ಆಸ್ಟ್ರೇಲಿಯ ವಿರುದ್ಧದ 2ನೆ ಟೆಸ್ಟ್ ಡ್ರಾ

Update: 2022-03-17 03:17 GMT

ಕರಾಚಿ: ಕರಾಚಿಯ ನ್ಯಾಶನಲ್ ಸ್ಟೇಡಿಯಮ್‌ನಲ್ಲಿ ಪ್ರವಾಸಿ ಆಸ್ಟ್ರೇಲಿಯ ಮತ್ತು ಪಾಕಿಸ್ತಾನ ತಂಡಗಳ ನಡುವೆ ನಡೆದ ಎರಡನೇ ಟೆಸ್ಟ್ ಪಂದ್ಯ ರೋಮಾಂಚಕ ರೀತಿಯಲ್ಲಿ ಡ್ರಾಗೊಂಡಿದೆ. ನಾಯಕ ಬಾಬರ್ ಅಝಮ್ ಮತ್ತು ಮುಹಮ್ಮದ್ ರಿಝ್ವಾನ್‌ರ ಶತಕಗಳ ನೆರವಿನಿಂದ ಪಂದ್ಯವನ್ನು ಡ್ರಾಗೊಳಿಸುವಲ್ಲಿ ಆತಿಥೇಯ ಪಾಕಿಸ್ತಾನ ಯಶಸ್ವಿಯಾಯಿತು.

ಪಂದ್ಯದ ಐದನೇ ಹಾಗೂ ಕೊನೆ ಯ ದಿನವಾದ ಬುಧವಾರ ರಿಝ್ವನ್ 104 ರನ್‌ಗಳೊಂದಿಗೆ ಅಜೇಯರಾಗಿ ಉಳಿದರು. ನಾಯಕ ಬಾಬರ್ ಅಝಮ್ ದ್ವಿಶತಕದಿಂದ ಸ್ವಲ್ಪದರಲ್ಲಿ ವಂಚಿತರಾದರು. ವೈಯಕ್ತಿಕ ಮೊತ್ತ 196ರಲ್ಲಿದ್ದಾಗ ಅವರು ನತಾನ್ ಲಯೋನ್‌ಗೆ ವಿಕೆಟ್ ಒಪ್ಪಿಸಿದರು. ಪಾಕಿಸ್ತಾನವು ತನ್ನ ದ್ವಿತೀಯ ಇನಿಂಗ್ಸ್‌ನಲ್ಲಿ 7 ವಿಕೆಟ್‌ಗಳನ್ನು ಕಳೆದುಕೊಂಡು 443 ರನ್ ಗಳಿಸಿತು. ಅದು ವಿಜಯಕ್ಕೆ 506 ರನ್‌ಗಳನ್ನು ಗಳಿಸಬೇಕಾಗಿತ್ತು.

ಒಂದು ಹಂತದಲ್ಲಿ ಡ್ರಾದತ್ತ ಸಾಗುತ್ತಿದ್ದ ಪಂದ್ಯಕ್ಕೆ, ಅಝಮ್‌ರ ವಿಕೆಟ್ ಪಡೆಯುವ ಮೂಲಕ ನತಾನ್ ಜೀವ ತುಂಬಿದರು. ಕೆಲವೇ ಓವರ್‌ಗಳ ಬಳಿಕ ಅವರು ಸಾಜಿದ್ ಖಾನ್ ವಿಕೆಟ್ ಪಡೆಯುವ ಮೂಲಕ ಆಸ್ಟ್ರೇಲಿಯದ ಆಟಗಾರರ ಹುಮ್ಮಸ್ಸನ್ನು ಹೆಚ್ಚಿಸಿದರು. ಪಂದ್ಯ ಡ್ರಾಗೊಳ್ಳಬೇಕಾದರೂ, ದಿನದ 90 ಓವರ್‌ಗಳು ಮುಗಿಯುವವರೆಗೆ ಪಾಕಿಸ್ತಾನ ಆಡಬೇಕಾಗಿತ್ತು. ಆದರೆ, ಅಂತಿಮವಾಗಿ ಪಂದ್ಯವನ್ನು ಡ್ರಾಗೊಳಿಸುವಲ್ಲಿ ಪಾಕಿಸ್ತಾನ ಯಶಸ್ವಿಯಾಯಿತು.

506 ರನ್‌ಗಳ ಗುರಿಯನ್ನು ಬೆಂಬತ್ತಿದ ಪಾಕಿಸ್ತಾನವು ಕಠಿಣ ಪರಿಶ್ರಮ ಪಟ್ಟಿತು. ಬಾಬರ್ ಮತ್ತು ರಿಝ್ವಿನ್ ಬೃಹತ್ ಭಾಗೀದಾರಿಕೆಯೊಂದನ್ನು ನಿಭಾಯಿಸಿದರು. ಮೊದಲ ಇನಿಂಗ್ಸ್‌ನಲ್ಲಿ ಶತಕ ಬಾರಿಸಿದ್ದ ಉಸ್ಮಾನ್ ಖ್ವಾಜ 44 ರನ್ ಗಳಿಸಿ ಅಜೇಯರಾಗಿ ಉಳಿದರು.

ಆಸ್ಟ್ರೇಲಿಯದ ಪರವಾಗಿ ನತಾನ್ ನಾಲ್ಕು ವಿಕೆಟ್‌ಗಳನ್ನು ಉರುಳಿಸಿದರು ಮತ್ತು ಪ್ಯಾಟ್ ಕಮಿನ್ಸ್ ಎರಡು ವಿಕೆಟ್‌ಗಳನ್ನು ಪಡೆದರು. ಪಾಕಿಸ್ತಾನ ತಂಡದ ನಾಯಕ ಬಾಬರ್ ಅಝಮ್‌ರನ್ನು ಪಂದ್ಯಶ್ರೇಷ್ಠ ಪ್ರಶಸ್ತಿಯಿಂದ ಪುರಸ್ಕರಿಸಲಾಯಿತು.

ಆಸ್ಟ್ರೇಲಿಯವು ತನ್ನ ಮೊದಲ ಇನಿಂಗ್ಸ್ ಅನ್ನು ಸ್ಕೋರ್ 9 ವಿಕೆಟ್‌ಗಳ ನಷ್ಟಕ್ಕೆ 556 ಆಗಿದ್ದಾಗ ಡಿಕ್ಲೇರ್ ಮಾಡಿತ್ತು. ಪಾಕಿಸ್ತಾನವು ತನ್ನ ಮೊದಲ ಇನಿಂಗ್ಸನ್ನು ಕೇವಲ 148 ರನ್‌ಗೆ ಮುಕ್ತಾಯಗೊಳಿಸಿತ್ತು. ಬಳಿಕ ಆಸ್ಟ್ರೇಲಿಯವು ತನ್ನ ದ್ವಿತೀಯ ಇನಿಂಗ್ಸನ್ನು 2 ವಿಕೆಟ್‌ಗಳ ನಷ್ಟಕ್ಕೆ 97ರಲ್ಲಿ ಡಿಕ್ಲೇರ್ ಮಾಡಿ ಪಂದ್ಯ ಗೆಲ್ಲಲು ಪಾಕಿಸ್ತಾನಕ್ಕೆ 506 ರನ್‌ಗಳ ಗುರಿ ನೀಡಿತ್ತು.

ಮೂರು ಪಂದ್ಯಗಳ ಟೆಸ್ಟ್ ಸರಣಿಯ ಮೊದಲ ಪಂದ್ಯವೂ ಡ್ರಾದಲ್ಲಿ ಮುಕ್ತಾಯಗೊಂಡಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News