಇಲ್ಲ’ ಎಂದು ಹೇಳಿದ್ದಾರೆ. ಈ ದೇಶದ ಶಿಕ್ಷಣ ತಜ್ಞರು, ಪ್ರಜ್ಞಾವಂತರು, ಪ್ರಗತಿಪರ ಸಂಘಟನೆಗಳು ಇವೆಲ್ಲಕ್ಕೂ ಮೂಕ ಸಾಕ್ಷಿಯಾಗುತ್ತಿವೆ. ಒಟ್ಟಿನಲ್ಲಿ ಮಹಿಳೆಯರ ಶಿಕ್ಷಣದ ವಿಷಯದಲ್ಲೂ ರಾಜ್ಯ ಸರಕಾರ ಸೇಡಿನ ರಾಜಕಾರಣವನ್ನು ಮಾಡುತ್ತಿದೆ ಎನ್ನುವುದು ಸ್ಪಷ್ಟವಾಗಿದೆ. ನಾಳೆ ಪ್ರಕರಣದಲ್ಲಿ ವಿದ್ಯಾರ್ಥಿನಿಯರಿಗೆ ಸೋಲಾದರೆ ಅವರು ಸುಪ್ರೀಂಕೋರ್ಟ್ ಮೆಟ್ಟಿಲೇರಬಹುದು. ಅಲ್ಲಿ ವಿಚಾರಣೆಗಳು ನಡೆದು ತೀರ್ಪು ಹೊರ ಬೀಳುವಾಗ ಕನಿಷ್ಠ ವರ್ಷ ಕಳೆದಿರುತ್ತದೆ. ಅಲ್ಲಿಯವರೆಗಿನ ವಿದ್ಯಾರ್ಥಿನಿಯರ ನಷ್ಟಕ್ಕೆ ಸರಕಾರದ ಬಳಿ ಪರಿಹಾರವಿದೆಯೆ?
ದುರಂತವೆಂದರೆ, ಶಿಕ್ಷಣದಿಂದ ಮಹಿಳೆಯರು ವಂಚಿತರಾದರೆ ಅದರಿಂದ ಇಡೀ ಸಮಾಜಕ್ಕೇ ನಷ್ಟವಾಗುತ್ತದೆ ಎನ್ನುವ ಅಂಶವನ್ನು ಸರಕಾರ ಮರೆತಿರುವುದು. ಇಂದು ವಿದ್ಯಾರ್ಥಿನಿಯರ ಶಿಕ್ಷಣಕ್ಕೆ ಸರಕಾರ ಕೋಟ್ಯಂತರ ರೂಪಾಯಿಯನ್ನು ಯಾಕೆ ಹೂಡಿಕೆ ಮಾಡಿದೆಯೆಂದರೆ, ಮಹಿಳೆಯರ ಶಿಕ್ಷಣ ದೇಶದ ಅಭಿವೃದ್ಧಿಯಲ್ಲಿ ಮಹತ್ತರ ಪಾತ್ರವಹಿಸುತ್ತದೆ. ಒಂದು ವೇಳೆ ವಿದ್ಯಾರ್ಥಿನಿಯರು ಶಿಕ್ಷಣ ವಂಚಿತರಾದರೆ ಅದು ಅವರ ವೈಯಕ್ತಿ ನಷ್ಟ ಮಾತ್ರವಲ್ಲ, ಅಭಿವೃದ್ಧಿಯ ಕಡೆಗೆ ಮುನ್ನಡೆಯುತ್ತಿರುವ ಈ ನಾಡಿನ ನಷ್ಟವೂ ಕೂಡ. ಇದನ್ನು ಅರ್ಥ ಮಾಡಿಕೊಂಡಾಗ ಸರಕಾರವೇ ಮುಂದೆ ನಿಂತು ಕಾಳಜಿಯಿಂದ ಸಮವಸ್ತ್ರ ವಿವಾದವನ್ನು ಪರಿಹರಿಸುತ್ತದೆ. ಆದರೆ ಅವರಿಗೆ ಇದನ್ನು ಅರ್ಥಮಾಡಿಸಿಕೊಡುವವರು ಯಾರು ಎನ್ನುವುದೇ ನಮ್ಮ ಮುಂದಿರುವ ಅತಿದೊಡ್ಡ ಪ್ರಶ್ನೆ. ಸದ್ಯಕ್ಕೆ ಈ ನಾಡು ಹೈಕೋರ್ಟನ್ನಷ್ಟೇ ನಂಬಿಕೊಂಡಿದೆ. ನಂಬಿಕೆ ಹುಸಿಯಾಗದಿರಲಿ ಎನ್ನುವುದು ಶಿಕ್ಷಣದ ಪರವಾಗಿರುವ ಎಲ್ಲರ ಆಶಯ.