ನಾಳೆ ಪುನೀತ್ ರಾಜ್ ಕುಮಾರ್ ಅಭಿನಯದ 'ಜೇಮ್ಸ್' ಚಿತ್ರ ಬಿಡುಗಡೆ

Update: 2022-03-16 18:17 GMT

ಬೆಂಗಳೂರು: ನಟ ದಿವಂಗತ ಪುನೀತ್‌ ರಾಜ್‌ಕುಮಾರ್‌ ನಟನೆಯ ಕೊನೆಯ ಸಿನೆಮಾ ‘ಜೇಮ್ಸ್‌’ ನಾಳೆ (ಗುರುವಾರ) ಬಿಡುಗಡೆಯಾಗಲಿದೆ.

ಚೇತನ್ ಅವರ ನಿರ್ದೇಶನದ ಈ ಸಿನೆಮಾ ಪುನೀತ್‌ ರಾಜ್‌ಕುಮಾರ್‌ ಅವರ ಹುಟ್ಟು ಹಬ್ಬದ ದಿನದಂದೇ (ಮಾ.17) ತೆರೆಕಾಣಲಿದ್ದು ,  ಕರ್ನಾಟಕದಲ್ಲೇ 400ಕ್ಕೂ ಅಧಿಕ ಏಕಪರದೆ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗುತ್ತಿದೆ.

21 ದೇಶಗಳಲ್ಲಿ ‘ಜೇಮ್ಸ್’ ಬಿಡುಗಡೆ

ಅಪ್ಪು ಆಸೆಯಂತೆ, ಅವರ ಜನ್ಮದಿನದಿಂದೇ ಚಿತ್ರ ಬಿಡುಗಡೆ ಮಾಡುತ್ತಿದ್ದೇವೆ. ಅಮೆರಿಕದಲ್ಲಿ 72 ಕೇಂದ್ರಗಳು, ಕೆನಡಾದಲ್ಲಿ 40 ಕೇಂದ್ರಗಳು ಹಾಗೂ ಯೂರೋಪ್ ದೇಶಗಳು ಸೇರಿದಂತೆ 21 ದೇಶಗಳಲ್ಲಿ ‘ಜೇಮ್ಸ್’ ಬಿಡುಗಡೆಯಾಗುತ್ತಿದೆ. ಮೈಸೂರಿನಲ್ಲಿ ಇರುವ ಐದು ಏಕಪರದೆ ಚಿತ್ರಮಂದಿರಗಳಲ್ಲಿ ಹಾಗೂ ಮೂರು ಮಲ್ಟಿಪ್ಲೆಕ್ಸ್‍ನಲ್ಲಿ ದಿನಕ್ಕೆ 17–18 ಪ್ರದರ್ಶನಗಳ ಟಿಕೆಟ್ ಮಾರಾಟವಾಗಿವೆ.

-ಚೇತನ್ ಕುಮಾರ್, ನಿರ್ದೇಶಕ

ಅಪ್ಪು ಅಭಿಮಾನಿಗಳ ಆಕ್ರೋಶ 

ಮಾ.17ರಂದು ಅಪ್ಪು ಚಿತ್ರ ಜೇಮ್ಸ್ ಚಿತ್ರ ಬಿಡುಗಡೆಯಾಗುತ್ತಿದೆ. ಆದರೆ ಚಿತ್ರ ಬಿಡುಗಡೆಯ ಸಂಭ್ರಮಕ್ಕೆ ಸರಕಾರ ನಿಷೇಧಾಜ್ಞೆ ಹೇರಿ, ನೋಟಿಸ್ ನೀಡಿ ತಣ್ಣೀರೆರಚಿದೆ. ಈ ಬಗ್ಗೆ ಅಪ್ಪು ಅಭಿಮಾನಿಗಳು ಸರಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

4 ತಿಂಗಳಿನಿಂದಲೇ ಕಾರ್ಯಕ್ರಮಗಳನ್ನು ಸಿದ್ಧ ಮಾಡಿಕೊಂಡಿದ್ದೇವೆ. ಕಟೌಟ್, ಮೆರವಣಿಗೆ, ಕ್ಷೀರಾಭಿಷೇಕ, ಕುಣಿತದ ಸಂಭ್ರಮದ ಮೂಲಕ ನಮ್ಮ ಅಪ್ಪುವನ್ನು ಬರಮಾಡಿಕೊಳ್ಳಲು, ಅಭಿಮಾನ ವ್ಯಕ್ತಪಡಿಸಲು ಸಿದ್ಧರಾಗಿದ್ದೆವು. ರಕ್ತದಾನ, ನೇತ್ರದಾನ, ಅನ್ನದಾಸೋಹ, ಆರೋಗ್ಯ ತಪಾಸಣೆ, 46 ಆಟೋ ಚಾಲಕರಿಗೆ ಉಚಿತ ಡ್ರೆಸ್ ವಿತರಣೆ, ಬಡಹೆಂಗರಿಸಗೆ ಸೀರೆ ವಿತರಣೆಯಂತಹ ಸಮಾಜಮುಖಿ ಕಾರ್ಯಕ್ರಮಗಳನ್ನೂ ಹಮ್ಮಿಕೊಂಡಿದ್ದೆವು. ಆದರೆ ಸರಕಾರ ಹಿಜಾಬ್ ನೆಪದಲ್ಲಿ ನಿಷೇಧಾಜ್ಞೆ ಹೇರುವ ಮೂಲಕ, ನಮ್ಮ ಆಸೆಗೆ ತಣ್ಣೀರೆರಚಿದೆ. ಅಭಿಮಾನಿಗಳು ಸಂಭ್ರಮದಲ್ಲಿ ಭಾಗಿಗಳಾಗಬಾರದು ಎಂದು ನೋಟಿಸ್ ನೀಡಿದೆ. ಅಪ್ಪುಗಾಗಿ 4 ದಿನಗಳ ಕಾಲ ನಿಷೇಧಾಜ್ಞೆ ತೆರವುಗೊಳಿಸಬೇಕೆಂದು ಅಭಿಮಾನಿಗಳು ಮನವಿ ಮಾಡಿಕೊಂಡಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News