ಸಿಖ್ಖರ ವಿರೋಧದ ಬೆನ್ನಲ್ಲೇ ವಿಮಾನ ನಿಲ್ದಾಣಗಳಲ್ಲಿ 'ಕಿರ್ಪಾನ್‌' ಮೇಲಿನ ನಿಷೇಧ ತೆಗೆದು ಹಾಕಿದ ಕೇಂದ್ರ

Update: 2022-03-14 13:57 GMT
‌Photo; Twitter/Viirnair

ಹೊಸದಿಲ್ಲಿ: ವಿಮಾನಯಾನ ಭದ್ರತಾ ನಿಯಂತ್ರಕ ಬಿಸಿಎಎಸ್ (BCAS) ಸಿಖ್ ಉದ್ಯೋಗಿಗಳಿಗೆ ವಿಮಾನ ನಿಲ್ದಾಣದ ಆವರಣದೊಳಗೆ ವೈಯಕ್ತಿಕವಾಗಿ ಕಿರ್ಪಾನ್ ಒಯ್ಯವುದಕ್ಕೆ ಅನುಮತಿ ನೀಡಿದೆ ಎಂದು ದಾಖಲೆಯಲ್ಲಿ ತಿಳಿಸಲಾಗಿದೆ ಎಂದು NDTV.com ವರದಿ ಮಾಡಿದೆ. 

ವಾಯುಯಾನ ವಲಯದ ಸಿಖ್ ಉದ್ಯೋಗಿಗಳು ಯಾವುದೇ ವಿಮಾನ ನಿಲ್ದಾಣದ ಆವರಣದಲ್ಲಿ ಕಿರ್ಪಾನ್ ಕೊಂಡೊಯ್ಯುವುದನ್ನು ನಿಷೇಧಿಸುವ ಬಿಸಿಎಎಸ್ ಮಾರ್ಚ್ 4 ರಂದು ನೀಡಿದ ಆದೇಶವನ್ನು ಸಿಖ್ ಸಂಸ್ಥೆ ಶಿರೋಮಣಿ ಗುರುದ್ವಾರ ಪರ್ಬಂಧಕ್ ಸಮಿತಿ (SGPC) ಟೀಕಿಸಿತ್ತು‌.
ಅದರ ಬೆನ್ನಲ್ಲೇ,  ಮಾರ್ಚ್ 12 ರಂದು, ಬಿಸಿಎಎಸ್ ಈ ನಿಷೇಧವನ್ನು ತೆಗೆದುಹಾಕಿದೆ. 

ಕಠಾರಿ ಕಿರ್ಪಾನ್ ಅನ್ನು ಸಿಖ್ ಧರ್ಮದಲ್ಲಿ ಧರಿಸುವುದು ಕಡ್ಡಾಯ. 

ಮಾರ್ಚ್‌ 4 ರ ಬಿಸಿಎಎಸ್ ಆದೇಶದಲ್ಲಿ ಸಿಖ್ ಪ್ರಯಾಣಿಕರಿಗೆ ಮಾತ್ರ ಕಿರ್ಪಾನ್ ಅನ್ನು ಧರಿಸಲು ಅನುಮತಿ ಇದೆಯೆಂದು ಹೇಳಲಾಗಿತ್ತು. ಆದರೆ, ಅದರ ಬ್ಲೇಡ್‌ನ ಉದ್ದವು 6 ಇಂಚುಗಳುನ್ನು ಮೀರಬಾರದು ಹಾಗೂ ಅದರ ಒಟ್ಟಾರೆ ಉದ್ದ (ಕೈಹಿಡಿಯೊಂದಿಗೆ) 9 ಇಂಚುಗಳನ್ನು ಮೀರಬಾರದು ಎಂದು ತಿಳಿಸಿತ್ತು. 

ಆದರೆ, ಆದೇಶವು ಸಿಖ್ ಸಿಬ್ಬಂದಿ ಕಿರ್ಪಾನ್ ಧರಿಸುವುದನ್ನು ನಿರ್ಬಂಧಿಸಿತ್ತು. ವಿಮಾನ ನಿಲ್ದಾಣದಲ್ಲಿ (ಸಿಖ್ ಸೇರಿದಂತೆ) ಮತ್ತು ಯಾವುದೇ ಟರ್ಮಿನಲ್, ದೇಶೀಯ ಅಥವಾ ಅಂತರಾಷ್ಟ್ರೀಯ ಟರ್ಮಿನಲ್‌ನಲ್ಲಿ ಕೆಲಸ ಮಾಡುವ ಯಾವುದೇ ಸಿಬ್ಬಂದಿ ಅಥವಾ ಅದರ ಉದ್ಯೋಗಿಗಳಿಗೆ ಕಿರ್ಪಾನ್ ಅನ್ನು ವೈಯಕ್ತಿಕವಾಗಿ ಸಾಗಿಸಲು ಅನುಮತಿಸಲಾಗುವುದಿಲ್ಲ ಎಂದು ಆದೇಶದಲ್ಲಿ ಹೇಳಿತ್ತು.

ಮಾರ್ಚ್ 9 ರಂದು ಎಸ್ಜಿಪಿಸಿ ಅಧ್ಯಕ್ಷ ಹರ್ಜಿಂದರ್ ಸಿಂಗ್ ಧಾಮಿ ಅವರು ನಾಗರಿಕ ವಿಮಾನಯಾನ ಸಚಿವ ಜ್ಯೋತಿರಾದಿತ್ಯ ಸಿಂಧಿಯಾ ಅವರಿಗೆ ಪತ್ರ ಬರೆದಿದ್ದು, ಮಾರ್ಚ್ 4 ರ ಬಿಸಿಎಎಸ್ ಆದೇಶವು ಸಿಖ್ ಹಕ್ಕುಗಳ ಮೇಲಿನ ದಾಳಿಯಾಗಿದೆ ಎಂದು ಆದೇಶವನ್ನು ಖಂಡಿಸಿದ್ದರು.

ಅದರ ಬೆನ್ನಲ್ಲೇ, ಮಾರ್ಚ್ 12 ರಂದು BCAS ಮಾರ್ಚ್ 4 ರ ಆದೇಶಕ್ಕೆ ತಿದ್ದುಪಡಿ ಅನ್ನು ಹೊರಡಿಸಿದೆ. ಸಿಖ್ ಉದ್ಯೋಗಿಗಳು ಕಿರ್ಪಾನ್ ತರುವುದನ್ನು ನಿಷೇಧಿಸುವ ಅಂಶವನ್ನು ತಿದ್ದುಪಡಿಯಲ್ಲಿ ತೆಗೆದುಹಾಕಿದೆ ಎಂದು ವರದಿಯಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News