ಕೋವಿಡ್ ಸಾಂಕ್ರಾಮಿಕದಿಂದ ಪ್ರವಾಸೋದ್ಯಮ ಕ್ಷೇತ್ರದಲ್ಲಿ 2.15 ಕೋಟಿ ಉದ್ಯೋಗ ನಷ್ಟ
ಹೊಸದಿಲ್ಲಿ: ಕೋವಿಡ್ ಸಾಂಕ್ರಾಮಿಕ 2020ರಲ್ಲಿ ಆರಂಭಗೊಂಡಂದಿನಿಂದ ದೇಶದ ಪ್ರವಾಸೋದ್ಯಮ ಕ್ಷೇತ್ರದ 2.5 ಕೋಟಿ ಜನರು ತಮ್ಮ ಉದ್ಯೋಗಗಳನ್ನು ಕಳೆದುಕೊಂಡಿದ್ದಾರೆ ಎಂದು ಕೇಂದ್ರ ಪ್ರವಾಸೋದ್ಯಮ ಸಚಿವ ಜಿ ಕಿಶನ್ ರೆಡ್ಡಿ ಸೋಮವಾರ ಲೋಕಸಭೆಗೆ ಮಾಹಿತಿ ನೀಡಿದ್ದಾರೆ.
ಕೋವಿಡ್ ಮೊದಲನೇ ಅಲೆಯ ವೇಳೆ 1.45 ಕೋಟಿ ಜನರು ಉದ್ಯೋಗ ಕಳೆದುಕೊಂಡಿದ್ದರೆ ಎರಡನೇ ಮತ್ತು ಮೂರನೇ ಅಲೆಯ ವೇಳೆ ಕ್ರಮವಾಗಿ 52 ಲಕ್ಷ ಮತ್ತು 18 ಲಕ್ಷ ಜನರು ಉದ್ಯೋಗ ಕಳೆದುಕೊಂಡಿದ್ದಾರೆ ಎಂದು ಅವರು ತಿಳಿಸಿದ್ದಾರೆ.
ದೇಶದಲ್ಲಿ ಕೋವಿಡ್ ಅಲೆಗಿಂತ ಮುಂಚಿತವಾಗಿ ಪ್ರವಾಸೋದ್ಯಮ ಕ್ಷೇತ್ರದಲ್ಲಿ 3.8 ಕೋಟಿ ಜನರು ಉದ್ಯೋಗದಲ್ಲಿದ್ದರು ಎಂದು ಅವರು ತಿಳಿಸಿದ್ದಾರೆ.
ಕೋವಿಡ್ ಮೊದಲನೇ ಅಲೆಯಲ್ಲಿ ದೇಶಕ್ಕೆ ಆಗಮಿಸಿದ ಪ್ರವಾಸಿಗರ ಸಂಖ್ಯೆಯಲ್ಲಿ ಶೇ. 93ರಷ್ಟು ಕುಸಿತವಾಗಿದ್ದರೆ ಎರಡನೇ ಅಲೆ ವೇಳೆ ಪ್ರವಾಸಿಗರ ಸಂಖ್ಯೆಯಲ್ಲಿ ಶೇ. 79ರಷ್ಟು ಹಾಗೂ ಮೂರನೇ ಅಲೆ ವೇಳೆ ಶೇ. 64 ರಷ್ಟು ಕುಸಿತ ಕಂಡಿತ್ತು ಎಂದು ಸಚಿವರು ಮಾಹಿತಿ ನೀಡಿದ್ದಾರೆ.
ಅಂತರಾಷ್ಟ್ರೀಯ ಪ್ರವಾಸಿಗರನ್ನು ಆಕರ್ಷಿಸಲು ಮೊದಲ ಐದು ಲಕ್ಷ ಪ್ರವಾಸಿಗರಿಗೆ ವೀಸಾ ಶುಲ್ಕ ಮನ್ನಾ ಮಾಡಲು ಸರಕಾರ ನಿರ್ಧರಿಸಿದೆ. ಪ್ರವಾಸೋದ್ಯಮ ಕ್ಷೇತ್ರವನ್ನು ಪ್ರೋತ್ಸಾಹಿಸಲು ಪ್ರವಾಸೋದ್ಯಮ ಕ್ಷೇತ್ರದ ಉದ್ದಿಮೆಗಳಿಗೆ ರೂ. 10 ಲಕ್ಷ ತನಕ ಬಡ್ಡಿ ರಹಿತ ಸಾಲ ಹಾಗೂ ಪ್ರವಾಸಿ ಮಾರ್ಗದರ್ಶಿಗಳಿಗೆ ರೂ. 1 ಲಕ್ಷ ವರೆಗೆ ಸಾಲವನ್ನು ಸರಕಾರ ನೀಡಲಿದೆ ಎಂದು ಸಚಿವರು ತಿಳಿಸಿದರು.