×
Ad

ಚುನಾವಣಾ ಸೋಲಿನ ಬೆನ್ನಲ್ಲೇ ಪಕ್ಷದ ಎಲ್ಲಾ ಘಟಕಗಳನ್ನು ವಿಸರ್ಜಿಸಿದ ಆರ್ ಎಲ್‍ ಡಿ ಮುಖ್ಯಸ್ಥ

Update: 2022-03-14 16:40 IST
ಜಯಂತ್ ಚೌಧರಿ

ಲಕ್ನೊ: ಭಾರೀ  ಬಹುಮತದೊಂದಿಗೆ ಬಿಜೆಪಿ ಎರಡನೇ ಅವಧಿಗೆ ಉತ್ತರ ಪ್ರದೇಶವನ್ನು ಗೆದ್ದುಕೊಂಡ  ಕೆಲವು ದಿನಗಳ ನಂತರ, ಜಯಂತ್ ಚೌಧರಿ ನೇತೃತ್ವದ ಆರ್‌ಎಲ್‌ಡಿ ಸೋಮವಾರ ರಾಜ್ಯದಲ್ಲಿ ಪಕ್ಷದ ಘಟಕಗಳನ್ನು ವಿಸರ್ಜಿಸುವ ಕುರಿತು ಪ್ರಮುಖ ಘೋಷಣೆ ಮಾಡಿದೆ.

ಚೌಧರಿ ಅವರು ಅಖಿಲೇಶ್ ಯಾದವ್ ಅವರ ಸಮಾಜವಾದಿ ಪಕ್ಷದೊಂದಿಗೆ ಮೈತ್ರಿ ಮಾಡಿಕೊಂಡು ರಾಜ್ಯ ಚುನಾವಣೆಯಲ್ಲಿ ಸ್ಪರ್ಧಿಸಿದ್ದರು.

"ರಾಷ್ಟ್ರೀಯ ಲೋಕದಳದ ರಾಷ್ಟ್ರೀಯ ಅಧ್ಯಕ್ಷ ಚೌಧರಿ ಜಯಂತ್ ಸಿಂಗ್ ಅವರ ಸೂಚನೆಯಂತೆ ರಾಜ್ಯ, ಪ್ರಾದೇಶಿಕ ಮತ್ತು ಜಿಲ್ಲಾ ಘಟಕಗಳು ಹಾಗೂ ಎಲ್ಲಾ ಅಗ್ರ ಘಟಕಗಳನ್ನು ತಕ್ಷಣದಿಂದ ಜಾರಿಗೆ ಬರುವಂತೆ ವಿಸರ್ಜಿಸಲಾಗುತ್ತಿದೆ" ಎಂದು ಹಿಂದಿಯಲ್ಲಿ ಟ್ವೀಟ್ ಮಾಡಲಾಗಿದೆ. ಈ ಮಹತ್ವದ ನಡೆಗೆ ಕಾರಣವನ್ನು ತಿಳಿಸಿಲ್ಲ.

ರಾಜ್ಯ ಚುನಾವಣೆಯಲ್ಲಿ ಸಮಾಜವಾದಿ ಪಕ್ಷ 111 ಸ್ಥಾನಗಳನ್ನು ಗೆದ್ದರೆ, ಆರ್‌ಎಲ್‌ಡಿ ಎಂಟು ಸ್ಥಾನಗಳನ್ನು ಗೆದ್ದಿದೆ. ರಾಜ್ಯದಲ್ಲಿ ಜಯಂತ್ ಚೌಧರಿ ಅವರ ಪಕ್ಷದ ಮತಗಳಿಕೆ ಶೇ.2.89 ಆಗಿದ್ದರೆ, ಎಸ್‌ಪಿ ಶೇ.32.1ರಷ್ಟು ಮತಗಳನ್ನು ದಾಖಲಿಸಿದೆ.

ರಾಜ್ಯ ಚುನಾವಣೆಗೆ ಮುನ್ನ ಚೌಧರಿ ಅವರು ಬಿಜೆಪಿ ಮೈತ್ರಿಕೂಟಕ್ಕೆ ಸೇರುವ ಪ್ರಸ್ತಾಪವನ್ನು ತಿರಸ್ಕರಿಸಿದ್ದರು.

“ನಾವು ಪಲ್ಟಿಯಾಗುವ ‘ಚವನ್ನಿ’ (ನಾಣ್ಯ) ಅಲ್ಲ. ಬಿಜೆಪಿಯವರು ನಮ್ಮನ್ನು ಹಗುರವಾಗಿ ಪರಿಗಣಿಸಬಾರದು. ನಾವು ನಮ್ಮ ನಿರ್ಧಾರವನ್ನು ಬದಲಾಯಿಸುವುದಿಲ್ಲ ”ಎಂದು ಅವರು ಆ ಸಮಯದಲ್ಲಿ ಹೇಳಿದ್ದರು.

43 ವರ್ಷದ ಜಾಟ್ ನಾಯಕ ಈ ಹಿಂದೆ ರೈತರ ಪ್ರತಿಭಟನೆಯ ಬಗ್ಗೆ ಆಡಳಿತ ಪಕ್ಷವನ್ನು ತರಾಟೆಗೆ ತೆಗೆದುಕೊಂಡಿದ್ದರು. ಸ್ಥೂಲ ಅಂದಾಜಿನ ಪ್ರಕಾರ ಜಾಟ್‌ಗಳು ರಾಜ್ಯದ ಜನಸಂಖ್ಯೆಯ ಶೇಕಡಾ 10 ಕ್ಕಿಂತ ಹೆಚ್ಚು ಇದ್ದಾರೆ ಹಾಗೂ  ಪಶ್ಚಿಮ ಉತ್ತರಪ್ರದೇಶವು ಆರ್ ಎಲ್ ಡಿ ಯ ಭದ್ರಕೋಟೆ ಎಂದು ನಂಬಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News