ಭಾರತವನ್ನು 4 ವಿಕೆಟ್‌ಗಳಿಂದ ಸೋಲಿಸಿದ ಇಂಗ್ಲೆಂಡ್
ವೌಂಟ್ ಮಾಂಗನುಯಿ (ನ್ಯೂಝಿಲ್ಯಾಂಡ್), ಮಾ. 16: ಐಸಿಸಿ ಮಹಿಳೆಯರ ವಿಶ್ವಕಪ್ ಪಂದ್ಯಾವಳಿಯ ಲೀಗ್ ಪಂದ್ಯದಲ್ಲಿ ಬುಧವಾರ ಇಂಗ್ಲೆಂಡ್ ತಂಡವು ಭಾರತವನ್ನು ನಾಲ್ಕು ವಿಕೆಟ್‌ಗಳಿಂದ ಸೋಲಿಸಿದೆ. ಅಸ್ಥಿರ ಪ್ರದರ್ಶನ ನೀಡುತ್ತಿರುವ ಭಾರತವು ಮತ್ತೊಮ್ಮೆ ಬ್ಯಾಟಿಂಗ್ ವೈಫಲ್ಯ ಕಂಡಿತು. ಇದರ ಪ್ರಯೋಜನವನ್ನು ಪಡೆದ ಹಾಲಿ ಚಾಂಪಿಯನ್ ಇಂಗ್ಲೆಂಡ್ ಈ ಪಂದ್ಯಾವಳಿಯ ತನ್ನ ಮೊದಲ ಗೆಲುವನ್ನು ದಾಖಲಿಸಿತು. ಅದು ಈವರೆಗೆ ನಾಲ್ಕು ಪಂದ್ಯಗಳನ್ನು ಆಡಿದ್ದು, ಮೂರರಲ್ಲಿ ಸೋಲನುಭವಿಸಿದೆ.
ಟಾಸ್ ಗೆದ್ದ ಇಂಗ್ಲೆಂಡ್ ಮಹಿಳೆಯರು ಮೊದಲು ಭಾರತೀಯ ಮಹಿಳೆಯರನ್ನು ಬ್ಯಾಟಿಂಗ್‌ಗೆ ಇಳಿಸಿದರು. ಭಾರತಕ್ಕೆ 36.2 ಓವರ್‌ಗಳಲ್ಲಿ 134 ರನ್‌ಗಳನ್ನಷ್ಟೇ ಗಳಿಸಲು ಸಾಧ್ಯವಾಯಿತು. ಬಳಿಕ ಇಂಗ್ಲೆಂಡ್ ಈ ಮೊತ್ತವನ್ನು ಕೇವಲ 31.2 ಓವರ್‌ಗಳಲ್ಲಿ ಬೆನ್ನತ್ತಿತು.
ಹಿಂದಿನ ಪಂದ್ಯದಲ್ಲಿ ಶತಕ ಬಾರಿಸಿದ್ದ ಸ್ಮತಿ ಮಂಧಾನ ಇಂದು ಭಾರತೀಯ ಇನಿಂಗ್ಸ್‌ನ ಗರಿಷ್ಠ ಗಳಿಕೆದಾರರಾದರು. ಅವರು 58 ಎಸೆತಗಳಲ್ಲಿ 35 ರನ್‌ಗಳನ್ನು ಗಳಿಸಿದರು. ಅದೇ ವೇಳೆ, ವಿಕೆಟ್‌ಕೀಪರ್ ಬ್ಯಾಟರ್ ರಿಚಾ ಘೋಷ್ 56 ಎಸೆತಗಳಲ್ಲಿ 33 ರನ್‌ಗಳನ್ನು ಮಾಡಿದರು.
ಇದು ಪಂದ್ಯಾವಳಿಯಲ್ಲಿ ಭಾರತದ ಎರಡನೇ ಸೋಲಾಗಿದೆ. ಭಾರತ ನಾಲ್ಕು ಪಂದ್ಯಗಳನ್ನು ಆಡಿ ಎರಡರಲ್ಲಿ ಗೆದ್ದಿದೆ.
ಭಾರತವು ನಿಯಮಿತವಾಗಿ ವಿಕೆಟ್‌ಗಳನ್ನು ಕಳೆದುಕೊಂಡಿತು. ಈ ಹಂತದಲ್ಲಿ ನಾಯಕಿ ಮಿಥಾಲಿ ರಾಜ್ 5 ಎಸೆತಗಳನ್ನು ಎದುರಿಸಿ ಕೇವಲ ಒಂದು ರನ್‌ಗಳಿಸಿ ನಿರ್ಗಮಿಸಿ ನಿರಾಶೆ ಹುಟ್ಟಿಸಿದರು.
ಇಂಗ್ಲೆಂಡ್‌ನ ಚಾರ್ಲಿ ಡೀನ್ ಯಶಸ್ವಿ ಬೌಲರ್ ಎನಿಸಿದರು. ಅವರು 8.2 ಓವರ್‌ಗಳಲ್ಲಿ 23 ರನ್‌ಗಳನ್ನು ನೀಡಿ 4 ವಿಕೆಟ್‌ಗಳನ್ನು ಉರುಳಿಸಿದರು. ಅವರನ್ನು ಪಂದ್ಯಶ್ರೇಷ್ಠ ಪ್ರಶಸ್ತಿಯಿಂದ ಪುರಸ್ಕರಿಸಲಾಯಿತು.
ಇಂಗ್ಲೆಂಡ್ ಇನಿಂಗ್ಸ್‌ನ ಆರಂಭವೂ ಅನಿಶ್ಚಿತತೆಯಿಂದ ಕೂಡಿತ್ತು. ಅದರ ಇಬ್ಬರೂ ಆರಂಭಿಕರು- ಡಾನಿ ವ್ಯಾಟ್ (1) ಮತ್ತು ಟಾಮಿ ಬೋಮೋಂಟ್ (1)- ಕ್ಷಿಪ್ರ ನಿರ್ಗಮನ ಕಂಡರು.
ಬಳಿಕ ಇಂಗ್ಲೆಂಡ್ ನಾಯಕಿ ಹೆದರ್ ನೈಟ್ (53 ಅಜೇಯ) ಮತ್ತು ನ್ಯಾಟ್ ಸೈವರ್ (46 ಎಸೆತಗಳಲ್ಲಿ 45 ರನ್) ಇನಿಂಗ್ಸ್ ಆಧರಿಸಿದರು. ಅವರು ಅಂತಿಮವಾಗಿ ತಂಡವನ್ನು ವಿಜಯದತ್ತ ಮುನ್ನಡೆಸಿದರು. ಅವರು ಮೂರನೇ ವಿಕೆಟ್‌ಗೆ 65 ರನ್‌ಗಳನ್ನು ಸೇರಿಸಿದರು. ಸೈವರ್ ನಿರ್ಗಮನದ ಬಳಿಕ ಬಂದ ಆ್ಯಮಿ ಜೋನ್ಸ್ (10 ರನ್) ಹೆದರ್ ನೈಟ್ ಜೊತೆಗೆ ನಾಲ್ಕನೇ ವಿಕೆಟ್‌ಗೆ 33 ರನ್‌ಗಳನ್ನು ಕೂಡಿಸಿದರು.
ಅಂತಿಮವಾಗಿ 112 ಎಸೆತಗಳು ಬಾಕಿಯಿರುವಂತೆಯೇ ಇಂಗ್ಲೆಂಡ್ ಗೆಲುವಿನ ತೀರ ಸೇರಿತು.
ಎಂಟು ತಂಡಗಳ ಪಂದ್ಯಾವಳಿಯ ಅಂಕಪಟ್ಟಿಯಲ್ಲಿ, ಎರಡು ವಿಜಯಗಳಿಂದ ನಾಲ್ಕು ಅಂಕಗಳನ್ನು ಪಡೆದಿರುವ ಭಾರತ ಈಗಲೂ ಮೂರನೇ ಸ್ಥಾನದಲ್ಲಿ ಮುಂದುವರಿದಿದೆ. ಇಂಗ್ಲೆಂಡ್ 2 ಅಂಕಗಳೊಂದಿಗೆ 6ನೇ ಸ್ಥಾನದಲ್ಲಿದೆ.