×
Ad

ಮಂಗಳೂರು: ಮಂಗಳಾ ರಿಸೋರ್ಸ್ ಮ್ಯಾನೇಜ್‌ಮೆಂಟ್ ಸಂಸ್ಥಾಪನಾ ದಿನಾಚರಣೆ

Update: 2022-03-14 16:21 IST

ಮಂಗಳೂರು : ಮಂಗಳೂರಿನ ರಾಮಕೃಷ್ಣ ಮಠದ ಮಾರ್ಗದರ್ಶನದಲ್ಲಿ  ನಡೆಯುತ್ತಿರುವ ಮಂಗಳಾ ರಿಸೋರ್ಸ್ ಮ್ಯಾನೇಜ್‌ಮೆಂಟ್ ಸಂಸ್ಥೆಯ ಸಂಸ್ಥಾಪನಾ ದಿನಾಚರಣೆ ಸಮಾರಂಭವನ್ನು ಇಂದು ಬೆಳಗಾವಿಯ ನಿಡಸೋಸಿಯ ಜಗದ್ಗುರು ಶ್ರೀ ದುರದುಂಡೀಶ್ವರ ಸಿದ್ಧ ಸಂಸ್ಥಾನ ಮಠದ ಶ್ರೀ ಶಿವ ಲಿಂಗೇಶ್ವರ ಮಹಾ ಸ್ವಾಮೀಜಿ ಉದ್ಘಾಟಿಸಿದರು.

ನಗರದ ಖಾಸಗಿ ಹೊಟೇಲ್ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಸ್ವಾಮೀಜಿ, ಕಸವನ್ನು  ಸಂಪನ್ಮೂಲ ಎಂಬುದಾಗಿ ಪರಿಗಣಿಸಿ, ಕಸದಿಂದ ರಸ  ತೆಗೆಯುವ ಮಂಗಳೂರಿನ ಮಂಗಳಾ ರಿಸೋರ್ಸ್ ಮ್ಯಾನೇಜ್‌ಮೆಂಟ್‌ನ  ಹೊಸ ಆವಿಷ್ಕಾರ  ದೇಶಕ್ಕೆ  ಮಾದರಿಯಾಗಿದೆ ಎಂದರು.

ಕಸದಲ್ಲಿ  ಹಣವನ್ನು ಕಾಣುವ ಜನರು ಬಹಳ ಕಡಿಮೆ. ಮಂಗಳೂರು ರಾಮಕೃಷ್ಣ  ಮಠದ ಶ್ರೀ ಏಕ ಗಮ್ಯಾನಂದ ಸ್ವಾಮೀಜಿ ಅವರು ಕಸದಲ್ಲಿ  ಹಣ ಇದೆ ಎಂದು ಅನ್ವೇಷಣೆ ಮಾಡಿ ಹೊಸತೊಂದನ್ನು ಹುಡುಕಿ ಜನರ ಮುಂದಿಟ್ಟಿದ್ದಾರೆ. ಈ ಹೊಸತನಕ್ಕೆ ಜನ ಬೆಂಬಲ ಪಡೆಯುವಲ್ಲಿಯೂ ಯಶಸ್ವಿಯಾಗಿದ್ದಾರೆ ಎಂದು ಹೇಳಿ ಸ್ವಾಮೀಜಿ ಶುಭ ಹಾರೈಸಿದರು.

ಮುಖ್ಯ ಅತಿಥಿಯಾಗಿದ್ದ  ಮಂಗಳೂರು ರಾಮಕೃಷ್ಣ ಮಠದ ಅಧ್ಯಕ್ಷ  ಸ್ವಾಮಿ ಜಿತ ಕಾಮಾನಂದಜಿ ಮಹಾರಾಜ್ ಅವರು ಮಂಗಳಾ ರಿಸೋರ್ಸ್ ಮ್ಯಾನೇಜ್‌ಮೆಂಟ್ ಸಂಸ್ಥೆಯು ಘನ ತ್ಯಾಜ್ಯ  ವಿಲೇವಾರಿಗೆ ತಕ್ಕ ಮಟ್ಟಿನ ಪರಿಹಾರ ಕಂಡುಕೊಂಡಿದೆ. ಕಸದ ಸಮಸ್ಯೆಗೆ ಪರಿಹಾರ ಸೂಚಿಸುವ ಈ ಮಂಗಳೂರು ಮಾಡೆಲ್ ಎಲ್ಲೆಡೆ ತಲುಪಲಿ. ಈ ಸಂಸ್ಥೆಗೆ ರಾಮಕೃಷ್ಣ ಮಠದ ವತಿಯಿಂದ ನಿರಂತರ ಮಾರ್ಗದರ್ಶನ ನೀಡಲಾಗುವುದು  ಎಂದು  ಹೇಳಿದರು.

ರಾಣೆ ಬೆನ್ನೂರು ರಾಮಕೃಷ್ಣ ವಿವೇಕಾನಂದ ಆಶ್ರಮದ ಸ್ವಾಮಿ ಪ್ರಕಾಶಾನಂದಜಿ ಮಹಾರಾಜ್ ಮಾತನಾಡಿ ಸ್ವಚ್ಛ ಭಾರತ ಕಾರ್ಯಕ್ರಮದ ಅಡಿಯಲ್ಲಿ  ಸ್ವಚ್ಛತೆಯ ಅಭಿಯಾನ ೫ ವರ್ಷ ಪೂರ್ತಿ ನಡೆದದ್ದು ಮಂಗಳೂರಿನಲ್ಲಿ ಮಾತ್ರ ಎಂದರು.

ರಾಮಕೃಷ್ಣ ಮಠದ ಯುವಜನ ಸಂಯೋಜಕ ಸ್ವಾಮಿ ಏಕ ಗಮ್ಯಾನಂದ ಸ್ವಾಮೀಜಿ ಅವರು ಜನರು ಸಹಕಾರ ನೀಡಿದ್ದರಿಂದ ಸ್ವಚ್ಛ  ಮಂಗಳೂರು ಅಭಿಯಾನ ಯಶಸ್ವಿಯಾಗಿದೆ. ಅಭಿಯಾನ ಆರಂಭಿಸುವಾಗ ಮಂಗಳೂರಿ ನಲ್ಲಿ  800 ಬ್ಲ್ಯಾಕ್ ಸ್ಪಾಟ್‌ಗಳಿದ್ದವು; ಈಗ ಹುಡುಕಿದರೂ ಒಂದು ಬ್ಲ್ಯಾಕ್ ಸ್ಪಾಟ್ ಸಿಗಲಾರದು. ಕಸ ಒಂದು ಸಮಸ್ಯೆ ಅಲ್ಲ; ಅದನ್ನು ನಿರ್ಲಕ್ಷಿಸಿದ್ದರಿಂದ ಸಮಸ್ಯೆ ಉಂಟಾಗಿತ್ತು. ಕಸ ಸಾಗಾಟ ಮಾಡ ಬಾರದು, ಬದಲಾಗಿ ಅದನ್ನು ಮನೆಯಲ್ಲಿಯೇ ನಿರ್ವಹಣೆ ಮಾಡ ಬೇಕು ಎಂದರು.

ಮಂಗಳೂರು ರಿಸೋರ್ಸ್ ಮ್ಯಾನೇಜ್‌ಮೆಂಟ್‌ನಿಂದ ಕಸದ ಸಮಸ್ಯೆಗೆ ಪರಿಹಾರ  ಸಿಕ್ಕಿದ್ದು ಮಾತ್ರವಲ್ಲ, ಉದ್ಯೋಗ ಸೃಷ್ಟಿಯೂ ಆಗಿದೆ. ಈ ಸ್ಟಾರ್ಟ್ ಅಪ್ ಕಂಪೆನಿ ಬೇರೆ ಕಂಪೆನಿಯ ನಕಲು ಅಲ್ಲ; ಇಲ್ಲಿಯೇ ಆವಿಷ್ಕರಿಸಿದ್ದಾಗಿದೆ. ಜನರಿಂದ ಜನರಿಗಾಗಿ ಇರುವ ಈ ಸಂಸ್ಥೆ  ವಾರ್ಷಿಕ ಶೇ. 10 ರಿಂದ ಶೇ. 20 ರಷ್ಟು  ಬೆಳವಣಿಗೆ ಕಂಡಿದೆ ಎಂದು ಏಕ ಗಮ್ಯಾನಂದ ಸ್ವಾಮೀಜಿ ವಿವರಿಸಿದರು.

ಮಾಜಿ ವಿಧಾನ ಪರಿಷತ್ ಸದಸ್ಯ ಕ್ಯಾ. ಗಣೇಶ್ ಕಾರ್ಣಿಕ್, ಬೆಳಗಾವಿಯ ಸಾಹಿತಿ ಡಾ.  ಜಿ.ಎಸ್. ಮರಿಗುಡ್ಡಿ ಅವರು ಮಾತನಾಡಿದರು.

ಕಂಪೆನಿಯ ವ್ಯವಸ್ಥಾಪಕ ನಿರ್ದೇಶಕ ದಿಲ್‌ರಾಜ್ ಆಳ್ವ  ಸ್ವಾಗತಿಸಿ ಕಾರ್ಯ ನಿರ್ವಾಹಕ ನಿರ್ದೇಶಕ ರಂಜನ್ ಬೆಲ್ಲರ್ಪಾಡಿ ಪ್ರಸ್ತಾವಿಕವಾಗಿ ಮಾತನಾಡಿದರು.

ಬೆಂಗಳೂರಿನ ಮಾನಸ ಕೇಂದ್ರದ ಅಧ್ಯಕ್ಷ  ಪ್ರೊ. ಕೆ. ರಘೋತ್ತಮ ರಾವ್, ಮ್ಯಾಜಿಕ್ ಕಲಾವಿದ ಕುದ್ರೋಳಿ ಗಣೇಶ್ ವೇದಿಕೆಯಲ್ಲಿದ್ದರು. ಅಭಿಷೇಕ್ ಕಾರ್ಯಕ್ರಮ ನಿರ್ವಹಿಸಿದರು.

ʼʼತ್ಯಾಜ್ಯವನ್ನು ಸಂಪನ್ಮೂಲವನ್ನಾಗಿ ಪರಿವರ್ತಿಸಿ, ತ್ಯಾಜ್ಯಕ್ಕೆ ಶಾಶ್ವತ ಪರಿಹಾರ ಒದಗಿಸುವುದು ಈ ಸಂಸ್ಥೆಯ ಗುರಿ. 3 ವರ್ಷಗಳ ಹಿಂದೆ ಆರಂಭವಾದ ಕಂಪೆನಿ ವೈಜ್ಞಾನಿಕವಾಗಿ  ತ್ಯಾಜ್ಯ ನಿರ್ವಹಣೆ ಮಾಡುತ್ತಿದ್ದು, ಜಿಎಸ್‌ಟಿ ಪಾವತಿಸಿಯೂ ಶೇ. 20 ಲಾಭದಲ್ಲಿ ನಡೆಯುತ್ತಿದೆ. 50 ಮಂದಿ ಸಿಬಂದಿ ಇದ್ದಾರೆ.  ಮಂಗಳೂರಿನ 20 ಅಪಾರ್ಟಿಮೆಂಟ್‌ಗಳ ಸುಮಾರು 1000 ಮನೆಗಳಲ್ಲಿ  ಮಡಕೆ ಗೊಬ್ಬರ, ಉಪ್ಪಿನಂಗಡಿ ಗ್ರಾಮ ಪಂಚಾಯತಿನ ಕಸ ವಿಲೆವಾರಿ, ಕಾರ್ಕಳದಲ್ಲಿ  ಎಂಆರ್‌ಎಫ್ ಘಟಕ, ಕಟೀಲು ದೇವಸ್ಥಾನದ ತ್ಯಾಜ್ಯ ನಿರ್ವಹಣೆ ಮಾಡುತ್ತಿದೆ. ಮುಂದಿನ ದಿನಗಳಲ್ಲಿ  ದೇರಳಕಟ್ಟೆಯ ಕೆಎಸ್‌ಹೆಗ್ಡೆ ಆಸ್ಪತ್ರೆ ಮತ್ತು ಮೆಡಿಕಲ್ ಕಾಲೇಜು, ಎಂಆರ್‌ಪಿಎಲ್ ಹಾಗೂ ಮುಜರಾಯಿ ಇಲಾಖೆ ಅಧೀನದ ಎಲ್ಲಾ  ದೇವಸ್ಥಾನಗಳ ತ್ಯಾಜ್ಯ ನಿರ್ವಹಣೆಯ ಜವಾಬ್ದಾರಿ ವಹಿಸಿಕೊಳ್ಳುವ ಉದ್ದೇಶ ಹೊಂದಲಾಗಿದೆ.

- ರಂಜನ್ ಬೆಲ್ಲರ್ಪಾಡಿ, ಕಾರ್ಯ ನಿರ್ವಾಹಕ ನಿರ್ದೇಶಕರು,
ಮಂಗಳಾ ರಿಸೋರ್ಸ್ ಮ್ಯಾನೇಜ್‌ಮೆಂಟ್ ಸಂಸ್ಥೆ, ಮಂಗಳೂರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News